ADVERTISEMENT

ಮತ್ತೆ ತಪ್ಪು ಮಾಡುವುದಿಲ್ಲ: ದೋನಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST
ಮತ್ತೆ ತಪ್ಪು ಮಾಡುವುದಿಲ್ಲ: ದೋನಿ
ಮತ್ತೆ ತಪ್ಪು ಮಾಡುವುದಿಲ್ಲ: ದೋನಿ   

ಚೆನ್ನೈ: ವೆಸ್ಟ್‌ಇಂಡೀಸ್ ತಂಡದ ನಾಯಕ ಡರೆನ್ ಸಮಿ ಮತ್ತು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಒಂದು ವಿಷಯದಲ್ಲಿ ಮಾತ್ರ ಸಹಮತ ವ್ಯಕ್ತಪಡಿಸಿದರು. ಇಬ್ಬರೂ ಶನಿವಾರ ಮೀರಪುರದಲ್ಲಿ ನಡೆದ ದಕ್ಷಿಣ ಆಫ್ರಿಕ ಮತ್ತು ಬಾಂಗ್ಲಾದೇಶ ನಡುವಣ ಪಂದ್ಯ ನೋಡಿದರಾದರೂ ಅದರ ಫಲಿತಾಂಶದ ಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ.ಇಬ್ಬರೂ ಭಾನುವಾರದ ಪಂದ್ಯವನ್ನು ಗೆದ್ದು ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯುವ ವಿಶ್ವಾಸವನ್ನೇ ಹೊಂದಿದ್ದರು.

ಹತ್ತನೇ ವಿಶ್ವ ಕಪ್‌ನ ‘ಬಿ’ ಗುಂಪಿನಲ್ಲಿ, ಭಾನುವಾರ ಭಾರತ ಮತ್ತು ವೆಸ್ಟ್‌ಇಂಡೀಸ್ ಆಡುವುದರೊಂದಿಗೆ ಲೀಗ್ ವ್ಯವಹಾರ ಮುಕ್ತಾಯವಾಗುತ್ತದೆ. ಬರುವ ಬುಧವಾರ (ಮಾರ್ಚ್ 23) ಆರಂಭವಾಗುವ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಯಾರು ಯಾರನ್ನು ಎದುರಿಸುತ್ತಾರೆ ಎಂಬುದೂ ಗೊತ್ತಾಗಲಿದೆ. ಶನಿವಾರ ಬೆಳಿಗ್ಗೆ ಎಂ.ಎ. ಚಿದಂಬರಮ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ನಂತರ ಡರೆನ್ ಸಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರೆ, ದೋನಿ ಮಧ್ಯಾಹ್ನ ಅಭ್ಯಾಸಕ್ಕೆ ಮೊದಲು ತಮ್ಮ ಅಭಿಪ್ರಾಯಗಳನ್ನು ಪತ್ರಕರ್ತರ ಮುಂದಿಟ್ಟರು.

‘ದಕ್ಷಿಣ ಆಫ್ರಿಕ ಮತ್ತು ಬಾಂಗ್ಲಾದೇಶ ಪಂದ್ಯದ ಫಲಿತಾಂಶ ನಮ್ಮ ಕೈಯಲ್ಲಿಲ್ಲ. ಆದರೆ ಭಾನುವಾರದ ಪಂದ್ಯ ನಮ್ಮದು. ಅದನ್ನು ನಾವು ಆಡಬೇಕು, ನಮಗೆ ಗೆಲ್ಲುವ ವಿಶ್ವಾಸ ಇದೆ. ಈ ವಿಶ್ವ ಕಪ್‌ನಲ್ಲಿ ನಮ್ಮ ಮೊದಲ ಗುರಿ ಇದ್ದದ್ದು ಕ್ವಾರ್ಟರ್‌ಫೈನಲ್ ತಲುಪುವುದು. ಇಂಗ್ಲೆಂಡ್ ವಿರುದ್ಧ ನಾವು ಗೆಲ್ಲಬೇಕಿತ್ತು. ಆದರೆ ಈಗ ಭಾರತ ವಿರುದ್ಧ ಗೆಲ್ಲಲು ತಂತ್ರ ರೂಪಿಸಿದ್ದೇವೆ.

ಭಾರತ ಬಲಿಷ್ಠ ತಂಡ. ಅದರ ಅತ್ಯುತ್ತಮ ಆಟಗಾರರನ್ನು ನಿಯಂತ್ರಿಸಲು ನಮ್ಮದೇ ಆದ ಮಾರ್ಗಗಳಿವೆ. ಸಚಿನ್ ಒಬ್ಬ ಮಹಾನ್ ಆಟಗಾರ. ಅವರನ್ನು ನಿಯಂತ್ರಿಸಲೂ ನಮ್ಮ ಬಳಿ ಯೋಜನೆ ಇದೆ. ಟಾಸ್ ಗೆದ್ದು ಮೊದಲು ಆಡಿದಲ್ಲಿ ಗೆಲುವು ನಮಗೆ ಸುಲಭವಾಗುತ್ತದೆ. ರನ್ ಸರಾಸರಿಯ ನೆರವಿಲ್ಲದೇ ನಾವು ಮುನ್ನಡೆಯುವ ಛಲ ಹೊಂದಿದ್ದೇವೆ’ ಎಂದು ಸಮಿ ಹೇಳಿದರು.

ಮಹೇಂದ್ರ ಸಿಂಗ್ ದೋನಿ ಕೂಡ ಇದೇ ಧಾಟಿಯಲ್ಲೇ ಮಾತನಾಡಿದರು. ‘ಒಂದು ಉತ್ತಮ ತಂಡ ಪದೇ ಪದೇ ಮಾಡಿದ ತಪ್ಪುಗಳನ್ನೇ ಮಾಡುವುದಿಲ್ಲ. ನಾವೂ ಮನುಷ್ಯರು. ಕೆಲವು ತಪ್ಪುಗಳಾಗಿವೆ. ಆದರೆ ಅವುಗಳಿಂದ ಪಾಠ ಕಲಿತಿದ್ದೇವೆ. ಭಾನುವಾರ ವೆಸ್ಟ್‌ಇಂಡೀಸ್ ವಿರುದ್ಧ ಗೆಲ್ಲುತ್ತೇವೆ’ ಎಂದು ಅವರು ಹೇಳಿದರು.

‘ಭಾನುವಾರ ಆಡುವ ಹನ್ನೊಂದು ಮಂದಿಯ ಪಟ್ಟಿಯನ್ನು ಬೆಳಿಗ್ಗೆಯೇ ನಿರ್ಧರಿಸುತ್ತೇವೆ. ಕ್ವಾರ್ಟರ್‌ಫೈನಲ್‌ಗೆ ಮೊದಲು ಎಲ್ಲ ಆಟಗಾರರಿಗೂ ಆಡುವ ಅವಕಾಶ ಸಿಗಬೇಕು. ಆಫ್ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಸುರೇಶ್ ರೈನಾ ಅವರಿಬ್ಬರೇ ಒಂದೂ ಪಂದ್ಯ ಆಡಿಲ್ಲ’ ಎಂದು ಹೇಳಿದ ಅವರು ಅಶ್ವಿನ್ ಮತ್ತು ರೈನಾ ಆಡುವ ಸೂಚನೆ ಕೊಟ್ಟರು.

‘ಬ್ಯಾಟಿಂಗ್ ಪವರ್‌ಪ್ಲೇನಲ್ಲಿ ವಿಕೆಟ್ ಉಳಿಸಿಕೊಂಡು ರನ್ ಗಳಿಸಬೇಕಾಗುತ್ತದೆ. ನಾಗಪುರದಲ್ಲಿ ನಾನು ಮತ್ತು ವಿರಾಟ್ ಆ ಬಗ್ಗೆ ಗಮನ ಕೊಡಬೇಕಿತ್ತು. ಆದರೆ ನಾವು ಹಿಂದೆ ಬಿದ್ದೆವು. ಅಂಥ ತಪ್ಪು ಮತ್ತೆ ಆಗುವುದಿಲ್ಲ. ನಮ್ಮ ಫೀಲ್ಡಿಂಗ್ ಸುಧಾರಿಸಿದೆ. ನಮ್ಮ ಬ್ಯಾಟಿಂಗ್ ಖ್ಯಾತಿಗೆ ತಕ್ಕಂತೆ ಪುಟಿದೇಳಲಿದೆ. ಸಚಿನ್ ತೆಂಡೂಲ್ಕರ್ ದಾಖಲೆಗಾಗಿ ಆಡುವುದಿಲ್ಲ.ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಮಾಡುವ ಅವರು ತಮ್ಮ ಅನುಭವವನ್ನು ಯಾವಾಗಲೂ ತಂಡಕ್ಕೆ ಉಪಯೋಗವಾಗುವಂತೆ ಕೊಡುತ್ತಾರೆ’ ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.