ADVERTISEMENT

ಭಾರತ ಒಲಿಂಪಿಕ್ ಸಂಸ್ಥೆಯ ಮಹತ್ವದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಐದು ರಾಷ್ಟ್ರೀಯ ಫೆಡರೇಷನ್‌ಗಳಿಗೆ ತಾತ್ಕಾಲಿಕ ಮಾನ್ಯತೆ ಹಾಗೂ ಮತದಾನದ ಹಕ್ಕನ್ನು ನೀಡಿದೆ.

ಗುರುವಾರ ನಡೆದ ಐಒಎ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಅದೇ ರೀತಿ ನವೆಂಬರ್ 25 ರಂದು ನಡೆಯುವ ಚುನಾವಣೆಯ  ಮೇಲ್ವಿಚಾರಣೆ ನೋಡಿಕೊಳ್ಳಲು ಮೂವರು ಸದಸ್ಯರ ಸಮಿತಿಯನ್ನು ನೇಮಿಸಲು ತೀರ್ಮಾನಿಸಿದೆ.

ಭಾರತ ಐಸ್ ಸ್ಕೇಟಿಂಗ್ ಸಂಸ್ಥೆ, ಭಾರತ ಐಸ್ ಹಾಕಿ ಸಂಸ್ಥೆ, ಭಾರತ ಅಮೆಚೂರ್ ಲೂಜ್ ಸಂಸ್ಥೆ, ಭಾರತ ಗಾಲ್ಫ್ ಒಕ್ಕೂಟ ಮತ್ತು ಮಾಡರ್ನ್ ಪೆಂಟಾಥ್ಲಾನ್ ಸಂಸ್ಥೆಗಳಿಗೆ ಒಂದು ವರ್ಷದ ಅವಧಿಗೆ ಮಾನ್ಯತೆ ನೀಡಲು ಐಒಎ ನಿರ್ಧರಿಸಿದೆ.

`ಈ ಫೆಡರೇಷನ್‌ಗಳಿಗೆ ಮಾನ್ಯತೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ನಾವು ಐವರು ಸದಸ್ಯರ ಸಮಿತಿಯನ್ನು ನೇಮಿಸಿದ್ದೆವು. ಫೆಡರೇಷನ್‌ಗಳಿಗೆ ಒಂದು ವರ್ಷದ ಅವಧಿಗೆ ಮಾನ್ಯತೆ ನೀಡಲು ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪಾಲ್ಗೊಳ್ಳುವ ಶಿಫಾರಸನ್ನು ಸಮಿತಿ ಮಾಡಿದೆ~ ಎಂದು ಐಒಎ ಹಂಗಾಮಿ ಅಧ್ಯಕ್ಷ ವಿ.ಕೆ. ಮಲ್ಹೋತ್ರ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

`ಈ ಫೆಡರೇಷನ್‌ಗಳ ಕಾರ್ಯವೈಖರಿ ಕೆಲವೊಂದು ವಿಚಾರಗಳಲ್ಲಿ ತೃಪ್ತಿಕರವಾಗಿದೆ. ಆದರೆ ಐಒಎ ಸಂವಿಧಾನದ ಪ್ರಸಕ್ತ ವಿಧಿಗಳನ್ನು ಅನುಸರಿಸುವುದು ಅಗತ್ಯ. ಇನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣವಾಗಿ ಐಒಎಯ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ, ಮಾನ್ಯತೆಯನ್ನು ರದ್ದುಪಡಿಸಲಾಗುವುದು~ ಎಂದು ಅವರು ಹೇಳಿದರು.

ಐವರು ಸದಸ್ಯರ ಸಮಿತಿಯು ನಾಲ್ಕು ಫೆಡರೇಷನ್‌ಗಳಿಗೆ ಮಾತ್ರ ತಾತ್ಕಾಲಿಕ ಮಾನ್ಯತೆ ನೀಡುವಂತೆ ಶಿಫಾರಸು ಮಾಡಿದೆ ಎಂಬುದು ತಿಳಿದುಬಂದಿದೆ. ಮಾಡರ್ನ್ ಪೆಂಟಾಥ್ಲಾನ್‌ಗೆ ಮಾನ್ಯತೆ ನೀಡುವ ನಿರ್ಧಾರವನ್ನು ವಿಶೇಷ ಸಭೆಯಲ್ಲಿ ಕೈಗೊಳ್ಳಲಾಗಿದೆ.

`ಮಾಡರ್ನ್ ಪೆಂಟಾಥ್ಲಾನ್‌ಗೆ ಮಾನ್ಯತೆ ನೀಡುವುದಕ್ಕೆ ಹೆಚ್ಚಿನ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಆದ್ದರಿಂದ ಸಮಿತಿ ಶಿಫಾರಸು ಮಾಡದಿದ್ದರೂ, ಮಾನ್ಯತೆ ನೀಡಲು ತೀರ್ಮಾನಿಸಲಾಯಿತು~ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ನವೆಂಬರ್ 25 ರ ಚುನಾವಣೆಗೆ ಸಂಬಂಧಿಸಿದ ಇತರ ಯಾವುದೇ ವಿಚಾರ ಚರ್ಚೆಗೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.