ಬೆಂಗಳೂರು: ‘ಈಜು ಮತ್ತು ಜಿಮ್ನಾಸ್ಟಿಕ್ಸ್‌ನಲ್ಲಿ ಹೆಣ್ಣುಮಕ್ಕಳು ಧರಿಸುವ ಸಮವಸ್ತ್ರಗಳ ಕುರಿತ ಹಿಂಜರಿಕೆ ಮನೋಭಾವ ಇನ್ನು ಮುಂದಾದರೂ ಬದಲಾಗಬೇಕು. ಪಾಲಕರು ಹಳೆಯ ಕಾಲದ ಚಿಂತನೆಗಳನ್ನು ಬಿಟ್ಟು ತಮ್ಮ ಹೆಣ್ಣುಮಕ್ಕಳನ್ನು ಈ ಕ್ರೀಡೆಯಲ್ಲಿ ತರಬೇತಿ ಪಡೆಯಲು ಪ್ರೋತ್ಸಾಹಿಸಿದರೆ ದೀಪಾಳಂತೆ ಇನ್ನಷ್ಟು ಮಕ್ಕಳು ದೇಶದ ಹೆಸರು ಬೆಳಗಬಲ್ಲರು’–
ರಿಯೊ ಒಲಿಂಪಿಕ್ಸ್‌ನ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನ ವಾಲ್ಟ್‌ನಲ್ಲಿ ಫೈನಲ್ ಪ್ರವೇಶಿಸಿರುವ ದೀಪಾ ಕರ್ಮಾಕರ್ ಅವರ ತಂದೆ ದುಲಾಲ್ ಕರ್ಮಾಕರ್ ಅವರ ಮಾತುಗಳಿವು. ಶನಿವಾರ ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಅವರು ಅಗರ್ತಲಾದ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ಹಿರಿಯ ವೇಟ್‌ಲಿಫ್ಟಿಂಗ್ ಕೋಚ್ ಆಗಿದ್ದಾರೆ.
*ದೀಪಾ ಜಿಮ್ನಾಸ್ಟಿಕ್ಸ್ ಆರಂಭಿಸಿದ್ದು ಮತ್ತು ನೀವು ಎದುರಿಸಿದ ಸವಾಲುಗಳ ಬಗ್ಗೆ.
–ನಮಗೆ ಇಬ್ಬರು ಪುತ್ರಿಯರು. ದೊಡ್ಡವಳು ಪೂಜಾ, ಎರಡನೇಯವಳು ದೀಪಾ. ಎಲ್ಲ ತಂದೆ, ತಾಯಂದಿರಿಗೂ ತಮ್ಮ ಮಕ್ಕಳು ಉನ್ನತ ಹುದ್ದೆಗೆ ಹೋಗಬೇಕು. ಹಣ, ಅಧಿಕಾರ ಗಳಿಸಬೇಕು ಎಂಬ ಆಸೆಗಳಿರುವುದು ಸಹಜ. ಅದೇ ರೀತಿ ಒಬ್ಬ ಮಗಳನ್ನು ಕ್ರೀಡಾಪಟುವನ್ನಾಗಿಯೇ ರೂಪಿಸಬೇಕು ಎಂಬ ಆಸೆಯಿತ್ತು.
ಪತ್ನಿ ಗೌರಿ ಕೂಡ ಬೆಂಬಲಿಸಿದರು. ಜಿಮ್ನಾಸ್ಟಿಕ್ಸ್‌ಗೆ ಸೇರಿಸಿದೆ. ದೀಪಾ ಈ ಮಟ್ಟಕ್ಕೆ ಬೆಳೆದಿದ್ದಾಳೆ. ಸಮಾಜದಲ್ಲಿ ಹೆಣ್ಣುಮಕ್ಕಳಿಗೇಕೆ ಕ್ರೀಡೆ. ಬೇಕಾದರೆ ಚೆನ್ನಾಗಿ ಓದಿಸಿ, ಮದುವೆ ಮಾಡಿಕೊಡಿ ಎಂದು ಬಹಳ ಮಂದಿ ಹೇಳಿದ್ದರು. ಸ್ವತಃ ಕ್ರೀಡಾಪಟುವಾಗಿದ್ದ ನಾನು ಅವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಸಾಯ್ ಕೂಡ ನನ್ನ ಬೆಂಬಲಕ್ಕೆ ನಿಂತಿತ್ತು. ಕಾಸ್ಟ್ಯೂಮ್ (ಸಮವಸ್ತ್ರ) ಕುರಿತು ನಾವು ಇದುವರೆಗೂ ತಲೆ ಕೆಡಿಸಿಕೊಳ್ಳಲಿಲ್ಲ. ಈ ಆಧುನಿಕ ಕಾಲದಲ್ಲಿ ಅದು ವಿಚಾರ ಮಾಡುವ ವಿಷಯವೂ ಅಲ್ಲ.
*ಫೈನಲ್ ಪ್ರವೇಶಿಸಿದ ನಂತರ ದೀಪಾ ಅವರೊಂದಿಗೆ ನೀವು ಮಾತನಾಡಿದ್ದೀರಾ?
–ಹೌದು. ಅರ್ಹತೆ ಪಡೆದ ನಂತರ ದೀಪಾ ಕರೆ ಮಾಡಿದ್ದಳು. ಬಹಳ ಖುಷಿಯಿಂದ ಇದ್ದಳು. ಅವಳಿಗೆ ಪದಕ ಗೆಲ್ಲುವ ವಿಶ್ವಾಸ ಇದೆ. ನಾವು ಕೂಡ ಅದೇ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಅವಳ ಏಕಾಗ್ರತೆ, ತ್ಯಾಗ, ಶ್ರಮಕ್ಕೆ ದೇವರು ಉತ್ತಮ ಫಲ ಕೊಡುತ್ತಾನೆ ಎಂಬ ವಿಶ್ವಾಸವಿದೆ.
*ಭಾರತದಿಂದ ಒಲಿಂಪಿಕ್ಸ್ ಜಿಮ್ನಾ ಸ್ಟಿಕ್ಸ್‌ಗೆ ಮೊದಲ ಮಹಿಳಾ ಸ್ಪರ್ಧಿಯಾಗಿ ದೀಪಾ ಆಯ್ಕೆಯಾದ ನಂತರ ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದರು?
– ದೀಪಾ ಅಲ್ಪ ತೃಪ್ತಿಯ ವ್ಯಕ್ತಿತ್ವದ ಹುಡುಗಿಯಲ್ಲ. ಆದರೆ, ಒಂದೊಂದೇ ಸವಾಲನ್ನು ಹಂತ ಹಂತವಾಗಿ ಎದುರಿಸುತ್ತಾ ಸಾಗುವ ಕಲೆ ರೂಢಿಸಿಕೊಂಡಿದ್ದಾಳೆ. ಒಲಿಂಪಿಕ್ಸ್‌ಗೆ ಆಯ್ಕೆಯಾದ ನಂತರ ಒಟ್ಟು 90 ದಿನಗಳವರೆಗೆ ಕಠಿಣ ಅಭ್ಯಾಸ ಮಾಡಿದಳು. ಪ್ರತಿದಿನ ಬೆಳಿಗ್ಗೆ ನಾಲ್ಕು ತಾಸು ಮತ್ತು ಸಂಜೆ ಕೂಡ ಅಷ್ಟೇ ಅವಧಿಯ ತಾಲೀಮು ನಡೆಸುತ್ತಿದ್ದಳು. ಕೋಚ್ ವಿಶ್ವೇಶ್ವರ್ ನಂದಿ ಮತ್ತು ಅವರ ಪತ್ನಿಯ ಮಾರ್ಗದರ್ಶನ ಸಾಕಷ್ಟಿದೆ. ನಂದಿ ದಂಪತಿಗಳು ಇಲ್ಲದಿದ್ದರೆ ದೀಪಾ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.
*ದೀಪಾ ಅವರ ಭವಿಷ್ಯದ ಕುರಿತು ಏನು ಯೋಚಿಸಿದ್ದೀರಿ?
–ಸದ್ಯ ಅವಳಿಂದ ನಾವಷ್ಟೇ ಅಲ್ಲ ಇಡೀ ದೇಶವೇ ಪದಕ ನಿರೀಕ್ಷೆ ಮಾಡುತ್ತಿದೆ. ಇಷ್ಟು ದಿನ ದೀಪಾ ನಮ್ಮ ಮಗಳಾಗಿದ್ದಳು. ಆದರೆ ಅವಳೀಗ ಇಡೀ ದೇಶದ ಮಗಳಾಗಿದ್ದಾಳೆ. ಒಲಿಂಪಿಕ್ಸ್ ನಂತರದ ಕುರಿತು ಏನು ಎಂಬುದರ ಕುರಿತು ಯೋಚಿಸಿಲ್ಲ. ಅದು ಅವಳಿಗೆ ಬಿಟ್ಟ ವಿಷಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.