ADVERTISEMENT

ಬ್ಯಾಡ್ಮಿಂಟನ್‌: ಫೈನಲ್‌ ಪ್ರವೇಶಿಸಿದ ಭಾರತ

ಸೆಮಿಯಲ್ಲಿ ಮುಗ್ಗರಿಸಿದ ಸಿಂಗಪುರ ತಂಡ; ಸೈನಾ, ಕಿದಂಬಿ ಶ್ರೀಕಾಂತ್‌ ಮೋಡಿ

ಪಿಟಿಐ
Published 8 ಏಪ್ರಿಲ್ 2018, 20:25 IST
Last Updated 8 ಏಪ್ರಿಲ್ 2018, 20:25 IST
ಸಿಂಗಪುರ ಎದುರಿನ ಸೆಮಿಫೈನಲ್‌ ಪಂದ್ಯದ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಗೆದ್ದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ಆಟದ ವೈಖರಿ ರಾಯಿಟರ್ಸ್‌ ಚಿತ್ರ
ಸಿಂಗಪುರ ಎದುರಿನ ಸೆಮಿಫೈನಲ್‌ ಪಂದ್ಯದ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಗೆದ್ದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ಆಟದ ವೈಖರಿ ರಾಯಿಟರ್ಸ್‌ ಚಿತ್ರ   

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಭಾರತ ಬ್ಯಾಡ್ಮಿಂಟನ್‌ ತಂಡದ ಕನಸು ಕೈಗೂಡುವ ಸಮಯ ಸನ್ನಿಹಿತವಾಗಿದೆ. ಈ ಹಾದಿಯಲ್ಲಿ ಭಾರತ ಇನ್ನೊಂದೆ ಹೆಜ್ಜೆ ಇಡಬೇಕಿದೆ.

ಕ್ಯಾರರಾ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಮಿಶ್ರ ತಂಡ ವಿಭಾಗದ ಸೆಮಿಫೈನಲ್‌ ಹೋರಾಟದಲ್ಲಿ ಭಾರತ 3–1ರಿಂದ ಸಿಂಗಪುರ ಸವಾಲು ಮೀರಿದೆ. ಈ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟ ಸಾಧನೆ ಮಾಡಿದೆ.

2014ರಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಕೂಟದ ಕಂಚಿನ ಪದಕದ ಹೋರಾಟದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆಗ ಸಿಂಗಪುರ 3–2ರಿಂದ ಗೆದ್ದಿತ್ತು.

ADVERTISEMENT

ಹಿಂದಿನ ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಭಾರತಕ್ಕೆ ಕರ್ನಾಟಕದ ಅಶ್ವಿನಿ ‍ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಗೆಲುವಿನ ಆರಂಭ ನೀಡಿದರು.

ಮಿಶ್ರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ 22–20, 21–18ರ ನೇರ ಗೇಮ್‌ಗಳಿಂದ ಯಾಂಗ್‌ ಕಾಯ್‌ ಟೆರಿ ಹೀ ಮತ್ತು ಜಿಯಾ ಯಿಂಗ್‌ ಕ್ರಿಸ್ಟಲ್‌ ವಾಂಗ್‌ ಅವರನ್ನು ಸೋಲಿಸಿದರು. ಈ ಹೋರಾಟ 42 ನಿಮಿಷ ನಡೆಯಿತು.

(ಸಿಂಗ‍ಪುರದ ಕೀನ್‌ ಯೆವ್‌ ಲೊಹ್‌ ಬಾರಿಸಿದ ಷಟಲ್‌ ಅನ್ನು ಭಾರತದ ಕೆ.ಶ್ರೀಕಾಂತ್ ಹಿಂತಿರುಗಿಸಲು ಪ್ರಯತ್ನಿಸಿದರು ರಾಯಿಟರ್ಸ್‌ ಚಿತ್ರ)

ಮೊದಲ ಗೇಮ್‌ನ ಆರಂಭದಿಂದಲೇ ಉಭಯ ಜೋಡಿಗಳೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಸಮಬಲದ ಪೈಪೋಟಿ ಕಂಡುಬಂತು. ದ್ವಿತೀಯಾರ್ಧದಲ್ಲೂ ಎರಡೂ ಜೋಡಿಯೂ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಹೀಗಾಗಿ 20–20ರ ಸಮಬಲ ಕಂಡುಬಂತು. ಈ ಹಂತದಲ್ಲಿ ಒತ್ತಡ ಮೀರಿ ನಿಂತ ಅಶ್ವಿನಿ ಮತ್ತು ಸಾತ್ವಿಕ್‌ ಸತತ ಎರಡು ಪಾಯಿಂಟ್ಸ್‌ ಕಲೆಹಾಕಿ ಜಯಿಸಿದರು.

ಎರಡನೇ ಗೇಮ್‌ನಲ್ಲೂ ಅಶ್ವಿನಿ ಮತ್ತು ಸಾತ್ವಿಕ್‌ಗೆ ಹೀ ಮತ್ತು ವಾಂಗ್‌ ಪ್ರಬಲ ಪೈಪೋಟಿ ಒಡ್ಡಿದರು. ಆದರೆ ದ್ವಿತೀಯಾರ್ಧದಲ್ಲಿ ಪ್ರಾಬಲ್ಯ ಮೆರೆದ ಭಾರತದ ಜೋಡಿ 21ನೇ ನಿಮಿಷದಲ್ಲಿ ಗೇಮ್‌ ಗೆದ್ದು ಸಂಭ್ರಮಿಸಿತು.

ಪುರುಷರ ಸಿಂಗಲ್ಸ್‌ನಲ್ಲಿ ಅಂಗಳಕ್ಕಿಳಿದಿದ್ದ ಕಿದಂಬಿ ಶ್ರೀಕಾಂತ್‌ 21–17, 21–14ರಲ್ಲಿ ಕೀನ್‌ ಯೆವ್‌ ಲೊಹ್‌ ಅವರನ್ನು ಮಣಿಸಿದರು. ಹೀಗಾಗಿ ಭಾರತ 2–0ರ ಮುನ್ನಡೆ ಗಳಿಸಿತು.

ಅಗ್ರಶ್ರೇಯಾಂಕಿತ ಆಟಗಾರ ಶ್ರೀಕಾಂತ್‌ ಮೊದಲ ಗೇಮ್‌ನ ಶುರುವಿನಲ್ಲಿ ಎದುರಾಳಿಯಿಂದ ಕಠಿಣ ಪೈಪೋಟಿ ಎದುರಿಸಿದರು. ಹೀಗಿದ್ದರೂ ಛಲ ಬಿಡದೆ ಹೋರಾಡಿದ ಅವರು ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲಿ ಶ್ರೀಕಾಂತ್ ಆಟ ರಂಗೇರಿತು. ದೀರ್ಘ ರ‍್ಯಾಲಿಗಳನ್ನು ಆಡಿದ ಅವರು ಆಕರ್ಷಕ ಬ್ಯಾಕ್‌ಹ್ಯಾಂಡ್‌ ಮತ್ತು ‍ಫೋರ್‌ ಹ್ಯಾಂಡ್‌ ಹೊಡೆತಗಳನ್ನು ಬಾರಿಸಿ ಲೊಹ್‌ ಅವರನ್ನು ಕಂಗೆಡಿಸಿದರು.

(ಜಿಯಾ ಮಿನ್‌ ಎದುರಿನ ಪಂದ್ಯ ಗೆದ್ದ ನಂತರ ಭಾರತದ ಸೈನಾ ನೆಹ್ವಾಲ್‌ ಅಭಿಮಾನಿಗಳತ್ತ ಕೈಬೀಸಿದರು)

ಆರಂಭಿಕ ಗೇಮ್‌ನಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿದ್ದ ಶ್ರೀಕಾಂತ್‌, ಎರಡನೆ ಗೇಮ್‌ನಲ್ಲೂ ಎದುರಾಳಿಯ ಸದ್ದಡಗಿಸಿದರು.

ಮನಮೋಹಕ ಸರ್ವ್‌ಗಳನ್ನು ಮಾಡಿದ ಭಾರತದ ಆಟಗಾರ, ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಸಿಂಗಪುರದ ಆಟಗಾರನನ್ನು ತಬ್ಬಿಬ್ಬುಗೊಳಿಸಿ ಪಾಯಿಂಟ್ಸ್‌ ಸಂಗ್ರಹಿಸಿದರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಕೀನ್‌ ಹಲವು ತಪ್ಪುಗಳನ್ನು ಮಾಡಿ ನಿರಾಸೆಗೊಂಡರು.  ಈ ಹೋರಾಟ 37 ನಿಮಿಷ ನಡೆಯಿತು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತಕ್ಕೆ ಆಘಾತ ಎದುರಾಯಿತು. ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಶೆಟ್ಟಿ 21–17, 19–21, 12–21ರಲ್ಲಿ ಯಾಂಗ್‌ ಕಾಯ್‌ ಟೆರಿ ಹೀ ಮತ್ತು ಡ್ಯಾನಿ ಬವಾ ಕ್ರಿಸ್‌ನಾಂಟ ವಿರುದ್ಧ ಸೋತರು.

ಮೊದಲ ಗೇಮ್‌ನಲ್ಲಿ ಅಮೋಘ ಆಟ ಆಡಿದ ಸಾತ್ವಿಕ್‌ ಮತ್ತು ಚಿರಾಗ್‌ 17ನೇ ನಿಮಿಷದಲ್ಲಿ ಎದುರಾಳಿಗಳ ಸವಾಲು ಮೀರಿದರು.

ಇದರಿಂದ ಕಿಂಚಿತ್ತೂ ಎದೆಗುಂದದ ಯಾಂಗ್‌ ಮತ್ತು ಡ್ಯಾನಿ, ಎರಡು ಮತ್ತು ಮೂರನೆ ಗೇಮ್‌ಗಳಲ್ಲಿ ಮೇಲುಗೈ ಸಾಧಿಸಿದರು. ಆದ್ದರಿಂದ ಸಿಂಗಪುರ ತಂಡ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿಕೊಂಡಿತು. ಹೀಗಾಗಿ ಮಹಿಳೆಯರ ಸಿಂಗಲ್ಸ್‌ ಹೋರಾಟ ಕುತೂಹಲ ಕೆರಳಿಸಿತ್ತು. ಈ ವಿಭಾಗದಲ್ಲಿ ಆಡಿದ ಸೈನಾ ನೆಹ್ವಾಲ್‌ 21–8, 21–15ರಲ್ಲಿ ಜಿಯಾ ಮಿನ್‌ ಯಿಯೊ ವಿರುದ್ಧ ಗೆದ್ದು ಭಾರತದ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

ಮೊದಲ ಗೇಮ್‌ನಲ್ಲಿ ನಿರಾಯಾಸವಾಗಿ ಗೆದ್ದ ಸೈನಾ, ಎರಡನೆ ಗೇಮ್‌ನಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದರು. ದ್ವಿತೀಯಾರ್ಧದಲ್ಲಿ ಛಲದಿಂದ ಹೋರಾಡಿದ ಅವರು 38ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.

ಫೈನಲ್‌ನಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ ಸೆಣಸಲಿದೆ. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ 3–0ರಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.