ADVERTISEMENT

ಭಾರತಕ್ಕೆ ಸರಣಿ ಗೆಲುವಿನ ಮುನ್ನಡೆ

ಕ್ರಿಕೆಟ್: ಮೆನಾರಿಯ ಮೊನಚಿನ ದಾಳಿ, ಮಿಂಚಿದ ಮನ್‌ದೀಪ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ವಿಶಾಖ ಪಟ್ಟಣ (ಪಿಟಿಐ): ಅಶೋಕ್‌ ಮೆನಾರಿಯ ಆಲ್‌ರೌಂಡ್‌ ಆಟದ ನೆರವಿನಿಂದ ಭಾರತ ‘ಎ’ ತಂಡ ನ್ಯೂಜಿಲೆಂಡ್‌ ‘ಎ’ ಎದುರಿನ ಎರಡನೆ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ ಆತಿಥೇಯರು ಮೂರು ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಸರಣಿ ಗೆಲುವಿನ ಮುನ್ನಡೆ ಪಡೆದರು.

ವೈ.ಎಸ್‌. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌್ ಆಯ್ದುಕೊಂಡು ಭಾರತ ಎದುರಾಳಿ ತಂಡವನ್ನು 216 ರನ್‌ಗೆ ಕಟ್ಟಿ ಹಾಕಿತು. ಈ ಗುರಿಯನ್ನು ಉನ್ಮುಕ್ತ್‌ ಚಾಂದ್‌ ಪಡೆ 38.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ತಲುಪಿತು.

ಎರಡನೇ ಓವರ್‌ನಲ್ಲಿಯೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿ ತಂಡ ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಆದರೆ, ಚಾರ್ಲ್‌ ಚೊಕೊಪ್‌ (80, 103ಎಸೆತ, 9ಬೌಂಡರಿ) ಆಸರೆಯಾದರು. ಆದರೆ ಕೊನೆಯ ಸರದಿಯ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ತಂಡ ಕೊನೆಯ 21 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡ ಕಾರಣ ಅಲ್ಪ ಮೊತ್ತಕ್ಕೆ ಕುಸಿತ ಅನುಭವಿಸಬೇಕಾಯಿತು. ರಾಜಸ್ತಾನದ  ಆಲ್‌ರೌಂಡರ್‌ ಮೆನಾರಿಯ (10–0–38–5) ಇದಕ್ಕೆ ಕಾರಣರಾದರು.

ಗುರಿಯನ್ನು ಮುಟ್ಟುವ ಹಾದಿಯಲ್ಲಿ ಆತಿಥೇಯರು ಆರಂಭದಲ್ಲಿ ಕೊಂಚ ಪರದಾಡಿದರು. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕರ್ನಾಟಕದ ರಾಬಿನ್‌ ಉತ್ತಪ್ಪ (12) ಬೇಗನೇ ವಿಕೆಟ್‌ ಒಪ್ಪಿಸಿದರು. ಆದರೆ, ನಾಯಕ ಚಾಂದ್‌ (59, 71ಎಸೆತ, 7ಬೌಂಡರಿ, 2 ಸಿಕ್ಸರ್‌) ಮತ್ತು ಮನ್‌ದೀಪ್‌ ಸಿಂಗ್‌ (59, 69ಎಸೆತ, 9 ಬೌಂಡರಿ, 1 ಸಿಕ್ಸರ್‌) ರನ್‌ ಕಲೆ ಹಾಕಿ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಗುರುವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು:  ನ್ಯೂಜಿಲೆಂಡ್‌ ‘ಎ’ 47.2 ಓವರ್‌ಗಳಲ್ಲಿ 216. (ಲೂಕ್‌ ರಾಂಚಿ 34, ಚಾರ್ಲ್‌ ಚೊಕೊಪ್‌ 80; ಬಸಂತ್‌ ಮೊಹಾಂತಿ 32ಕ್ಕೆ1, ಧವಳ್ ಕುಲಕರ್ಣಿ 41ಕ್ಕೆ2, ಅಶೋಕ್‌ ಮೆನಾರಿಯ 38ಕ್ಕೆ5).

ಭಾರತ ‘ಎ’ 38.5 ಓವರ್‌ಗಳಲ್ಲಿ 4  ವಿಕೆಟ್‌ಗೆ 217. (ರಾಬಿನ್‌ ಉತ್ತಪ್ಪ 12, ಉನ್ಮುಕ್ತ್‌ ಚಾಂದ್‌ 59, ಮನ್‌ದೀಪ್‌ ಸಿಂಗ್‌ 59, ಕೇದಾರ್‌ ಜಾಧವ್‌ ಔಟಾಗದೆ 30, ಅಶೋಕ್‌ ಮೆನಾರಿಯ ಔಟಾಗದೆ 37; ಮಾರ್ಕ್‌ ಗಿಲಿಪ್ಸೆಯಿ 62ಕ್ಕೆ2). ಫಲಿತಾಂಶ: ಭಾರತಕ್ಕೆ 6 ವಿಕೆಟ್‌ ಗೆಲುವು ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಸರಣಿ ಗೆಲುವಿನ ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.