ADVERTISEMENT

ಭಾರತ ತಂಡವು ಕಂಡ ಏರಿಳಿತ...!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:40 IST
Last Updated 3 ಫೆಬ್ರುವರಿ 2011, 18:40 IST


ಬೆಂಗಳೂರು: ಏಕದಿನ ಕ್ರಿಕೆಟ್ ಪಂದ್ಯಗಳ ವಿಶ್ವಕಪ್‌ನಲ್ಲಿ 1983ರಲ್ಲಿ ಚಾಂಪಿಯನ್ ಆಗಿ ಮೆರೆದಿದ್ದ ಭಾರತವು ಕಳೆದ ಒಂಬತ್ತು ವಿಶ್ವಕಪ್‌ಗಳಲ್ಲಿ ಸಾಕಷ್ಟು ಏರಿಳಿತವನ್ನು ಕಂಡಿದೆ.

ತಂಡದ ಆಟಗಾರರು ಕೂಡ ಒಮ್ಮೆ ಸಾಧನೆಯ ಎತ್ತರಕ್ಕೆ ಏರಿ ಹೆಮ್ಮೆಯಿಂದ ಬೀಗಿದ್ದರೆ; ಮತ್ತೊಮ್ಮೆ ನಿರಾಸೆಯ ಪ್ರಪಾತಕ್ಕೆ ಬಿದ್ದು ಬಳಲಿದ್ದಾರೆ. ಕೆಲವು ಆಟಗಾರರು ಉನ್ನತ ಮಟ್ಟದ ಪ್ರದರ್ಶನದಿಂದ ಮಿಂಚಿ ಮೆಚ್ಚುಗೆ ಗಳಿಸಿದ್ದಾರೆ. ಅಂಥ ಕೆಲವು ಅಂಶಗಳನ್ನು ಜೋಡಿಸಿಡಲಾಗಿದೆ.

* ಭಾರತ ತಂಡವು ವಿಶ್ವಕಪ್‌ನಲ್ಲಿ ಈ ವರೆಗೆ 58 ಪಂದ್ಯಗಳನ್ನು ಆಡಿದೆ. ಅವುಗಳಲ್ಲಿ ಗೆದ್ದಿರುವುದು 32ರಲ್ಲಿ ಗೆದ್ದಿದೆ. 25ರಲ್ಲಿ ನಿರಾಸೆಗೊಂಡಿದೆ. ಶ್ರೀಲಂಕಾ ವಿರುದ್ಧದ ಒಂದು ಪಂದ್ಯದಲ್ಲಿ ಫಲಿತಾಂಶ ಹೊರಹೊಮ್ಮಿರಲಿಲ್ಲ. ಆಸ್ಟ್ರೇಲಿಯಾ ಎದುರು ಭಾರತದವರು ಹೆಚ್ಚು ಪಂದ್ಯ (9) ಆಡಿದ್ದಾರೆ. ವಿಶೇಷವೆಂದರೆ ಇದೇ ತಂಡದ ವಿರುದ್ಧ ಏಳು ಬಾರಿ ಸೋಲಿನ ಕಹಿಯುಂಡಿದ್ದಾರೆ.ಜಯ ಸಾಧ್ಯವಾಗಿದ್ದು ಎರಡು ಬಾರಿ ಮಾತ್ರ. ಹೆಚ್ಚು ಪಂದ್ಯ ಜಯಿಸಿದ್ದು ಜಿಂಬಾಬ್ವೆ ಎದುರು. ಏಳು ಬಾರಿ ಗೆಲುವು ಪಡೆದಿದ್ದರೆ ಒಂದು ಸಾರಿ ಜಿಂಬಾಬ್ವೆಗೆ ಶರಣಾಗಿತ್ತು. ಬರ್ಮುಡಾ, ಪೂರ್ವ ಆಫ್ರಿಕಾ, ಕೀನ್ಯಾ, ನಮೀಬಿಯಾ, ಹಾಲೆಂಡ್ ಮತ್ತು ಪಾಕಿಸ್ತಾನದ ಎದುರು ಸೋಲನುಭವಿಸಿಲ್ಲ. ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಆಡಿದ ನಾಲ್ಕೂ ಪಂದ್ಯಗಳನ್ನು ಜಯಿಸಿದ್ದು ವಿಶೇಷ.

* ಬರ್ಮುಡಾ ಎದುರು ಭಾರತದವರು ಅತಿಹೆಚ್ಚು (5 ವಿಕೆಟ್‌ಗೆ 413; ಪೋರ್ಟ್ ಆಫ್ ಸ್ಪೇನ್, 2007) ರನ್ ಗಳಿಸಿದ್ದು ದಾಖಲೆ. ಇದಲ್ಲದೆ ಮೂರು ಬಾರಿ ಮುನ್ನೂರಕ್ಕೂ ಹೆಚ್ಚು ರನ್ ಗಳಿಸಿದೆ. ಶ್ರೀಲಂಕಾ (373/6; ಟೌನ್‌ಟನ್,1999), ಕೀನ್ಯಾ (329/2; ಬ್ರಿಸ್ಟಲ್, 1999) ಮತ್ತು ನಮೀಬಿಯಾ (311/2; ಪೀಟರ್‌ಮಾರಿಜ್‌ಬರ್ಗ್, 2003) ವಿರುದ್ಧ ಮಾತ್ರ ಮುನ್ನೂರು ರನ್‌ಗಳ ಗಡಿಯನ್ನು ದಾಟಿದ್ದು. ನೂರು ರನ್‌ಗಳ ಗಡಿಯಲ್ಲಿ ಭಾರತವೆಂದೂ ವಿಶ್ವಕಪ್ ಪಂದ್ಯಗಳಲ್ಲಿ ಕುಸಿದಿಲ್ಲ. ಆಸ್ಟ್ರೇಲಿಯಾ ಎದುರು ಸೆಂಚೂರಿಯನ್‌ನಲ್ಲಿ (15ನೇ ಫೆಬ್ರುವರಿ, 2003) ಭಾರತವು 41.4 ಓವರುಗಳಲ್ಲಿ 125 ರನ್ ಗಳಿಸಿ ಆಲ್‌ಔಟ್ ಆಗಿತ್ತು. ಅದು ಮೊದಲ ಇನಿಂಗ್ಸ್‌ನಲ್ಲಿ.

* 257ರನ್‌ಗಳ ಅಂತರದಿಂದ ಬರ್ಮುಡಾ ತಂಡವನ್ನು ಸೋಲಿಸಿದ್ದು ಭಾರತ ತಂಡವು ಪಡೆದ ಅತ್ಯಂತ ಉತ್ತಮ ರನ್ ಅಂತರದ ವಿಜಯ. ಆದರೆ ಪೂರ್ವ ಆಫ್ರಿಕಾ ತಂಡದ ಎದುರು 181 ಎಸೆತಗಳು ಬಾಕಿ ಇರುವಂತೆಯೇ 10 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದ್ದು ಮೆಚ್ಚುವಂಥದು. 121 ರನ್‌ಗಳ ಗುರಿಯನ್ನು ವಿಕೆಟ್ ನಷ್ಟವಿಲ್ಲದೆಯೇ ತಲುಪಲು ಸಾಧ್ಯವಾಗಿತ್ತು.

* ಭಾರತ ಪರ ಒಟ್ಟಾರೆಯಾಗಿ ಹೆಚ್ಚು ರನ್ ಗಳಿಸಿದ ಶ್ರೇಯ ಹೊಂದಿರುವುದು ಸಚಿನ್ ತೆಂಡೂಲ್ಕರ್ (1796). ಸಾವಿರ ರನ್‌ಗಳ ಮೈಲಿಗಲ್ಲು ದಾಟಿದವರಲ್ಲಿ ಸಚಿನ್ ಜೊತೆಗೆ ಸೌರವ್ ಗಂಗೂಲಿ (1006) ಕೂಡ ಇದ್ದಾರೆ. ಒಟ್ಟಾರೆ ಐದನೂರಕ್ಕೂ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್, ಸೌರವ್ ಅಲ್ಲದೆ ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್, ಕಪಿಲ್ ದೇವ್, ಸುನಿಲ್ ಗಾವಸ್ಕರ್, ಅಜಯ್ ಜಡೇಜಾ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಸ್ಥಾನ ಹೊಂದಿದ್ದಾರೆ.

* ಇನಿಂಗ್ಸ್ ಒಂದರಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ್ದು ಸೌರವ್ ಗಂಗೂಲಿ (183; ಶ್ರೀಲಂಕಾ ವಿರುದ್ಧ ಟೌನ್‌ಟನ್‌ನಲ್ಲಿ; 1999). ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ (175*; ಟನ್‌ಬ್ರಿಜ್ ವೇಲ್ಸ್, 1983) ಹಾಗೂ ನಮೀಬಿಯಾ ಎದುರು ಸಚಿನ್ ತೆಂಡೂಲ್ಕರ್ (152; ಪೀಟರ್‌ಮಾರಿಜ್‌ಬರ್ಗ್, 2003) ಅವರೂ 150ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇವರನ್ನು ಹೊರತುಪಡಿಸಿ ಭಾರತದ ಪರ ಯಾರೂ ವೈಯಕ್ತಿಕವಾಗಿ ನೂರೈವತ್ತರ ಗಡಿಯನ್ನು ದಾಟಿಲ್ಲ. ಹದಿನೈದು ಬಾರಿ ಶತಕ ಸಾಧನೆಯನ್ನು ಭಾರತದವರು ಮಾಡಿದ್ದಾರೆ.

* ವಿಶ್ವಕಪ್‌ನಲ್ಲಿ ರನ್ ಗಳಿಕೆಯ ಸರಾಸರಿಯಲ್ಲಿ ರಾಹುಲ್ ದ್ರಾವಿಡ್ (61.42) ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಸಚಿನ್ (57.93), ಗಂಗೂಲಿ (55.88), ನವಜೋತ್ ಸಿಂಗ್ ಸಿದ್ದು (45.40), ಮೊಹಮ್ಮದ್ ಅಜರುದ್ದೀನ್ (39.33) ಇದ್ದಾರೆ. ವಿಶ್ವಕಪ್‌ನಲ್ಲಿ 19 ಪಂದ್ಯಗಳನ್ನು ಆಡಿರುವ ಮನೋಜ್ ಪ್ರಭಾಕರ್ ಅವರ ರನ್ ಗಳಿಕೆಯ ಸರಾಸರಿ 5.00 ಆಗಿದೆ. ಅವರು ಹನ್ನೊಂದು ಇನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 45 ರನ್.

* ಎರಡು ಹಾಗೂ ಅದಕ್ಕಿಂತ ಹೆಚ್ಚು ಶತಕ ಗಳಿಸಿದ್ದು ಸೌರವ್ (4), ಸಚಿನ್ (4) ಹಾಗೂ ದ್ರಾವಿಡ್ (2) ಅವರು ಮಾತ್ರ. ವಿನೋದ್ ಕಾಂಬ್ಳಿ, ಸೆಹ್ವಾಗ್, ಜಡೇಜಾ, ಗಾವಸ್ಕರ್ ಹಾಗೂ ಕಪಿಲ್ ತಲಾ ಒಂದು ಶತಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.