ADVERTISEMENT

ಭಾರತ ವನಿತೆಯರಿಗೆ ಜಯ

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ

ಪಿಟಿಐ
Published 1 ನವೆಂಬರ್ 2016, 19:30 IST
Last Updated 1 ನವೆಂಬರ್ 2016, 19:30 IST

ಸಿಂಗಪುರ (ಪಿಟಿಐ): ಗೆಲುವಿನ ಓಟ ಮುಂದುವರಿಸಿರುವ ಭಾರತ ಮಹಿಳೆ ಯರ ಹಾಕಿ ತಂಡ 4ನೇ  ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮಂಗಳ ವಾರ ಮಲೇಷ್ಯಾದ ಎದುರು ಜಯ ದಾಖಲಿಸಿದೆ.

ಗುಂಪು ವಿಭಾಗದಲ್ಲಿ ಭಾರತ ಮಹಿಳೆಯರ ತಂಡ 2–0 ಗೋಲು ಗಳಿಂದ ಮಲೇಷ್ಯಾ ತಂಡವನ್ನು ಮಣಿಸಿದೆ. ಈ ಗೆಲುವಿನಿಂದ ಭಾರತ ತಂಡ ಏಳು ಪಾಯಿಂಟ್ಸ್‌ಗಳೊಂದಿಗೆ ಪಟ್ಟಿ ಯಲ್ಲಿ ಅಗ್ರಸ್ಥಾನ ಪಡೆದು ಕೊಂಡಿದೆ. ಕೊರಿಯಾ, ಚೀನಾ, ಜಪಾನ್‌ ಮತ್ತು ಮಲೇಷ್ಯಾ ತಂಡಗಳು ನಂತರದ ಸ್ಥಾನದಲ್ಲಿವೆ. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆದಿದ್ದರಿಂದ ಭಾರತ ತಂಡದ ನಾಕೌಟ್‌ ತಲುಪುವ ಕನಸು ನನಸಾಗಿದೆ.

ಹಿಂದಿನ ಗೆಲುವುಗಳಿಂದ ಉತ್ಸಾಹ ಹೆಚ್ಚಿಸಿಕೊಂಡಿದ್ದ ಭಾರತ ತಂಡ ಮಲೇಷ್ಯಾದ ಎದುರು ಆರಂಭದಲ್ಲೇ ಆಕ್ರಮಣಕಾರಿಯಾಗಿ ಆಡಿತು. ಇದಕ್ಕೆ ಪ್ರತಿಫಲವಾಗಿ ಏಳನೇ ನಿಮಿಷದಲ್ಲೇ ಭಾರತಕ್ಕೆ ಮುನ್ನಡೆ ದೊರೆಯಿತು. ಪೂನಮ್‌ ರಾಣಿ ಚೆಂಡನ್ನು ಸೊಗಸಾಗಿ ಹಿಡಿತಕ್ಕೆ ಪಡೆದು ಪೀಲ್ಡ್‌ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.

ಭಾರತದ ಮುನ್ನಡೆಯ ಬಳಿಕ ಮಲೇಷ್ಯಾ ತಂಡ ಮಂಕಾಯಿತು. ಚುರುಕು ಕಳೆದುಕೊಂಡು ಆಕ್ರಮಣಕಾರಿ ಯಾಗಿ ಆಡುವಲ್ಲಿ ಹಿನ್ನಡೆ ಅನುಭವಿ ಸಿತು. ಇದರ ಲಾಭ ಪಡೆದ ಭಾರತ ತಂಡ ಭದ್ರ ರಕ್ಷಣಾ ಗೋಡೆ ಕಟ್ಟಿಕೊಂಡಿತು. ಮಲೇಷ್ಯಾ ತಂಡಕ್ಕೆ ಒಂದೂ ಪೆನಾಲ್ಟಿ ಅವಕಾಶ ಸಿಗಲಿಲ್ಲ.

ಬಳಿಕ ಮಲೇಷ್ಯಾ ತಂಡ ಪೀಲ್ಡ್‌ ಗೋಲು ಗಳಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಆದರೆ ರಜನಿ ಈ ತಂಡದ ಕನಸಿಗೆ ಅಡ್ಡಿಯಾದರು. ಭಾರತ ತಂಡ 45ನೇ ನಿಮಿಷದಲ್ಲಿ ಮತ್ತೊಮ್ಮೆ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿಕೊಂಡಿತು.

ದ್ವಿತೀಯಾರ್ಧದಲ್ಲಿ ದೀಪಿಕಾ ಭಾರತಕ್ಕೆ ಎರಡನೇ ಗೋಲು ತಂದು ಕೊಟ್ಟರು. ಬಳಿಕ ಭಾರತ ತಂಡ ಮೂರು ಬಾರಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವ ವಿಫಲ ಪ್ರಯತ್ನ ನಡೆಸಿತು. ಆದರೆ ಮಲೇಷ್ಯಾ ತಂಡ ಭಾರತದ ರಕ್ಷಣಾ ಗೋಡೆ ಭೇದಿಸಲು ಬೇರೆ ಬೇರೆ ಪ್ರಯತ್ನ ನಡೆಸಿ ಸೋಲು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ದೀಪಿಕಾ ಒಂದು ಗೋಲು ಗಳಿಸುವ ಮೂಲಕ ಟೂರ್ನಿ ಯಲ್ಲಿ ಇಲ್ಲಿಯವರೆಗೆ ಹೆಚ್ಚು ಗೋಲು ಗಳಿಸಿದ ಆಟಗಾರ್ತಿ ಎನಿಸಿದರು. ನವೆಂಬರ್‌ 4 ರಂದು ಭಾರತ ತಂಡ ಚೀನಾದ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.