ADVERTISEMENT

ಭಾರತ- ಇಂಗ್ಲೆಂಡ್ ಫೈನಲ್ ನಾಳೆ

ಚಾಂಪಿಯನ್ಸ್ ಟ್ರೋಫಿ: ಆತ್ಮವಿಶ್ವಾಸದಲ್ಲಿ ದೋನಿ ಬಳಗ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ಬರ್ಮಿಂಗ್‌ಹ್ಯಾಂ: `ಇಂಗ್ಲೆಂಡ್ ಪ್ರಬಲ ತಂಡ. ಇತ್ತೀಚಿನ ಕೆಲ ವರ್ಷಗಳಲ್ಲಿ ಆ ತಂಡದ ಎದುರು ತುಂಬಾ ಪಂದ್ಯಗಳನ್ನು ಆಡಿದ್ದೇವೆ. ಆದ್ದರಿಂದ ಎದುರಾಳಿಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ' -ಗುರುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಈ ಮೇಲಿನಂತೆ ಹೇಳಿದ್ದರು.

ಬರ್ಮಿಂಗ್‌ಹ್ಯಾಂನಲ್ಲಿ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ದೋನಿ ಬಳಗ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿರುವ ಭಾರತ ಅತಿಯಾದ ಆತ್ಮವಿಶ್ವಾಸದಲ್ಲಿದೆ. ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ತವರಿನಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ಜಯ ಸಾಧಿಸಿತ್ತು. ಆದ್ದರಿಂದ ದೋನಿ ಬಳಗ ಗೆಲ್ಲುವ ನೆಚ್ಚಿನ ತಂಡ ಎಂಬ `ಹಣೆಪಟ್ಟಿ' ಹೊತ್ತುಕೊಂಡು ಭಾನುವಾರ ಕಣಕ್ಕಿಳಿಯಲಿದೆ. ಆದರೆ ತನ್ನದೇ ನೆಲದಲ್ಲಿ ಆಡುತ್ತಿರುವುದು ಅಲಸ್ಟೇರ್ ಕುಕ್ ಬಳಗಕ್ಕೆ ಸಕಾರಾತ್ಮಕ ಅಂಶವಾಗಿ ಪರಿಣಮಿಸಿದೆ.

ತಂಡ ಪ್ರಯತ್ನಕ್ಕೆ ದೊರೆತ ಜಯ: `ಇದೊಂದು ಸುಂದರ ಗೆಲುವು. ಸಂಘಟಿತ ಪ್ರಯತ್ನ ನೀಡಿದ ಕಾರಣ ಈ ಜಯ ಸಾಧ್ಯವಾಯಿತು. ಮಹತ್ವದ ಟಾಸ್ ಗೆದ್ದದ್ದು ನೆರವು ನೀಡಿತು' ಎಂದು ದೋನಿ ಲಂಕಾ ವಿರುದ್ಧದ ಪಂದ್ಯದ ಬಳಿಕ ಹೇಳಿದ್ದರು. `ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ತಿಲಕರತ್ನೆ ದಿಲ್ಶಾನ್ ಗಾಯಗೊಂಡು ಮರಳಿದ್ದು ಲಂಕಾಕ್ಕೆ ಹಿನ್ನಡೆ ಉಂಟುಮಾಡಿತು. ನಾವು ಅದರ ಲಾಭವನ್ನು ಚೆನ್ನಾಗಿಯೇ ಎತ್ತಿಕೊಂಡೆವು' ಎಂದು ನುಡಿದಿದ್ದಾರೆ.

`ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದ ಇಶಾಂತ್ ಶರ್ಮ ತಮ್ಮ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಭಾರತದ ವೇಗದ ಬೌಲಿಂಗ್ ವಿಭಾಗದ `ನಾಯಕ' ಎಂದು ಕರೆಸಿಕೊಳ್ಳಲು ಬಯಸುವುದಿಲ್ಲ ಎಂದಿರುವ ಇಶಾಂತ್, `ಸಂಘಟಿತ ಆಟ ತೋರಿದ ಕಾರಣ ಫೈನಲ್ ಪ್ರವೇಶಿಸಲು ಸಾಧ್ಯವಾಯಿತು' ಎಂದು ಹೇಳಿದ್ದಾರೆ. ದೆಹಲಿಯ ವೇಗಿ 33 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು.

`ಮತ್ತೆ ಲಯ ಕಂಡುಕೊಳ್ಳಲು ಸಾಧ್ಯವಾದದ್ದು ಸಂತಸ ಉಂಟುಮಾಡಿದೆ. ಇಲ್ಲಿನ ಪಿಚ್ ಕೂಡಾ ನನಗೆ ನೆರವು ನೀಡಿತು. ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್ ಚೆನ್ನಾಗಿ ಬೌಲ್ ಮಾಡಿದರು' ಎಂದು ಇಶಾಂತ್ ತಿಳಿಸಿದ್ದಾರೆ. ಕಪ್ ಗೆಲ್ಲುವ ವಿಶ್ವಾಸದಲ್ಲಿ ಟ್ರಾಟ್ (ಎಎಫ್‌ಪಿ ವರದಿ): ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆದ್ದು ಋತುವಿನ ಇನ್ನುಳಿದ ಅವಧಿಗೆ ಆತ್ಮವಿಶ್ವಾಸದ ಹೆಚ್ಚಿಸಿಕೊಳ್ಳುವುದು ಗುರಿ ಎಂದು ಇಂಗ್ಲೆಂಡ್ ತಂಡದ ಜೊನಾಥನ್ ಟ್ರಾಟ್ ಹೇಳಿದ್ದಾರೆ.

`ಟೂರ್ನಿಯಲ್ಲಿ ಇಂಗ್ಲೆಂಡ್ ಇದುವರೆಗೆ ಅದ್ಭುತ ಪಯಣ ನಡೆಸಿದೆ. ಲಂಕಾ ವಿರುದ್ಧದ ಸೋಲಿನ ಬಳಿಕ ನಾವು ಪುಟಿದೆದ್ದು ನಿಲ್ಲಲು ಯಶಸ್ವಿಯಾದೆವು' ಎಂದು ಅವರು ಶುಕ್ರವಾರ ನುಡಿದಿದ್ದಾರೆ. `ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಗೆಲುವು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿತು. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೇಷ್ಠ ಆಟ ತೋರಿದೆವು' ಎಂದಿದ್ದಾರೆ.

`ಭಾರತವೇ ನೆಚ್ಚಿನ ತಂಡ'
ಬರ್ಮಿಂಗ್‌ಹ್ಯಾಂ (ಪಿಟಿಐ): ಭಾರತವು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದು ಬ್ರಿಟನ್‌ನ ಪ್ರಮುಖ ಆಲ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳು ಹೇಳಿವೆ. ದೋನಿ ಬಳಗ ಟೂರ್ನಿಯಲ್ಲಿ ಇದುವರೆಗೆ ಯಾವುದೇ ಪಂದ್ಯದಲ್ಲಿ ಸೋಲು ಅನುಭವಿಸಿಲ್ಲ. ಆದ್ದರಿಂದ ಭಾರತವೇ ಗೆಲ್ಲುತ್ತದೆ ಎಂದು ಅಧಿಕ ಮಂದಿ ಬೆಟ್ ಕಟ್ಟುತ್ತಿದ್ದಾರೆ. ಫೈನಲ್ ಪಂದ್ಯಕ್ಕೆ ಮಳೆಯ ಭೀತಿ ಇರುವ ಕಾರಣ ವೆಬ್‌ಸೈಟ್‌ಗಳು ಎಚ್ಚರಿಕೆಯನ್ನೂ ನೀಡಿವೆ. `ಟಾಸ್ ಚಿಮ್ಮುವವರೆಗೆ ಬೆಟ್ ಕಟ್ಟಬೇಡಿ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ' ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT