ADVERTISEMENT

ಭಾರತ ಪುಟಿದೆದ್ದು ನಿಲ್ಲಲಿದೆ: ಸಚಿನ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2013, 19:59 IST
Last Updated 2 ಜನವರಿ 2013, 19:59 IST
ಮಸ್ಸೂರಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚಿನ್ ತೆಂಡೂಲ್ಕರ್	-ಪಿಟಿಐ ಚಿತ್ರ
ಮಸ್ಸೂರಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚಿನ್ ತೆಂಡೂಲ್ಕರ್ -ಪಿಟಿಐ ಚಿತ್ರ   

ಮಸ್ಸೂರಿ (ಪಿಟಿಐ): ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಪುಟಿದೆದ್ದು ನಿಲ್ಲಲಿದೆ ಎಂಬ ವಿಶ್ವಾಸವನ್ನು ಸಚಿನ್ ತೆಂಡೂಲ್ಕರ್ ವ್ಯಕ್ತಪಡಿಸಿದ್ದಾರೆ.

ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಇದೇ ಮೊದಲ ಬಾರಿ ಮಾಧ್ಯಮದ ಜೊತೆ ಮಾತನಾಡಿದ ಸಚಿನ್, `ನಾನು ಇದೀಗ ಏಕದಿನ ತಂಡದ ಭಾಗವಾಗಿ ಉಳಿದಿಲ್ಲ. ಆದರೆ ನನ್ನ ಮನಸ್ಸು ಸದಾ ತಂಡದ ಜೊತೆಗೆ ಇರಲಿದೆ' ಎಂದಿದ್ದಾರೆ.
`ಎಲ್ಲ ರೀತಿಯಲ್ಲೂ ತಂಡವನ್ನು ಬೆಂಬಲಿಸುವೆ. ಈಗ ನಡೆಯುತ್ತಿರುವ ಸರಣಿಯಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಪುಟಿದೆದ್ದು ನಿಲ್ಲುವುದು ಖಚಿತ' ಎಂದು ಹೇಳಿದ್ದಾರೆ.

`ತಂಡಕ್ಕೆ ಇದೀಗ ಎಲ್ಲರ ಬೆಂಬಲದ ಅಗತ್ಯವಿದೆ. ಎಲ್ಲರಿಂದ ಪ್ರೋತ್ಸಾಹ ದೊರೆತರೆ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ' ಎಂದ ಸಚಿನ್, `ಇದೀಗ 2013ಕ್ಕೆ ಬಂದಿದ್ದೇವೆ. ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳು' ಎಂದು ನುಡಿದರು.

ಕಳೆದ ಕೆಲ ದಿನಗಳಿಂದ ಕುಟುಂಬ ಸದಸ್ಯರ ಜೊತೆ ಮಸ್ಸೂರಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚಿನ್, ವೃತ್ತಿಜೀವನದ ಉದ್ದಕ್ಕೂ ತನ್ನ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

`23 ವರ್ಷಗಳ ಕ್ರಿಕೆಟ್ ಜೀವನ ಅದ್ಭುತವಾದುದು. ನನಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆಗಳು. ವೃತ್ತಿಜೀವನದಲ್ಲಿ ಯಶಸ್ಸು ಹಾಗೂ ಕಷ್ಟಗಳನ್ನು ಕಂಡಿದ್ದೇವೆ. ಆದರೆ ಅಭಿಮಾನಿಗಳು ಎಲ್ಲ ಸಂದರ್ಭಗಳಲ್ಲೂ ನನಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಈ ಪಯಣವನ್ನು ಮರೆಯಲು ಸಾಧ್ಯವಿಲ್ಲ' ಎಂದರು.

ಮಸ್ಸೂರಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಬಗ್ಗೆ ಕೇಳಿದಾಗ, `ನಿಬಿಡ ಕ್ರಿಕೆಟ್‌ನಿಂದಾಗಿ ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಲು ಹೆಚ್ಚಿನ ಸಮಯ ಸಿಕ್ಕಿರಲಿಲ್ಲ. ಇದೀಗ ಕ್ರಿಕೆಟ್‌ನಿಂದ ಬಿಡುವು ಲಭಿಸಿದ ಕಾರಣ ಇಲ್ಲಿಗೆ ಆಗಮಿಸಿದ್ದೇನೆ' ಎಂದರು.
`ಇಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಹಾಗೂ ಟೆನಿಸ್ ಬಾಲ್ ಕ್ರಿಕೆಟ್ ಆಡಿ ಸಂತಸಪಟ್ಟೆ' ಎಂದು ತಿಳಿಸಿದರು.

ಸಚಿನ್ ಅವರು ಪತ್ನಿ ಅಂಜಲಿ ಹಾಗೂ ಮಕ್ಕಳಾದ ಸಾರಾ ಮತ್ತು ಅರ್ಜುನ್ ಜೊತೆ ಡಿಸೆಂಬರ್ 23 ರಿಂದ ಮಸ್ಸೂರಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.