ADVERTISEMENT

ಭಾರತ ತಂಡಕ್ಕೆ ಕೌಶಿಕ್ ಕೋಚ್

ಹಾಕಿ ಇಂಡಿಯಾ ಮಹತ್ವದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ನವದಹೆಲಿ (ಪಿಟಿಐ): ಒಲಿಂಪಿಯನ್ ಎಂ.ಕೆ. ಕೌಶಿಕ್ ಅವರನ್ನು ಭಾರತ ರಾಷ್ಟ್ರೀಯ ಪುರುಷರ ಹಾಕಿ ತಂಡದ ಕೋಚ್ ಆಗಿ ನೇಮಿಸಲಾಗಿದೆ. ಹಾಕಿ ಇಂಡಿಯಾ ಬುಧವಾರ ಈ ಮಹತ್ವದ ನಿರ್ಧಾರ ಕೈಗೊಂಡಿತು.

ಮುಖ್ಯ ಕೋಚ್ ಆಗಿದ್ದ ಆಸ್ಟ್ರೇಲಿಯದ ಮೈಕಲ್ ನಾಬ್ಸ್ ವಜಾಗೊಂಡ 48 ಗಂಟೆಗಳ ಒಳಗಾಗಿ ಈ ನೇಮಕ ನಡೆದಿದೆ. ನಾಬ್ಸ್ ಅವರನ್ನು ಹಾಕಿ ಇಂಡಿಯಾ ಮಂಗಳವಾರ ವಜಾಗೊಳಿಸಿತ್ತು. ಮಾತ್ರವಲ್ಲ, ನೂತನ ಮುಖ್ಯ ಕೋಚ್ ನೇಮಕವಾಗುವವರೆಗೆ ಹಾಲೆಂಡ್‌ನ ರೋಲೆಂಟ್ ಒಲ್ಟಮನ್ಸ್ ಅವರಿಗೆ ತಂಡದ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ಕೌಶಿಕ್ ಅವರು ಒಲ್ಟಮನ್ಸ್‌ಗೆ ಸಹಾಯಕರಾಗಿ ಕೆಲಸ ನಿರ್ವಹಿಸಲಿದ್ದಾರೆ.

ಬೆಂಗಳೂರಿನ ಎಸ್‌ಎಐ ಕೇಂದ್ರದಲ್ಲಿ ಜುಲೈ 16 ರಂದು ಆರಂಭವಾಗಲಿರುವ ರಾಷ್ಟ್ರೀಯ ಆಟಗಾರರ ಶಿಬಿರದ ವೇಳೆ ಅವರು ತಂಡವನ್ನು ಸೇರಿಕೊಳ್ಳುವರು. ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿ ಕೌಶಿಕ್‌ಗೆ ಮೊದಲ `ಅಗ್ನಿಪರೀಕ್ಷೆ' ಎನಿಸಲಿದೆ.
ಏಷ್ಯಾ ಕಪ್ ಇಪೋದಲ್ಲಿ ಆಗಸ್ಟ್ 24 ರಿಂದ ಸೆಪ್ಟೆಂಬರ್ 1ರ ವರೆಗೆ ನಡೆಯಲಿದೆ. ಮುಂದಿನ ವರ್ಷ ಹಾಲೆಂಡ್‌ನ ಹೇಗ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯಬೇಕಾದರೆ ಭಾರತ ಏಷ್ಯಾ ಕಪ್ ಗೆಲ್ಲಲೇಬೇಕು.

ತಮ್ಮ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕೌಶಿಕ್, `ಹಾಕಿ ಇಂಡಿಯಾ ಕೈಗೊಂಡ ನಿರ್ಧಾರ ಸಂತಸ ನೀಡಿದೆ. ರಾಷ್ಟ್ರೀಯ ತಂಡದ ಕೋಚ್ ಆಗುವುದು ಹೆಮ್ಮೆಯ ಸಂಗತಿ. ಭಾರತ ತಂಡ ಮುಂದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಬೇಕೆಂಬುದು ನಮ್ಮ ಗುರಿ. ಅದಕ್ಕಾಗಿ ಒಂದು ಮಾರ್ಗ ಕಂಡುಕೊಳ್ಳಬೇಕು. ತಂಡದ ಆಡಳಿತ ಮಂಡಳಿಯ ಎಲ್ಲರ ಜೊತೆ ಕುಳಿತು ಸಮಾಲೋಚನೆ ನಡೆಸುತ್ತೇನೆ' ಎಂದರು.
ಒತ್ತಡದ ಸಂದರ್ಭದಲ್ಲಿ ಪ್ರತಿ ಬಾರಿಯೂ ಭಾರತ ತಂಡ ಶ್ರೇಷ್ಠ ಪ್ರದರ್ಶನ ನೀಡುತ್ತದೆ ಎಂದು ಕೌಶಿಕ್ ಹೇಳಿದರು. `ವಿಶ್ವ ಹಾಕಿ ಲೀಗ್ ಆಡುವ ವೇಳೆ ಹೆಚ್ಚಿನ ಒತ್ತಡ ಇರಲಿಲ್ಲ. ಆದರೆ ಏಷ್ಯಾ ಕಪ್‌ನಲ್ಲಿ ಭಾರತದ ಮೇಲೆ ಅತಿಯಾದ ಒತ್ತಡ ಇರುತ್ತದೆ. ಇಂತಹ ಸಂದರ್ಭದಲ್ಲಿ ತಂಡದಿಂದ ಉತ್ತಮ ಆಟ ಮೂಡಿಬರಲಿದೆ' ಎಂದು ನುಡಿದರು.

ಮತ್ತೆ ಒಲಿದ ಅವಕಾಶ
ಎಂ.ಕೆ. ಕೌಶಿಕ್ ಈ ಹಿಂದೆ ಕೂಡಾ ರಾಷ್ಟ್ರೀಯ ಪುರುಷ ಮತ್ತು ಮಹಿಳಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಅವರಿಗೆ 1998 ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿತ್ತು. ಭಾರತ ಪುರುಷರ ತಂಡ ಇವರ ಮಾರ್ಗದರ್ಶನದಲ್ಲಿ 1998 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿತ್ತು. ಪುರುಷರ ತಂಡ ಆ ಬಳಿಕ ಯಾವುದೇ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿ ಜಯಿಸಿಲ್ಲ. ಕೌಶಿಕ್ ಕೋಚ್ ಆಗಿದ್ದ ಸಂದರ್ಭ ಭಾರತ ಮಹಿಳಾ ತಂಡ 2006ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಪಡೆದಿತ್ತು.

ಮಹಿಳಾ ತಂಡದ ಆಟಗಾರ್ತಿಯೊಬ್ಬರು ಇವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರಿಂದ 2010 ರಲ್ಲಿ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು. ಕೌಶಿಕ್ ವಿರುದ್ಧ ಆರೋಪ ಮಾಡಿದ್ದ ಆಟಗಾರ್ತಿ ಹಾಕಿ ಇಂಡಿಯಾಕ್ಕೆ ಪತ್ರ ಬರೆದಿದ್ದರು. ಆ ಪತ್ರ 31 ಆಟಗಾರ್ತಿಯರ ಸಹಿಯನ್ನು ಒಳಗೊಂಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕ್ರೀಡಾ ಇಲಾಖೆ ಈ ಬಗ್ಗೆ ತನಿಖೆ ನಡೆಸಿತ್ತು. ಆದರೆ ಕೌಶಿಕ್ ಮೇಲಿದ್ದ ಯಾವುದೇ ಆರೋಪ ಸಾಬೀತಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT