ADVERTISEMENT

ಭಾರತಕ್ಕೆ ಜರ್ಮನಿ ಸವಾಲು

ಹಾಕಿ ವಿಶ್ವ ಲೀಗ್‌ ಫೈನಲ್‌; ರೂಪಿಂದರ್‌, ಆಕಾಶ್‌ದೀಪ್ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 20:38 IST
Last Updated 3 ಡಿಸೆಂಬರ್ 2017, 20:38 IST
ಭುವನೇಶ್ವರದಲ್ಲಿ ಭಾನುವಾರ ಭಾರತ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಪಿಟಿಐ ಚಿತ್ರ
ಭುವನೇಶ್ವರದಲ್ಲಿ ಭಾನುವಾರ ಭಾರತ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಪಿಟಿಐ ಚಿತ್ರ   

ಭುವನೇಶ್ವರ: ಭಾರತ ತಂಡವು ವಿಶ್ವ ಹಾಕಿ ಲೀಗ್‌ ಫೈನಲ್‌ನ ಬಿ ಗುಂಪಿನಲ್ಲಿ ಸೋಮವಾರ ಜರ್ಮನಿ ತಂಡದ ಸವಾಲು ಎದುರಿಸಲಿದೆ.

ಮೊದಲ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಡ್ರಾ ಮಾಡಿಕೊಂಡಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋತಿತ್ತು. ಅದರಿಂದಾಗಿ ಗುಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಧಲ್ಲಿದೆ.

ಶನಿವಾರದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಅವಕಾಶ ಇತ್ತು. ಆದರೆ ಭಾರತ ತಂಡವು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ.   ಟೂರ್ನಿಯಲ್ಲಿ ಇದುವರೆಗೂ ಕೇವಲ ಒಂದು ಪಾಯಿಂಟ್ ಪಡೆದುಕೊಂಡಿರುವ ಭಾರತ ತಂಡ ‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ.

ADVERTISEMENT

ಉತ್ತಮ ಆಟವಾಡಿರುವ ಜರ್ಮನಿ ಇದೇ ಗುಂಪಿನಲ್ಲಿ ನಾಲ್ಕು ಪಾಯಿಂಟ್ಸ್ ಪಡೆದು ಅಗ್ರಸ್ಥಾನದಲ್ಲಿದೆ. ಆಡಿದ ಎರಡು ಪಂದ್ಯಗಳಲ್ಲಿ ಈ ತಂಡ ಒಂದರಲ್ಲಿ ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಂಡಿದೆ.

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಜರ್ಮನಿ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಈ ಪಂದ್ಯ ಸೋತರೆ ಮುಂದಿನ ಪಂದ್ಯದಲ್ಲಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ಎದುರಿಸಬೇಕಿದೆ.

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಭಾರತ ಉತ್ತಮ ಪೈಪೋಟಿ ನಡೆಸಿತ್ತು. ಮನ್‌ದೀಪ್ ಸಿಂಗ್ ಅವರ ಏಕೈಕ ಗೋಲಿನಿಂದಾಗಿ ಚಾಂಪಿಯನ್ ತಂಡದ ಎದುರು ಸೋಲುವುದನ್ನು ತಪ್ಪಿಸಿಕೊಂಡಿತ್ತು. ಇದೇ ಆಟವನ್ನು ಇಂಗ್ಲೆಂಡ್ ಎದುರು ಮುಂದುವರಿಸಲಿಲ್ಲ. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಭಾರತ ಸಾಕಷ್ಟು ತಪ್ಪುಗಳನ್ನು ಎಸಗಿತು. ಎರಡು ಗೋಲುಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿತು. ಕೊನೆಯ ಎರಡು ಕ್ವಾರ್ಟರ್‌ಗಳಲ್ಲಿ ಮರುಹೋರಾಟ ನಡೆಸಿ 2–2ರಲ್ಲಿ ಡ್ರಾ ಮಾಡಿಕೊಂಡಿತ್ತು. ಆದರೆ ಅಂತಿಮ ನಿಮಿಷಗಳಲ್ಲಿ ರಕ್ಷಣಾಪಡೆಯ ಆಟಗಾರರು ಜವಾಬ್ದಾರಿ ನಿರ್ವಹಿಸಲಿಲ್ಲ.

ಇಂಗ್ಲೆಂಡ್ ತಂಡದ ಫಾರ್ವರ್ಡ್‌ ಆಟಗಾರ ಸ್ಯಾಮ್‌ ವಾರ್ಡ್‌ ಎರಡು ಗೋಲು ದಾಖಲಿಸಿ ಭಾರತದ ಯೋಜನೆಯನ್ನು ತಲೆಕೆಳಗಾಗಿಸಿದರು. ರೂಪಿಂದರ್‌ ಪಾಲ್ ಸಿಂಗ್ ಹಾಗೂ ಆಕಾಶ್‌ದೀಪ್‌ ಸಿಂಗ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಗೋಲು ದಾಖಲಿಸಿದ್ದ ಅವರು ಜರ್ಮನಿ ಎದುರು ಭಾರತಕ್ಕೆ ಉತ್ತಮ ಆರಂಭ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿರುವ ಜರ್ಮನಿ ತಂಡ ಕೂಡ ಪ್ರಬಲವಾಗಿದೆ. ಯಾವುದೇ ಸಂದರ್ಭದಲ್ಲಿಯೂ ಪುಟಿದೇಳುವ ಗುಣವನ್ನು ಈ ತಂಡ ಹೊಂದಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಕೂಡ ಭಾರತಕ್ಕಿಂತ ಒಂದು ಸ್ಥಾನ ಮೇಲಿದೆ. ಜರ್ಮನಿ ಐದನೇ ಸ್ಥಾನದಲ್ಲಿದ್ದರೆ, ಭಾರತ ಆರನೇ ಸ್ಥಾನ ಹೊಂದಿದೆ.

‘ಭಾರತ ತಂಡ ಸ್ಥಿರವಾಗಿ ಆಡುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ. ಇಲ್ಲಿ ಪದಕ ಜಯಿಸಬೇಕಾದರೆ ಜರ್ಮನಿ ವಿರುದ್ಧ ಗೆದ್ದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಹಾದಿ ಕಠಿಣವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಉತ್ತಮವಾಗಿ ಆಡಿದ್ದ ತಂಡದ ಗುಣಮಟ್ಟದಲ್ಲಿ ಇದ್ದಕ್ಕಿದ್ದಂತೆ ಕುಸಿತ ಕಂಡಿದೆ’ ಎಂದು ಕೋಚ್‌ ಶೊರ್ಡ್ ಮ್ಯಾರಿಜ್ ಹೇಳಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಡಲಿವೆ.

ಇಂದಿನ ಪಂದ್ಯಗಳು

‘ಬಿ’ ಗುಂಪು

ಆಸ್ಟ್ರೇಲಿಯಾ–ಇಂಗ್ಲೆಂಡ್‌

ಸಮಯ: ಸಂಜೆ 5.30

ಭಾರತ–ಜರ್ಮನಿ

ಸಮಯ: ಸಂಜೆ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.