ADVERTISEMENT

ಭಾರತ ಮತ್ತೆ `ಏಕದಿನ' ಒಡೆಯ

ಇಂಗ್ಲೆಂಡ್‌ಗೆ ನಿರಾಸೆ; ದೋನಿ ಬಳಗದ ಮಡಿಲಿಗೆ ಐಸಿಸಿ ಚಾಂಪಿಯನ್ಸ್‌ಟ್ರೋಫಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 20:30 IST
Last Updated 23 ಜೂನ್ 2013, 20:30 IST
ಏಕದಿನ ಚಾಂಪಿಯನ್ನರು... ಇಂಗ್ಲೆಂಡ್ ತಂಡವನ್ನು 5 ರನ್‌ಗಳಿಂದ ಬಗ್ಗುಬಡಿದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡದ ಆಟಗಾರರು ಸಂಭ್ರಮಿಸಿದ ಪರಿ 	- ರಾಯಿಟರ್ಸ್ ಚಿತ್ರ
ಏಕದಿನ ಚಾಂಪಿಯನ್ನರು... ಇಂಗ್ಲೆಂಡ್ ತಂಡವನ್ನು 5 ರನ್‌ಗಳಿಂದ ಬಗ್ಗುಬಡಿದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡದ ಆಟಗಾರರು ಸಂಭ್ರಮಿಸಿದ ಪರಿ - ರಾಯಿಟರ್ಸ್ ಚಿತ್ರ   

ಬರ್ಮಿಂಗ್ ಹ್ಯಾಂ: ಟ್ರೋಫಿ ಯಾರ ಪಾಲಾಗಲಿದೆಯೋ ಎನ್ನುವ ಆತಂಕ ಮೂಡಿದ್ದಾಗ ಭಾರತದ ಬೌಲರ್‌ಗಳು ತಮ್ಮ ಕೈ ಚಳಕ ತೋರಿದರು. ಈ ಪರಿಣಾಮ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಐದು ರನ್‌ಗಳ ರೋಚಕ ಗೆಲುವು ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆತಿಥೇಯರನ್ನು ಭಾರತ ಅವರದ್ದೇ ನೆಲದಲ್ಲಿ ಬಗ್ಗುಬಡಿಯಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಒಮ್ಮೆಯೂ ಐಸಿಸಿಯ ಪ್ರತಿಷ್ಠಿತ ಟೂರ್ನಿಯಲ್ಲಿ ಚಾಂಪಿಯನ್ ಆಗಿಲ್ಲ. ಹಿಂದಿನ ಇತಿಹಾಸವೂ ಮತ್ತೆ ಮರುಕಳಿಸಿತು. ಇಂಗ್ಲೆಂಡ್ ಚಾಂಪಿಯನ್ ಆಗುವುದನ್ನು ಕಣ್ತುಂಬಿಕೊಳ್ಳಬೇಕೆನ್ನುವ ಸ್ಥಳೀಯ ಕ್ರಿಕೆಟ್ ಪ್ರಿಯರಿಗೂ ಇದರಿಂದ ನಿರಾಸೆ ಕಾಡಿತು.

ಮಳೆಯ ಕಾರಣ 20 ಓವರ್‌ಗಳಿಗೆ ನಿಗದಿಯಾಗಿದ್ದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತ್ತು. ಈ ಗುರಿಯನ್ನು ಮುಟ್ಟುವಲ್ಲಿ ಚಡಪಡಿಸಿದ ಇಂಗ್ಲೆಂಡ್ ತಂಡ 20 ಓವರ್‌ಗಳು ಅಂತ್ಯ ಕಂಡಾಗ ಎಂಟು ವಿಕೆಟ್ ಕಳೆದುಕೊಂಡು 124 ರನ್ ಮಾತ್ರ ಗಳಿಸಿತು.

ಕೊಹ್ಲಿ ಆಸರೆ: ತವರಿನ ಕ್ರೀಡಾಂಗಣದಲ್ಲಿ ಮೊದಲು ಪ್ರಾಬಲ್ಯ ಮೆರೆದ ಇಂಗ್ಲೆಂಡ್ ಬೌಲರ್‌ಗಳು ನಾಲ್ಕನೇ ಓವರ್‌ನಲ್ಲಿಯೇ ಮೇಲುಗೈ ಸಾಧಿಸಿದರು. ರೋಹಿತ್ ಶರ್ಮ (9) ಅವರನ್ನು ಬೌಲ್ಡ್ ಮಾಡಿದ ಸ್ಟುವರ್ಟ್ ಬ್ರಾಡ್ ಆರಂಭಿಕ ಮುನ್ನಡೆ ತಂದುಕೊಟ್ಟರು. 16 ರನ್ ಗಳಿಸುವ ಅಂತರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. ಆದರೆ, ವಿರಾಟ್ ಕೊಹ್ಲಿಆಸರೆಯಾದರು. ಬಲಗೈ ಬ್ಯಾಟ್ಸ್‌ಮನ್ ಕೊಹ್ಲಿ (43, 34ಎಸೆತ, 4ಬೌಂಡರಿ, 1ಸಿಕ್ಸರ್) ರವೀಂದ್ರ ಜಡೇಜ (ಔಟಾಗದೆ 33, 25ಎಸೆತ, 2 ಬೌಂಡರಿ, 2 ಸಿಕ್ಸರ್) ಜೊತೆ ಸೇರಿ ಆರನೇ ವಿಕೆಟ್ ಜೊತೆಯಾಟದಲ್ಲಿ 33 ಎಸೆತಗಳಲ್ಲಿ 47 ರನ್ ಸೇರಿಸಿ ಭಾರತಕ್ಕೆ ಆಸರೆಯಾದರು.

ಶಿಖರ್ ಧವನ್ (31, 24ಎಸೆತ, 2ಬೌಂಡರಿ, 1 ಸಿಕ್ಸರ್) ಅವರನ್ನು ಹೊರತು ಪಡಿಸಿದರೆ, ಇತರ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ದಿನೇಶ್ ಕಾರ್ತಿಕ್ (6), ಸುರೇಶ್ ರೈನಾ (1) ಮತ್ತು ನಾಯಕ ದೋನಿ (0) ಬೇಗನೆ ಪೆವಿಲಿಯನ್ ಸೇರಿಕೊಂಡರು. ಇದಕ್ಕೆ ಕಾರಣವಾಗಿದ್ದು ಮಧ್ಯಮ ವೇಗಿ ರವಿ ಬೋಪಾರ ಕರಾರುವಾಕ್ಕಾದ ಬೌಲಿಂಗ್. ಈ ಬಲಗೈ ಬೌಲರ್ ಮೂರು ವಿಕೆಟ್‌ಗಳನ್ನು ಉರುಳಿಸಿದರು.

ಚುರುಕಿನ ಬೌಲಿಂಗ್: ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಆರ್. ಅಶ್ವಿನ್ ಮತ್ತು ಇಶಾಂತ್ ಶರ್ಮ ಕಾಡಿದರು. ಇದರಿಂದ ಭಾರತ 2002-03ರ ಬಳಿಕ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಿತು. ಈ ಮೊದಲು ಶ್ರೀಲಂಕಾ ಜೊತೆ ಭಾರತ ಜಂಟಿ ಚಾಂಪಿಯನ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.