ADVERTISEMENT

ಭುಟಿಯಾ ವಿದಾಯಕ್ಕೆ ಜನಸಾಗರ!

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಮೈ ಕೊರೆಯುವ ಚಳಿಯ ಮಧ್ಯದಲ್ಲೂ ರಾಷ್ಟ್ರದ ರಾಜಧಾನಿ ಮಂಗಳವಾರ ರಾತ್ರಿ ಭಾರಿ ಸಂಭ್ರಮದಲ್ಲಿತ್ತು. ಅಲ್ಲಿ ನೆರದವರ ಕೈಯಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿತ್ತು. ಹುಣ್ಣಿಮೆಯ ಅಂದದ ಬೆಳದಿಂಗಳಲ್ಲೂ `ಭೈಚುಂಗ್ ಭುಟಿಯಾ~ ಎನ್ನುವ `ನಕ್ಷತ್ರ~ ಚೆಂದವಾಗಿ ಹೊಳೆಯುತ್ತಿತ್ತು...!

ಹೌದು, ಈ ಎಲ್ಲಾ ಕ್ಷಣಕ್ಕೆ ಸಾಕ್ಷಿಯಾಗಿದ್ದು ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣ. ಕೊನೆಯ ಅಂತರರಾಷ್ಟ್ರೀಯ ಫುಟ್‌ಬಾಲ್ ಪಂದ್ಯವನ್ನಾಡಿದ ಭಾರತ ತಂಡದ ಮಾಜಿ ನಾಯಕ ಭುಟಿಯಾ ಆಟಕ್ಕೆ 35, 000ಕ್ಕೂ ಹೆಚ್ಚು ಕ್ರೀಡಾ ಪ್ರೇಮಿಗಳು ಪ್ರತ್ಯಕ್ಷ ಸಾಕ್ಷಿಯಾದರು. ಇದರಿಂದ ರಾಜಧಾನಿಯಲ್ಲೆಡೆಯೂ ಫುಟ್‌ಬಾಲ್ ಜ್ವರ. ಇದು ಸಂಚಾರ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿತು.

ಜರ್ಮನಿಯ ಬೇಯರ್ನ್ ಮ್ಯೂನಿಕ್ ವಿರುದ್ಧದ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ 0-4ಗೋಲುಗಳಿಂದ ಸೋಲು ಕಂಡಿತು. ಆದರೂ, ತವರಿನ ಅಭಿಮಾನಿಗಳು ಭುಟಿಯಾ ಆಟವನ್ನು ಪ್ರತ್ಯಕ್ಷವಾಗಿ ಕಣ್ತುಂಬಿಕೊಂಡು ಗೆಲುವು ಪಡೆದವರಂತೆ ಸಂಭ್ರಮಿಸಿದರು.

 ಪಂದ್ಯದ ಮುಕ್ತಾಯದ ತನಕವೂ ಇಡೀ ಕ್ರೀಡಾಂಗಣದಲ್ಲಿ ಓಡಾಡುತ್ತಾ ಪ್ರೇಕ್ಷಕರ ಸಂಭ್ರಮಕ್ಕೆ ಭುಟಿಯಾ ರಂಗು ತುಂಬಿದರು. `ಇಂಡಿಯಾ ಅಂಡ್ ಭುಟಿಯಾ...~ ಎಂದು ಕೂಗುತ್ತಾ ಆಟಗಾರನ ಓಟಕ್ಕೆ ಇನ್ನಷ್ಟು ಹುರುಪು ಮೂಡುವಂತೆ ಮಾಡಿದ್ದು ಅಭಿಮಾನಿಗಳ ಪ್ರೀತಿ.

ಮ್ಯೂನಿಕ್ ತಂಡದ ಮಾರಿಯೊ ಗೋಮೆಜ್ 14ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಾದ ನಂತರ ಎಂ. ಥಾಮಸ್ (38 ಹಾಗೂ 37ನೇ ನಿಮಿಷ) ಮತ್ತು ಬಾಸ್ಟಿಯನ್ ಶ್ವೆನ್‌ಸ್ಟೀಗರ್ (43ನೇ ನಿ) ಗೋಲು ಗಳಿಸಿ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.

ಮೊದಲಾರ್ದದ ಪಂದ್ಯ ಮುಗಿದ ನಂತರ ಆಡಿ ಕ್ಯು8 ಕಂಪೆನಿಯ ಕಾರನ್ನು ಭಾರತ ತಂಡದ ಮಾಜಿ ನಾಯಕನಿಗೆ ಉಡುಗೊರೆಯಾಗಿ ನೀಡಲಾಯಿತು. `ಈ ಮಟ್ಟದಲ್ಲಿ ವಿದಾಯ ಲಭಿಸುವುದೆಂದು ನಿರೀಕ್ಷೆಯೂ ಮಾಡಿರಲಿಲ್ಲ. ಇದು ಕನಸೋ ಅಥವಾ ನನಸೋ ಎನ್ನುವುದು ಗೊತ್ತಾಗುತ್ತಿಲ್ಲ~ ಎಂದ ಭುಟಿಯಾ ಭಾವುಕರಾದರು.

ಚೆಟ್ರಿಗೆ ಪ್ರಶಸ್ತಿ ಪ್ರದಾನ: ಭಾರತ ತಂಡದ ಸ್ಟ್ರೈಕರ್ ಸುನಿಲ್ ಚೆಟ್ರಿ ಅವರಿಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎ) `ವರ್ಷದ ಆಟಗಾರ~ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಎಐಎಫ್‌ಎಫ್ ಅಧ್ಯಕ್ಷ  ಪ್ರಫುಲ್ ಪಟೇಲ್ ಪ್ರದಾನ ಮಾಡಿದರು. ಈ ಪ್ರಶಸ್ತಿಯು ಫಲಕ ಹಾಗೂ ಎರಡು ಲಕ್ಷ ರೂಪಾಯಿ ನಗದು ಒಳಗೊಂಡಿದೆ.

`2011 ನನ್ನ ಪಾಲಿಗೆ ಸುವರ್ಣ ವರ್ಷ. ಈ ಪ್ರಶಸ್ತಿ ಲಭಿಸಿರುವುದು ನನಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ಒದಗಿಸಿದೆ~ ಎಂದು ಚೆಟ್ರಿ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.