ADVERTISEMENT

ಮಂಗಳೂರು ಶುಭಾರಂಭ

ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ಬೆಂಗಳೂರು: ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ (ಎಂಬಿಸಿ) ಇಲ್ಲಿ ಕರ್ನಾಟಕ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಆರಂಭವಾದ  ಡಿ.ಎನ್. ರಾಜಣ್ಣ ಸ್ಮಾರಕ ಟ್ರೋಫಿ ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಪಂದ್ಯದಲ್ಲಿ ಶುಕ್ರವಾರ ಶುಭಾರಂಭ ಮಾಡಿತು.

ಕಂಠೀರವ ಕ್ರೀಡಾಂಗಣದ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಮಂಗಳೂರಿನ ಆಟಗಾರರು 35 -10ರಿಂದ ಸಹಕಾರ ನಗರ ಕ್ಲಬ್ ವಿರುದ್ಧ ಲೀಲಾಜಾಲವಾಗಿ ಗೆದ್ದರು. ವಿಜಯೀ ತಂಡದ ಪರ ಸೌಕಿನ್ ಶೆಟ್ಟಿ 11 ಪಾಯಿಂಟ್ಸ್ ಗಳಿಸಿದರು. ವಿರಾಮದ ವೇಳೆಗೆ ಎಂಬಿಸಿ 21-4ರಿಂದ ಮುಂದಿತ್ತು.

ಇನ್ನೊಂದು ಪಂದ್ಯದಲ್ಲಿ ಮಂಡ್ಯದ ವಿಜಯನಗರ ಕ್ಲಬ್ (ವಿಬಿಸಿ)  40-15 ಪಾಯಿಂಟ್‌ಗಳಿಂದ ಪಟ್ಟಾಭಿರಾಮಯ್ಯ ಸ್ಪೋರ್ಟ್ಸ್ ಕ್ಲಬ್ ಎದುರು ಸುಲಭ ಗೆಲುವು ಸಾಧಿಸಿತು. ವಿಜಯಿ ತಂಡ ಮೊದಲಾರ್ಧ ಕೊನೆಗೊಂಡಾಗ  29-9ರಲ್ಲಿ ಮುನ್ನಡೆಯಲ್ಲಿತ್ತು. ಗುರುಪ್ರಸಾದ್ 17 ಪಾಯಿಂಟ್‌ಗಳನ್ನು ಕಲೆ ಹಾಕಿ ಚುರುಕಿನ ಪ್ರದರ್ಶನ ತೋರಿದರು.

ದಿನದ ಇನ್ನಷ್ಟು ಪಂದ್ಯಗಳಲ್ಲಿ ಹಲಸೂರು ಸ್ಪೋಟ್ಸ್ ಕ್ಲಬ್ 51-19ರಲ್ಲಿ ಕೋರಮಂಗಲ ಕ್ಲಬ್ ವಿರುದ್ಧವೂ, ದೇವಾಂಗ ಯೂನಿಯನ್ 52-36ರಲ್ಲಿ ಯಂಗ್ ಬ್ಲೂಸ್ ಮೇಲೂ, ವಿವೇಕ್ಸ್ ಕ್ಲಬ್ 48-15ರಲ್ಲಿ ವೈಎಂಎಂಎ ಕ್ಲಬ್ ವಿರುದ್ಧವೂ, ಅಪ್ಪಯ್ಯ ಕ್ಲಬ್ 31-29ರಲ್ಲಿ ಡಿಆರ್‌ಡಿಒ ಮೇಲೂ ಗೆಲುವು ಸಾಧಿಸಿದವು.
ವಿವೇಕ್ಸ್‌ಗೆ ಗೆಲುವು: ಸೋಸಲೆ ಟ್ರೋಫಿಗಾಗಿ ನಡೆಯುತ್ತಿರುವ ಬಾಲಕಿಯರ ವಿಭಾಗದ ಟೂರ್ನಿಯಲ್ಲಿ ವಿವೇಕ್ಸ್ ಕ್ಲಬ್ ತಂಡ 34-2 ಪಾಯಿಂಟ್‌ಗಳಿಂದ ಯಂಗ್ ಬ್ಲೂಸ್ ಎದುರು ಸುಲಭ ಗೆಲುವು ದಾಖಲಿಸಿತು.

ವಿಜಯಿ ತಂಡ ಮೊದಲಾರ್ಧದಲ್ಲಿ 16 ಪಾಯಿಂಟ್‌ಗಳನ್ನು ಕಲೆ ಹಾಕಿ ಪ್ರಾಬಲ್ಯ ಮೆರೆದಿತ್ತು. ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ರಾಜಮಹಲ್ ಕ್ಲಬ್ 47-9 ಪಾಯಿಂಟ್‌ಗಳಿಂದ ಬಿ.ಸಿ. ಬ್ಯಾಸ್ಕೆಟ್‌ಬಾಲ್ ಕ್ಲಬ್ ಎದುರು ಗೆಲುವಿನ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.