ನವದೆಹಲಿ: ಯುವರಾಜ್ ಸಿಂಗ್ ಮತ್ತೆ ಭಾರತದ ನೆರವಿಗೆ ನಿಂತಿದ್ದಾರೆ. ಹಾಲೆಂಡ್ ನೀಡಿದ್ದ ಸುಲಭ ಗುರಿ ಒಂದು ಹಂತದಲ್ಲಿ ಕಷ್ಟದಂತೆ ಕಂಡುಬಂದರೂ ಭಾರತದ ಗೆಲುವಿನ ಓಟಕ್ಕೆ ಅಡ್ಡಿಯಾಗಲಿಲ್ಲ. ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬುಧವಾರ ಐದು ವಿಕೆಟ್‌ಗಳ ಗೆಲುವು ಪಡೆದ ಮಹೇಂದ್ರ ಸಿಂಗ್ ದೋನಿ ಬಳಗ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿತು.
ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಆತಿಥೇಯ ತಂಡ ಹಾಲೆಂಡ್‌ನ್ನು ಬಗ್ಗುಬಡಿಯುತ್ತದೆ ಎಂಬ ನಿರೀಕ್ಷೆ ಇಡಲಾಗಿತ್ತು. ಆದರೆ ಅಂತಹ ಅಬ್ಬರದ ಪ್ರದರ್ಶನ ಭಾರತದಿಂದ ಹೊರಹೊಮ್ಮಲಿಲ್ಲ. ಎರಡು ಪಾಯಿಂಟ್ ಗಿಟ್ಟಿಸಲು ಬೇಕಾಗಿದ್ದ ಜಯ ಮಾತ್ರ ದಕ್ಕಿತು. ಅದರ ಕ್ರೆಡಿಟ್ ಯುವರಾಜ್ ಸಿಂಗ್‌ಗೆ ಸಲ್ಲಬೇಕು. ನಾಲ್ಕು ಪಂದ್ಯಗಳಿಂದ ಏಳು ಪಾಯಿಂಟ್ ಕಲೆಹಾಕಿದ ಭಾರತ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಉಳಿದುಕೊಂಡಿದೆ.
ಹಾಲೆಂಡ್ ನೀಡಿದ್ದ 190 ರನ್‌ಗಳ ಗುರಿ ಕಷ್ಟದ್ದಾಗಿರಲಿಲ್ಲ. ಜಹೀರ್ ಖಾನ್ (20ಕ್ಕೆ 3), ಯುವರಾಜ್ ಸಿಂಗ್ (43ಕ್ಕೆ 2) ಮತ್ತು ಪಿಯೂಷ್ ಚಾವ್ಲಾ (47ಕ್ಕೆ 3) ಅವರು ಮೊದಲು ಬ್ಯಾಟ್ ಮಾಡಿದ ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದರು. ಭಾರತ ಗೆಲುವಿನ ಹಾದಿಯಲ್ಲಿ ಅಲ್ಪ ಆತಂಕ ಎದುರಿಸಿ 36.3 ಓವರ್‌ಗಳಲ್ಲಿ 5 ವಿಕೆಟ್‌ಗೆ ಗುರಿ ತಲುಪಿತು. ಬ್ಯಾಟಿಂಗ್‌ನಲ್ಲೂ ಮಿಂಚಿ ಮತ್ತೊಮ್ಮೆ ಆಲ್‌ರೌಂಡ್ ಪ್ರದರ್ಶನ ನೀಡಿದ ಯುವರಾಜ್ (ಔಟಾಗದೆ 51, 73 ಎಸೆತ, 7 ಬೌಂ) ಕೋಟ್ಲಾ ಕ್ರೀಡಾಂಗಣದ ಹೊನಲು ಬೆಳಕಿನಡಿ ಮಿರಮಿರನೆ ಮಿಂಚಿದರು.
ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಆತಿಥೇಯ ತಂಡಕ್ಕೆ ಅಬ್ಬರದ ಆರಂಭ ನೀಡಿದ್ದರು. ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿ ಭಾರತದ ಚೇಸಿಂಗ್‌ಗೆ ಚಾಲನೆ ನೀಡಿದ ಸೆಹ್ವಾಗ್ (39, 26 ಎಸೆತ, 5 ಬೌಂ, 2 ಸಿಕ್ಸರ್) ಹಾಗೂ ಸಚಿನ್ (27, 22 ಎಸೆತ, 6 ಬೌಂ) 45 ಎಸೆತಗಳಲ್ಲಿ 69 ರನ್ ಪೇರಿಸಿದರು.
ಆದರೆ ಬಳಿಕ ಕೋಟ್ಲಾದಲ್ಲಿ ನಡೆದದ್ದು ನಾಟಕೀಯ ಬೆಳವಣಿಗೆ. ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದ್ದ ಭಾರತ 100 ರನ್‌ಗಳ ಗಡಿ ದಾಟುವ ಮುನ್ನ ನಾಲ್ಕು ವಿಕೆಟ್ ಕಳೆದುಕೊಂಡಿತು. ಏಕಪಕ್ಷೀಯವಾಗಿ ಕೊನೆಗೊಳ್ಳಬೇಕಿದ್ದ ಪಂದ್ಯಕ್ಕೆ ತಿರುವು ತಂದದ್ದು ಪೀಟರ್ ಸೀಲಾರ್. ಸಚಿನ್, ಸೆಹ್ವಾಗ್ ಅಲ್ಲದೆ, ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು ಬಂದ ಯೂಸುಫ್ ಪಠಾಣ್ (11) ಅವರನ್ನು ಪೆವಿಲಿಯನ್‌ಗಟ್ಟಿದ ಸೀಲಾರ್ ಹಾಲೆಂಡ್ ಪಾಳೆಯದಲ್ಲಿ ಹರ್ಷ ತಂದಿತ್ತರು. ವಿರಾಟ್ ಕೊಹ್ಲಿ ಕೂಡ ವಿಫಲರಾದಾಗ ಕ್ರೀಡಾಂಗಣದಲ್ಲಿ ನಿಶ್ಯಬ್ಧ ಆವರಿಸಿತು.
ಹಾಲೆಂಡ್ ಅಚ್ಚರಿಯ ಗೆಲುವು ಪಡೆಯುತ್ತದೆಯೇ ಎಂಬ ಯೋಚನೆ ಪ್ರೇಕ್ಷಕರ ಮನದಲ್ಲಿ ಹಾದುಹೋದ ಕ್ಷಣ ಅದಾಗಿತ್ತು. ಆದರೆ ಯುವರಾಜ್ ಸಿಂಗ್ ಅದಕ್ಕೆ ಅವಕಾಶ ನೀಡಲಿಲ್ಲ. ಗೌತಮ್ ಗಂಭೀರ್ ಜೊತೆ ಐದನೇ ವಿಕೆಟ್‌ಗೆ 40 ರನ್ ಸೇರಿಸಿದಾಗ ಎಲ್ಲರೂ ಅಲ್ಪ ನಿಟ್ಟುಸಿರು ಬಿಟ್ಟರು. ಗಂಭೀರ್ (28, 28 ಎಸೆತ, 3 ಬೌಂ) ಮರಳಿದಾಗ ಭಾರತ ಅಪಾಯದಿಂದ ಪಾರಾಗಿತ್ತು. ಬಳಿಕ ನಾಯಕ ಮಹೇಂದ್ರ ಸಿಂಗ್ ದೋನಿ (ಔಟಾಗದೆ 19) ಅವರನ್ನು ಕೂಡಿಕೊಂಡ ಪಂಜಾಬ್‌ನ ಎಡಗೈ ಬ್ಯಾಟ್ಸ್‌ಮನ್ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದಲ್ಲದೆ, ಐದು ವಿಕೆಟ್ ಪಡೆದಿದ್ದ ಯುವರಾಜ್ ಮತ್ತೊಮ್ಮೆ ‘ಪಂದ್ಯಶ್ರೇಷ್ಠ’ ಎನಿಸಿಕೊಂಡರು. ತನ್ನ ಸುತ್ತ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದರೂ ‘ಯುವಿ’ ರಾಜ ಗಾಂಭೀರ್ಯದಿಂದ ಬ್ಯಾಟಿಂಗ್ ಮಾಡಿದರು. ಆಟದತ್ತ ಗಮನ ಕೇಂದ್ರೀಕರಿಸಲು ಯಶಸ್ವಿಯಾದರು. ಅಗತ್ಯಕ್ಕೆ ತಕ್ಕಂತೆ ಇನಿಂಗ್ಸ್ ಕಟ್ಟಿದರು.
ತಂದೆ ಯೋಗರಾಜ್ ಸಿಂಗ್ ಎರಡು ದಿನಗಳ ಹಿಂದೆ ಹೇಳಿದ ಮಾತು ನಿಜ ಎಂಬುದನ್ನು ಯುವಿ ತೋರಿಸಿಕೊಟ್ಟರು. ‘ಯುವರಾಜ್ ಪ್ರಬುದ್ಧರಾಗಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಇನಿಂಗ್ಸ್ ಕಟ್ಟಲು ಅವರಿಗೆ ತಿಳಿದಿದೆ’ ಎಂದು ಯೋಗರಾಜ್ ನುಡಿದಿದ್ದರು.
ಲಯ ಕಂಡುಕೊಂಡ ಬೌಲಿಂಗ್: ಮಧ್ಯಾಹ್ನ ಟಾಸ್ ಗೆದ್ದ ಹಾಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆ ನಿರ್ಧಾರಕ್ಕೆ ತಕ್ಕ ಫಲ ಲಭಿಸಲಿಲ್ಲ. ಒಂದೆರಡು ಓವರ್‌ಗಳನ್ನು ಹೊರತುಪಡಿಸಿ ಭಾರತದ ಬೌಲರ್‌ಗಳು ಇನಿಂಗ್ಸ್‌ನ ಉದ್ದಕ್ಕೂ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಹಿಡಿತದಲ್ಲಿಟ್ಟರು. ಕೋಟ್ಲಾ ಪಿಚ್ ನಿಧಾನಗತಿ ಬೌಲರ್‌ಗಳಿಗೆ ನೆರವು ನೀಡುತ್ತಿದ್ದ ಕಾರಣ ದೋನಿ ನಾಲ್ಕನೇ ಓವರ್‌ನಿಂದಲೇ ಸ್ಪಿನ್ ಆಕ್ರಮಣಕ್ಕೆ ಚಾಲನೆ ನೀಡಿದರು. ಇದರಿಂದ ರನ್‌ರೇಟ್ ಕಡಿಮೆಯಾಯಿತು.ಹಾಲೆಂಡ್‌ಗೆ ಅಬ್ಬರದ ಆರಂಭ ಲಭಿಸಲಿಲ್ಲ.
ಆದರೆ ಆರಂಭದಲ್ಲೇ ವಿಕೆಟ್ ಬೀಳಲಿಲ್ಲ. ಮೊದಲ ಯಶಸ್ಸಿಗಾಗಿ ಭಾರತಕ್ಕೆ 16ನೇ ಓವರ್‌ವರೆಗೆ ಕಾಯಬೇಕಾಗಿ ಬಂತು. ಪಿಯೂಷ್ ಚಾವ್ಲಾ ಅವರ ಗೂಗ್ಲಿಗೆ ಎರಿಕ್ ಶ್ವಾರ್ಜ್‌ಸ್ಕಿ ಕ್ಲೀನ್‌ಬೌಲ್ಡ್ ಆದರು. ಚಾವ್ಲಾ ನಿಟ್ಟುಸಿರು ಬಿಟ್ಟರು. ಹಿಂದಿನ ಪಂದ್ಯಗಳಲ್ಲಿ ಅನುಭವಿಸಿದ ನಿರಾಸೆಯಿಂದ ಹೊರಬರಲು ಅವರಿಗೆ ಒಂದು ವಿಕೆಟ್‌ನ ಅಗತ್ಯವಿತ್ತು.
ಆ ವೇಳೆಗಾಗಲೇ ಎರಿಕ್ ಶ್ವಾರ್ಜ್‌ಸ್ಕಿ (48 ಎಸೆತಗಳಲ್ಲಿ 28) ಅವರು ವೆಸ್ಲಿ ಬಾರೆಸಿ (58 ಎಸೆತಗಳಲ್ಲಿ 26) ಜೊತೆ ಮೊದಲ ವಿಕೆಟ್‌ಗೆ 56 ರನ್ ಸೇರಿಸಿದ್ದರು. ಆದರೆ ಅದಕ್ಕಾಗಿ 92 ಎಸೆತಗಳನ್ನು ತೆಗೆದುಕೊಂಡರು. ಒಂದು ‘ಬ್ರೇಕ್’ ಲಭಿಸಿದ ಬಳಿಕ ಭಾರತ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು. ಯುವರಾಜ್ ಮೊದಲ ಓವರ್‌ನಲ್ಲೇ ಬಾರೆಸಿ ಅವರನ್ನು ಪೆವಿಲಿಯನ್‌ಗಟ್ಟಿದರು.
7 ರಿಂದ 29ನೇ ಓವರ್‌ವರೆಗೆ ದೋನಿ ಎರಡೂ ಬದಿಯಿಂದ ಸ್ಪಿನ್ ಬೌಲರ್‌ಗಳನ್ನು ದಾಳಿಗಿಳಿಸಿದರು. ಇದರಿಂದ ಹಾಲೆಂಡ್ ಬ್ಯಾಟ್ಸ್‌ಮನ್‌ಗಳು ಚಡಪಡಿಸಿದರು. ‘ಆರೆಂಜ್ ಪಡೆ’ 29ನೇ ಓವರ್ ವೇಳೆಗೆ ಎರಡು ವಿಕೆಟ್‌ಗೆ 99 ರನ್ ಗಳಿಸಿತ್ತು. ಆರಂಭದಲ್ಲಿ ಒಂದೇ ಓವರ್ ಎಸೆದಿದ್ದ ಆಶೀಶ್ ನೆಹ್ರಾ ಮತ್ತೆ 30ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದರಲ್ಲದೆ, ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಉತ್ತಮವಾಗಿ ಆಡುತ್ತಿದ್ದ ಟಾಮ್ ಕೂಪರ್ (29) ಅವರು ದೋನಿಗೆ ಕ್ಯಾಚಿತ್ತು ನಿರ್ಗಮಿಸಿದರು.
ಜಹೀರ್ ಖಾನ್ ಕೂಡಾ ಎರಡನೇ ಸ್ಪೆಲ್‌ನ ಮೊದಲ ಓವರ್‌ನಲ್ಲಿ ವಿಕೆಟ್ ಪಡೆದರು. ನೆಹ್ರಾ ಎರಡನೇ ಸ್ಪೆಲ್‌ನಲ್ಲಿ ಮೂರು ಓವರ್‌ಗಳಲ್ಲಿ ನಾಲ್ಕು ರನ್ ನೀಡಿ ಒಂದು ವಿಕೆಟ್ ಪಡೆದರು. ಇದರಿಂದ ಹಾಲೆಂಡ್ ತನ್ನ ಇನಿಂಗ್ಸ್‌ನ ಮಧ್ಯದಲ್ಲಿ ಹಠಾತ್ ಕುಸಿತ ಕಂಡಿತು. 28 ರನ್ ಅಂತರದಲ್ಲಿ ಐದು ವಿಕೆಟ್ ಉರುಳಿದವು. ನಾಯಕ ದೋನಿ ರೂಪಿಸಿದ್ದ ಬೌಲಿಂಗ್ ಯೋಜನೆ ಚೆನ್ನಾಗಿತ್ತು. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಸ್ಪಿನ್ ಬಲೆಯಲ್ಲಿ ಕೆಡವಿದ ಬಳಿಕ ಅವರು ವೇಗಿಗಳನ್ನು ದಾಳಿಗಿಳಿಸಿದರು. ಇದು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಯಿತು.
ಪೀಟರ್ ಬೊರೆನ್ (38, 36 ಎಸೆತ, 3 ಬೌಂ, 2 ಸಿಕ್ಸರ್) ಮತ್ತು ಮುದಸ್ಸರ್ ಬುಖಾರಿ (21, 18 ಎಸೆತ, 1ಬೌಂ, 2 ಸಿಕ್ಸರ್) ಕೊನೆಯಲ್ಲಿ ಕೆಲವೊಂದು ದೊಡ್ಡ ಹೊಡೆತಗಳಿಗೆ ಮುಂದಾದದ್ದು ಮಾತ್ರ ಹಾಲೆಂಡ್ ಇನಿಂಗ್ಸ್‌ನ ‘ಹೈಲೈಟ್’. 43ನೇ ಓವರ್‌ನಿಂದ ತಂಡ ಬ್ಯಾಟಿಂಗ್ ಪವರ್ ಪ್ಲೇ ತೆಗೆದುಕೊಂಡಿತು. ಆದರೆ ‘ಪವರ್ ಪ್ಲೇ’ ಪೂರ್ಣಗೊಳಿಸುವ ಮುನ್ನವೇ 46.4 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟ್ ಆಯಿತು. ಆದರೆ ಈ ಅವಧಿಯಲ್ಲಿ 42 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಐಸಿಸಿ ವಿಶ್ವಕಪ್ 2011 ಪಾಯಿಂಟ್ ಪಟ್ಟಿ |
ಸ್ಕೋರು ವಿವರ
ಹಾಲೆಂಡ್: 46.4 ಓವರ್‌ಗಳಲ್ಲಿ 189
ಎರಿಕ್ ಶ್ವಾರ್ಜ್‌ಸ್ಕಿ ಬಿ ಪಿಯೂಷ್ ಚಾವ್ಲಾ 28
‘ಎ’ ಗುಂಪು |
ವೆಸ್ಲಿ ಬಾರೆಸಿ ಎಲ್‌ಬಿಡಬ್ಲ್ಯು ಬಿ ಯುವರಾಜ್ ಸಿಂಗ್ 26
ಟಾಮ್ ಕೂಪರ್ ಸಿ ದೋನಿ ಬಿ ಆಶೀಶ್ ನೆಹ್ರಾ 29
ತಂಡ | ಪಂದ್ಯ | ಜಯ | ಸೋಲು | ಟೈ | ರದ್ದು | ಪಾಯಿಂಟ್ | ರನ್‌ರೇಟ್ |
ನ್ಯೂಜಿಲೆಂಡ್ | 4 | 3 | 1 | 0 | 0 | 6 | +1.848 |
ಪಾಕಿಸ್ತಾನ | 4 | 3 | 1 | 0 | 0 | 6 | +1.760 |
ಶ್ರೀಲಂಕಾ | 4 | 2 | 1 | 0 | 1 | 5 | +2.663 |
ಆಸ್ಟ್ರೇಲಿಯ | 3 | 2 | 0 | 0 | 1 | 5 | +1.813 |
ಜಿಂಬಾಬ್ವೆ | 3 | 1 | 2 | 0 | 0 | 2 | +0.079 |
ಕೆನಡಾ | 4 | 1 | 3 | 0 | 0 | 2 | -2.083 |
ಕೀನ್ಯಾ | 4 | 0 | 4 | 0 | 0 | 0 | -3.403 |
ಟೆನ್ ಡಾಶೆಟ್ ಸಿ ಜಹೀರ್ ಬಿ ಯುವರಾಜ್ ಸಿಂಗ್ 11
ಅಲೆಕ್ಸಿ ಕೆರ್ವೆಜಿ ಸಿ ಹರಭಜನ್ ಬಿ ಪಿಯೂಷ್ ಚಾವ್ಲಾ 11
ಬಾಸ್ ಜುಡೆರೆಂಟ್ ಎಲ್‌ಬಿಡಬ್ಲ್ಯು ಬಿ ಜಹೀರ್ ಖಾನ್ 00
ಟಾಮ್ ಡಿ ಗ್ರೂಥ್ ರನೌಟ್ 05
ಪೀಟರ್ ಬೊರೆನ್ ಸಿ ನೆಹ್ರಾ ಬಿ ಜಹೀರ್ ಖಾನ್ 38
ಬ್ರಾಡ್ಲಿ ಕ್ರುಗೆರ್ ರನೌಟ್ 08
ಮುದಸ್ಸರ್ ಬುಖಾರಿ ಬಿ ಜಹೀರ್ ಖಾನ್ 21
ಪೀಟರ್ ಸೀಲಾರ್ ಔಟಾಗದೆ 00
ಇತರೆ: (ಬೈ-6, ಲೆಗ್‌ಬೈ-3, ವೈಡ್-2, ನೋಬಾಲ್-1) 12
ವಿಕೆಟ್ ಪತನ: 1-56 (ಶ್ವಾರ್ಜ್‌ಸ್ಕಿ; 15.2), 2-64 (ಬಾರೆಸಿ; 18.6), 3-99 (ಡಾಶೆಟ್; 28.2), 4-100 (ಕೂಪರ್; 29.1), 5-101 (ಜುಡೆರೆಂಟ್; 30.6), 6-108 (ಗ್ರೂಥ್; 34.2), 7-127 (ಕೆರ್ವೆಜಿ; 38.1), 8-151 (ಕ್ರುಗೆರ್; 42.2), 9-189 (ಬೊರೆನ್; 46.1), 10-189 (ಬುಖಾರಿ; 46.4).
‘ಬಿ’ ಗುಂಪು |
ತಂಡ | ಪಂದ್ಯ | ಜಯ | ಸೋಲು | ಟೈ | ರದ್ದು | ಪಾಯಿಂಟ್ | ರನ್‌ರೇಟ್ |
ಭಾರತ | 4 | 3 | 0 | 1 | 0 | 7 | +0.992 |
ಇಂಗ್ಲೆಂಡ್ | 4 | 2 | 1 | 1 | 0 | 5 | +0.054 |
ವೆಸ್ಟ್ ಇಂಡೀಸ್ | 3 | 2 | 1 | 0 | 0 | 4 | +2.667 |
ದಕ್ಷಿಣ ಆಫ್ರಿಕ | 3 | 2 | 1 | 0 | 0 | 4 | +1.754 |
ಐರ್ಲೆಂಡ್ | 3 | 1 | 2 | 0 | 0 | 2 | -0.296 |
ಬಾಂಗ್ಲಾದೇಶ | 3 | 1 | 2 | 0 | 0 | 0 | -1.764 |
ಹಾಲೆಂಡ್ | 4 | 0 | 4 | 0 | 0 | 0 | -2.728 |
ಭಾರತ: 36.3 ಓವರ್‌ಗಳಲ್ಲಿ 5 ವಿಕೆಟ್‌ಗೆ 191
ವೀರೇಂದ್ರ ಸೆಹ್ವಾಗ್ ಸಿ ಕೆರ್ವೆಜಿ ಬಿ ಪೀಟರ್ ಸೀಲಾರ್ 39
ಸಚಿನ್ ತೆಂಡೂಲ್ಕರ್ ಸಿ ಕ್ರುಗೆರ್ ಬಿ ಪೀಟರ್ ಸೀಲಾರ್ 27
ಯೂಸುಫ್ ಪಠಾಣ್ ಸಿ ಮತ್ತು ಬಿ ಪೀಟರ್ ಸೀಲಾರ್ 11
ಗೌತಮ್ ಗಂಭೀರ್ ಬಿ ಮುದಸ್ಸರ್ ಬುಖಾರಿ 28
ವಿರಾಟ್ ಕೊಹ್ಲಿ ಬಿ ಪೀಟರ್ ಬೊರೆನ್ 12
ಯುವರಾಜ್ ಸಿಂಗ್ ಔಟಾಗದೆ 51
ಮಹೇಂದ್ರ ಸಿಂಗ್ ದೋನಿ ಔಟಾಗದೆ 19
ಇತರೆ: (ವೈಡ್-4) 04
ವಿಕೆಟ್ ಪತನ: 1-69 (ಸೆಹ್ವಾಗ್; 7.3), 2-80 (ಸಚಿನ್; 9.1), 3-82 (ಪಠಾಣ್; 9.5), 4-99 (ಕೊಹ್ಲಿ; 14.3), 5-139 (ಗಂಭೀರ್; 23.1).
ಬೌಲಿಂಗ್: ಮುದಸ್ಸರ್ ಬುಖಾರಿ 6-1-33-1, ರ್ಯಾನ್ ಟೆನ್ ಡಾಶೆಟ್ 7-0-38-0, ಪೀಟರ್ ಸೀಲಾರ್ 10-1-53-3, ಪೀಟರ್ ಬೊರೆನ್ 8-0-33-1, ಟಾಮ್ ಕೂಪರ್ 2-0-11-0, ಬ್ರಾಡ್ಲಿ ಕ್ರುಗೆರ್ 3.3-0-23-0
ಫಲಿತಾಂಶ: ಭಾರತಕ್ಕೆ ಐದು ವಿಕೆಟ್ ಜಯ
ಪಂದ್ಯಶ್ರೇಷ್ಠ: ಯುವರಾಜ್ ಸಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.