ADVERTISEMENT

ಬ್ರಿಟನ್‌ನಲ್ಲಿ ಆ್ಯಂಡಿ ಮರೆಯ ಜಪ...

`ಈ ಗೆಲುವು ನನ್ನ ಕ್ರೀಡಾ ಜೀವನಕ್ಕೆ ತಿರುವು ನೀಡಲಿದೆ'

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ಲಂಡನ್ (ರಾಯಿಟರ್ಸ್/ಎಎಫ್‌ಪಿ): 77 ವರ್ಷಗಳ ಬಳಿಕ ಬ್ರಿಟನ್‌ಗೆ ವಿಂಬಲ್ಡನ್ ಪುರುಷರ ಸಿಂಗಲ್ಸ್ ಕಿರೀಟ ಗೆದ್ದುಕೊಟ್ಟಿರುವ ಆ್ಯಂಡಿ ಮರ‌್ರೆ ಅವರತ್ತ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದೆ. ಎಲ್ಲೆಲ್ಲೂ ಅವರದ್ದೇ ಜಪ.

ಬ್ರಿಟನ್‌ನ ಮಾಧ್ಯಮಗಳಂತೂ 26 ವರ್ಷ ವಯಸ್ಸಿನ ಮರ‌್ರೆ ಅವರ ಗುಣಗಾನದಲ್ಲಿ ತೊಡಗಿವೆ. `ಆ್ಯಂಡ್ ಆಫ್ ಹೋಪ್ ಆ್ಯಂಡ್ ಗ್ಲೋರಿ' ಎಂದು ಅತಿ ಹೆಚ್ಚು ಪ್ರಸಾರ ಹೊಂದಿರುವ ಟ್ಯಾಬ್ಲಾಯ್ಡ `ಸನ್' ಹೇಳಿದೆ. `77 ವರ್ಷಗಳ ಬಳಿಕ, 15 ಪ್ರಧಾನಿಗಳ ನಂತರ, ಮೂರು ರಾಜಮನೆತನದ ತರುವಾಯ ಬ್ರಿಟಿಷ್ ವ್ಯಕ್ತಿ ವಿಂಬಲ್ಡನ್ ಜಯಿಸಿದ್ದಾರೆ' ಎಂದು ಅದು ಬರೆದಿದೆ. ಮೊದಲ ಐದು ಪುಟಗಳನ್ನು ಮರ‌್ರೆಗಾಗಿ ಮೀಸಲಿರಿಸಿದೆ. ಅಷ್ಟು ಮಾತ್ರವಲ್ಲದೇ, ಕ್ರೀಡಾ ವಿಭಾಗದಲ್ಲಿ ಆರು ಪುಟಗಳಲ್ಲಿ ಮರ‌್ರೆ ಅವರ ಐತಿಹಾಸಿಕ ಸಾಧನೆಯನ್ನು ವರ್ಣಿಸಿದೆ. ಜೊತೆಗೆ `ಬಾರ್ನ್ ಟು ವಿನ್' ಎಂಬ ಪುರವಣಿಯನ್ನೂ ಹೊರತಂದಿದೆ.

`ದಿ ಹಿಸ್ಟರಿ ಬಾಯ್' ಎಂಬ ತಲೆಬರಹದೊಂದಿಗೆ `ಟೈಮ್ಸ' ಎರಡನೇ ರ‌್ಯಾಂಕ್‌ನ ಮರ‌್ರೆಯ ಸಾಧನೆಗಳನ್ನು ವಿವರಿಸಿದೆ. ಈ ಪತ್ರಿಕೆಯು `ಮರ‌್ರೆ ಮೇನಿಯಾ'ಕ್ಕೆ ಮೊದಲ ಎಂಟು ಪುಟ ಹಾಗೂ ಕ್ರೀಡಾ ವಿಭಾಗದಲ್ಲಿ ಎಂಟು ಪುಟಗಳನ್ನು ಮೀಸಲಿರಿಸಿದೆ.
`ಡೈಲಿ ಟೆಲಿಗ್ರಾಫ್'ನಲ್ಲಿ ವಿಂಬಲ್ಡನ್‌ಗೆ ಸಂಬಂಧಿಸಿದ 12 ಪುಟಗಳ ವಿಶೇಷವಿದೆ. `ಡೇಲಿ ಮೇಲ್' ಟ್ಯಾಬ್ಲಾಯ್ಡ ಕೂಡ 12 ಪುಟಗಳ ಪುರವಣಿ ಹೊರತಂದಿದೆ. `ಸೆವೆಂತ್ ಹೆವನ್' ಎಂಬ ತಲೆಬರಹ ಹೊತ್ತು ಬಂದಿರುವ `ಮಿರರ್' ಮರ‌್ರೆ ಸಾಧನೆಗೆ ಸರಿಸಾಟಿ ಇಲ್ಲ ಎಂದು ಬಣ್ಣಿಸಿದೆ.

ಪ್ರಧಾನಿ ಡೇವಿಡ್ ಕೆಮರಾನ್, ಪ್ರಸಿದ್ಧ ಸಿನಿಮಾ ತಾರೆಯರು, ಕ್ರೀಡಾಪಟುಗಳು ಆ್ಯಂಡಿ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಕೆಮರಾನ್ ಈ ಪಂದ್ಯವನ್ನು `ರಾಯಲ್ ಬಾಕ್ಸ್'ನಲ್ಲಿ ಕುಳಿತು ವೀಕ್ಷಿಸಿದ್ದರು. ಖ್ಯಾತ ಫುಟ್‌ಬಾಲ್ ಆಟಗಾರರಾದ ಡೇವಿಡ್ ಬೆಕಂ, ವೇಯ್ನ ರೂನಿ ಕೂಡ ಇದ್ದರು.

ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನಲ್ಲಿ ಭಾನುವಾರ ಮರ‌್ರೆ, ವಿಶ್ವದ ಅಗ್ರ ರ‌್ಯಾಂಕ್‌ನ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಆಘಾತ ನೀಡಿ ವಿಂಬ್ಡಲನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮ್ದ್ದಿದರು. ಸೆಂಟ್ರಲ್ ಕೋರ್ಟ್‌ನಲ್ಲಿ ನಡೆದ ಫೈನಲ್‌ನಲ್ಲಿ ಆತಿಥೇಯ ದೇಶದ ಮರ‌್ರೆ 6-4, 7-5, 6-4ರಲ್ಲಿ ಜೊಕೊವಿಚ್ ಅವರನ್ನು ಮಣಿಸಿದ್ದರು.
ಈ ಮೂಲಕ ಅವರು ದೇಶದ ಹೀರೊ ಆಗಿದ್ದಾರೆ. 77 ವರ್ಷಗಳ ಬಳಿಕ ಈ ಸಾಧನೆ ಮೂಡಿಬಂದಿದೆ. ಈ ಹಿಂದೆ 1936ರಲ್ಲಿ ಬ್ರಿಟನ್ ಫ್ರೆಡ್ ಪೆರ‌್ರಿ ಕೊನೆಯ ಬಾರಿ ಇಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.

`ಈ ಗೆಲುವು ನನ್ನ ಕ್ರೀಡಾ ಜೀವನಕ್ಕೆ ಹೊಸ ತಿರುವು ನೀಡಲಿದೆ. ವೃತ್ತಿ ಜೀವನವನ್ನು ಮುಂದೆ ಹಂತಕ್ಕೆ ತೆಗೆದುಕೊಂಡು ಹೋಗಲು ವೇದಿಕೆಯಾಗಿದೆ' ಎಂದು ಮರ‌್ರೆ ಸೋಮವಾರ ಪ್ರತಿಕ್ರಿಯಿಸಿದ್ದಾರೆ.ಜೊಕೊವಿಚ್ ಹಾಗೂ ಮರ‌್ರೆ ವಯಸ್ಸಿನ ನಡುವೆ ಕೇವಲ ಏಳು ದಿನಗಳ ಅಂತರ. ಹಿಂದಿನ ನಾಲ್ಕು ಗ್ರ್ಯಾನ್‌ಸ್ಲಾಮ್ ಫೈನಲ್‌ಗಳಲ್ಲಿ ಇವರಿಬ್ಬರು ಮೂರರಲ್ಲಿ ಪೈಪೋಟಿ ನಡೆಸಿದ್ದಾರೆ. ಇದು ವಿಶ್ವ ಟೆನಿಸ್ ಮೇಲೆ ಇವರಿಬ್ಬರು ಸಾಧಿಸಿರುವ ಪಾರಮ್ಯಕ್ಕೆ ಸಾಕ್ಷಿ. ಈ ಪಾರಮ್ಯ ಮತ್ತಷ್ಟು ವರ್ಷ ಮುಂದುವರಿಯುವ ಸಾಧ್ಯತೆ ಇದೆ. ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಸ್ಪೇನ್‌ನ ರಫೆಲ್ ನಡಾಲ್ ವಿಂಬಲ್ಡನ್ ಟೂರ್ನಿಯ ಆರಂಭದಲ್ಲೇ ನಿರ್ಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.