ADVERTISEMENT

ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಕಶ್ಯಪ್‌

ಪಿಟಿಐ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST
ಪರುಪಳ್ಳಿ ಕಶ್ಯಪ್‌ ಆಟದ ವೈಖರಿ –ಪಿಟಿಐ ಚಿತ್ರ
ಪರುಪಳ್ಳಿ ಕಶ್ಯಪ್‌ ಆಟದ ವೈಖರಿ –ಪಿಟಿಐ ಚಿತ್ರ   

ಒರ್ಲೀನ್ಸ್, ಫ್ರಾನ್ಸ್‌: ಭಾರತದ ಪರುಪಳ್ಳಿ ಕಶ್ಯಪ್ ಹಾಗೂ ಸಮೀರ್ ವರ್ಮಾ ಇಲ್ಲಿ ನಡೆಯುತ್ತಿರುವ ಒರ್ಲೀನ್ಸ್‌ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಐದನೇ ಶ್ರೇಯಾಂಕದ ಕಶ್ಯಪ್‌ 21–11, 21–14ರಲ್ಲಿ ನೇರ ಗೇಮ್‌ಗಳಿಂದ ಐರ್ಲೆಂಡ್‌ನ ಜೋಷುವಾ ಮಾಗಿ ಅವರನ್ನು ಮಣಿಸಿದರು.

ಫೆಬ್ರುವರಿಯಲ್ಲಿ ಕಶ್ಯಪ್‌ ಆಸ್ಟ್ರಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಋತುವಿನಲ್ಲಿ ಅವರ ಎರಡನೇ ಪ್ರಶಸ್ತಿ ಇದಾಗಿದೆ. ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಗೆದ್ದುಕೊಂಡಿರುವ ಕಶ್ಯಪ್‌ ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಮೂರನೇ ಶ್ರೇಯಾಂಕದ ಆಟಗಾರ ರಸ್ಮಸ್‌ ಗೆಮ್ಕೆ ಎದುರು ಪೈಪೋಟಿ ನಡೆಸಲಿದ್ದಾರೆ.

ADVERTISEMENT

ಅಗ್ರ ಶ್ರೇಯಾಂಕದ ಸಮೀರ್‌ 21–16, 21–15ರಲ್ಲಿ ಸ್ಥಳೀಯ ಆಟಗಾರ ಥಾಮಸ್‌ ರೂಕ್ಸೆಲ್‌ ಎದುರು ಗೆದ್ದರು. ಹಿಂದಿನ ಪಂದ್ಯದಲ್ಲಿ ಅವರು 21–16, 21–7ರಲ್ಲಿ ಕ್ರೊವೇಷ್ಯಾದ ಜೊಯೊಮಿರ್‌ ದುರ್ಕಿಜಕ್ ಎದುರು ಜಯಗಳಿಸಿದ್ದರು.

ಪುರುಷರ ಡಬಲ್ಸ್ ವಿಭಾಗದಲ್ಲಿ ಆರನೇ ಶ್ರೇಯಾಂಕದ ಫ್ರಾನ್ಸಿಸ್‌ ಅಲ್ವಿನ್‌ ಮತ್ತು ಕೆ.ನಂದಗೋಪಾಲ್‌ ಜೋಡಿ 15–21, 21–17, 21–17ರಲ್ಲಿ ಪೋಲೆಂಡ್‌ನ ಮೊಲೊಸ್‌ ಬೊಚತ್ ಮತ್ತು ಅದಮ್‌ ಚಾವ್ಲಿನಾ ವಿರುದ್ಧ ಜಯಭೇರಿ ದಾಖಲಿಸಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟಿತು.

ಮುಂದಿನ ಪಂದ್ಯದಲ್ಲಿ ಭಾರತದ ಜೋಡಿ ಜರ್ಮನಿಯ ಮಾರ್ಕ್‌ ಲೂಮ್‌ಫಸ್‌ ಮತ್ತು ಮಾರ್ವಿನ್‌ ಎಮಿಲ್‌ ವಿರುದ್ಧ ಸೆಣಸಲಿದೆ.

ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿದ್ದ ಆರ್‌.ಎಮ್‌.ವಿ ಗುರುಸಾಯಿದತ್‌ 20–22, 21–17, 17–21ರಲ್ಲಿ ಜಾನ್‌ ಒ ಜೋರ್ಗನ್‌ಸನ್ ವಿರುದ್ಧ ಸೋತರು. 2015ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಜೋರ್ಗನ್‌ಸನ್‌ ಕಂಚಿನ ಪದಕ ಗೆದ್ದುಕೊಂಡಿದ್ದರು.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಏಕೈಕ ಸ್ಪರ್ಧಿ ಮುಗ್ದಾ ಅಗ್ರೇಯ್‌ 11–21, 9–21ರಲ್ಲಿ ಇಂಡೊನೇಷ್ಯಾದ ಮರಿಸ್ಕಾ ತುಜುಂಗಾ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.