ADVERTISEMENT

ಭಾರತದ ಮೊದಲ ಎದುರಾಳಿ ಚೀನಾ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST

ದೋಹಾ (ಪಿಟಿಐ): ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿರುವ ಭಾರತ ತಂಡ ಇಲ್ಲಿ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಎರಡನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಗುರುವಾರ ಚೀನಾ ಎದುರು ಪೈಪೋಟಿ ನಡೆಸಲಿದೆ.

ಮೆಲ್ಬರ್ನ್‌ನಲ್ಲಿ ಇತ್ತೀಚಿಗೆ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸರ್ದಾರ್ ಸಿಂಗ್ ನೇತೃತ್ವದ ಭಾರತ ಇಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ವಿಶ್ವಾಸ ಹೊಂದಿದೆ. ಒಲಿಂಪಿಕ್ಸ್‌ನಲ್ಲಿ ಭಾರಿ ಮುಖಭಂಗ ಅನುಭವಿಸಿದ್ದ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು.  ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಸೋಲು ಕಂಡಿತ್ತು.
ಆರು ರಾಷ್ಟ್ರಗಳು ಪಾಲ್ಗೊಳ್ಳಲಿರುವ ಈ ಟೂರ್ನಿಯಲ್ಲಿ ಪಾಕ್ ವಿರುದ್ಧದ ಸೋಲಿಗೆ `ಮುಯ್ಯಿ' ತೀರಿಸಲು ಭಾರತಕ್ಕೆ ಈಗ ಅವಕಾಶ ಲಭಿಸಿದೆ.

ಪಾಕ್ ನೆಚ್ಚಿನ ತಂಡ: `ಚಾಂಪಿಯ ನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ ಗೆದ್ದ ಪಾಕಿಸ್ತಾನ ತಂಡ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ' ಭಾರತ ತಂಡದ ತರಬೇತುದಾರ ಮೈಕಲ್ ನಾಬ್ಸ್ ಹೇಳಿದ್ದಾರೆ. `ಭಾರತಕ್ಕೆ ಪ್ರಬಲ ಸವಾಲಾಗಿರುವುದು ಪಾಕಿಸ್ತಾನ ತಂಡ ಮಾತ್ರ. ಆದ್ದರಿಂದ ಈ ತಂಡವೇ ಪ್ರಶಸ್ತಿ ಗೆಲ್ಲುವ `ಫೇವರಿಟ್' ಎಂದೆನಿಸುತ್ತದೆ. ಆದರೂ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ' ಎಂದು ನಾಬ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.