ADVERTISEMENT

ಭಾರತಕ್ಕೆ ಇಂಗ್ಲೆಂಡ್ ಸವಾಲು

ಪಿಟಿಐ
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
ಭಾರತ ಮಹಿಳೆಯರ ತಂಡ ಜಯದ ವಿಶ್ವಾಸದಲ್ಲಿದೆ.
ಭಾರತ ಮಹಿಳೆಯರ ತಂಡ ಜಯದ ವಿಶ್ವಾಸದಲ್ಲಿದೆ.   

ಮುಂಬೈ: ಆಸ್ಟ್ರೇಲಿಯಾ ತಂಡದ ಎದುರಿನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ಮಹಿಳೆಯರ ತಂಡ ಈಗ ಜಯದ ಹಾದಿಗೆ ಮರಳುವ ತವಕದಲ್ಲಿದೆ.

ಭಾನುವಾರದ ತ್ರಿಕೋನ ಟ್ವೆಂಟಿ 20 ಸರಣಿಯ ತನ್ನ ಎರಡನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಬಳಗ ಇಂಗ್ಲೆಂಡ್ ಸವಾಲು ಎದುರಿಸಲಿದೆ.

ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಸೋಲುಣಿಸಿರುವ ಇಂಗ್ಲೆಂಡ್ ತಂಡವನ್ನು ಮಣಿಸುವುದು ಭಾರತದ ಪಾಲಿಗೆ ದೊಡ್ಡ ಸವಾಲು ಎನಿಸಿದೆ. ಈ ತಂಡವನ್ನು ಕಟ್ಟಿಹಾಕಲು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಳ್ಳಬೇಕಿದೆ. ಕ್ಷೇತ್ರರಕ್ಷಣೆ ವಿಭಾಗದಲ್ಲೂ ಭಾರತ ಚುರುಕಿನಿಂದ ಆಡಬೇಕಿದೆ.

ADVERTISEMENT

ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ಬೇಗನೆ ವಿಕೆಟ್ ಒಪ್ಪಿಸಿದ್ದರು. ಸ್ಮೃತಿ ಮಂದಾನ ಏಕೈಕ ಹೋರಾಟ ನಡೆಸಿದ್ದರು. ನಾಯಕಿ ಹರ್ಮನ್‌ಪ್ರೀತ್‌, ಕರ್ನಾಟಕದ ವೇದಾ ಕೃಷ್ಣಮೂರ್ತಿ ಕೂಡ ನಿರಂತರವಾಗಿ ಆಡುತ್ತಿಲ್ಲ. ಭರವಸೆ ಮೂಡಿಸಿದ್ದ ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಇನ್ನೂ ಫಾರ್ಮ್‌ ಕಂಡುಕೊಂಡು ಆಡಬೇಕಿದೆ.

ಬೌಲಿಂಗ್ ವಿಭಾಗ ಇನ್ನಷ್ಟು ಸೊರಗಿದೆ. ಅನುಭವಿ ಜೂಲನ್ ಗೋಸ್ವಾಮಿ ಅವರನ್ನು ತಂಡ ನೆಚ್ಚಿಕೊಂಡಿದೆ. ತವರಿನಲ್ಲಿ ಭಾರತದ ಸ್ಪಿನ್ ಬೌಲರ್‌ಗಳಿಗೆ ವಿಕೆಟ್ ಬೀಳುತ್ತಿಲ್ಲ. ಈ ನಡುವೆ ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಗಾಯಗೊಂಡಿದ್ದಾರೆ. ಶಿಖಾ ಪಾಂಡೆ ಕೂಡ ಫಾರ್ಮ್‌ನಲ್ಲಿ ಇಲ್ಲ.

ದಕ್ಷಣ ಆಫ್ರಿಕಾ ಎದುರಿನ ಸರಣಿಯಲ್ಲಿ ಮಿಂಚಿದ್ದ ಭಾರತದ ಆಟಗಾರ್ತಿಯರು ಈಗ ಅದೇ ಆಟವನ್ನು ಮುಂದುರಿಸುವ ಯೋಜನೆ ರೂಪಿಸಿದ್ದಾರೆ. ಮಿಥಾಲಿ ಹಾಗೂ ಹರ್ಮನ್‌ಪ್ರೀತ್ ಮೇಲಿನ ಕ್ರಮಾಂಕದಲ್ಲಿ ರನ್ ದಾಖಲಿಸಿದರೆ ಉಳಿದ ಬ್ಯಾಟ್ಸ್‌ವುಮನ್‌ಗಳ ಹಾದಿ ಸುಲಭವಾಗಲಿದೆ. ಅನುಜಾ ಪಾಟೀಲ್‌ ಹಿಂದಿನ ಪಂದ್ಯಗಳಲ್ಲಿ ಕೊನೆ ಕ್ರಮಾಂಕದಲ್ಲಿ ಉತ್ತಮವಾಗಿ ಆಡಿದ್ದರು. ಅವರಿಗೆ ಮೇಲಿನ ಕ್ರಮಾಂಕಕ್ಕೆ ಬಡ್ತಿ ನೀಡಿದರೆ ಭಾರತ ತಂಡಕ್ಕೆ ಲಾಭ ಆಗಲಿದೆ.

ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ರನ್ ಕಲೆಹಾಕಿದೆ. ಆದ್ದರಿಂದ ಭಾರತದ ವೇಗದ ಬೌಲರ್‌ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ್ದ ನತಾಲಿ ಸೀವರ್‌ (68, 29ಕ್ಕೆ2) ಅವರನ್ನು ಭಾರತ ತಡೆಯಬೇಕಿದೆ. ಟಾಮಿ ಬೆಮಂಟ್ ಕೂಡ ಈ ತಂಡದ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿರುವ ಸ್ಪಿನ್‌ ಹಾಗೂ ವೇಗದ ಬೌಲರ್‌ಗಳು ಕೂಡ ಪರಿಣಾಮಕಾರಿ ಸಾಮರ್ಥ್ಯ ತೋರಿದ್ದಾರೆ.

ತಂಡ ಇಂತಿದೆ: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ, ಮಿಥಾಲಿ ರಾಜ್‌, ವೇದಾ ಕೃಷ್ಣಮೂರ್ತಿ, ಜೆಮಿಮಾ ರಾಡ್ರಿಗಸ್‌, ಅನುಜಾ ಪಾಟೀಲ್‌, ದೀಪ್ತಿ ಶರ್ಮಾ, ತನಿಯಾ ಭಾಟಿಯಾ, ಪೂನಮ್ ಯಾದವ್‌, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕಾರ್‌, ರುಮೇಲಿ ಧರ್, ಮೋನಾ ಮೆಷ್ರಮ್‌, ರಾಧಾ ಯಾದವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.