ADVERTISEMENT

ಮತ್ತೇರುವ ಹೊತ್ತಿಗೆ ರೇಸ್ ಮುಗಿದಿತ್ತು...!

ಡಿ.ಗರುಡ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST
ಮತ್ತೇರುವ ಹೊತ್ತಿಗೆ ರೇಸ್ ಮುಗಿದಿತ್ತು...!
ಮತ್ತೇರುವ ಹೊತ್ತಿಗೆ ರೇಸ್ ಮುಗಿದಿತ್ತು...!   

ಬೆಂಗಳೂರು: ಗುಂಗಿಹುಳವು ಗುಯ್‌ಗುಟ್ಟಿದಂತೆ ರುಮ್...ರುಮ್... ಎನ್ನುವ ನಾದ ನಿರಂತರ. ಮಧ್ಯಾಹ್ನವೇ ಮಬ್ಬುಗತ್ತಲು. ಟ್ಯಾಪ್‌ನಿಂದ ಸುರಿದ ಬೀಯರ್ ಎಷ್ಟೋ! ಲೆಕ್ಕವಿಟ್ಟವರು ಯಾರು? ಅಂತೂ ಮತ್ತೇರುವ ಹೊತ್ತಿಗೆ ರೇಸ್ ಮುಗಿದಿತ್ತು.

ಹೌದು; ಉದ್ಯಾನನಗರಿಯಲ್ಲಿ ವಾರಾಂತ್ಯದ ರಜೆಗೆ ಎಫ್-1 ಮೆರುಗು. ಕ್ಲಬ್ ಹಾಗೂ ಪಬ್‌ಗಳಲ್ಲಿ ಬೆಳಕು ಮಂದಗೊಳಿಸಿ, ಬೃಹತ್ ಪರದೆಗಳ ಮೇಲೆ ಕಾರುಗಳ ಮಿಂಚಿನ ಓಟದ ಪ್ರದರ್ಶನ. ಮಧ್ಯಾಹ್ನದ ಹೊತ್ತಿಗಾಗಲೇ ರೇಸ್ ಪ್ರೇಮಿಗಳು ತಮ್ಮ ನೆಚ್ಚಿನ ತಂಡಗಳ ಟಿ-ಶರ್ಟ್ ತೊಟ್ಟುಕೊಂಡು ಕೈಯಲ್ಲಿ ಮಗ್ಗು ಹಿಡಿದುಕೊಂಡು ದೊಡ್ಡ ಪರದೆಯಲ್ಲಿ ಸರಸರನೆ ಸಾಗುತ್ತಿದ್ದ ಕಾರುಗಳ ಮೇಲೆ ಕಣ್ಣು ನೆಟ್ಟರು.

ಎತ್ತರದ ತಿರುಗುಣಿಯ ಆಸನದಲ್ಲಿ ಕುಳಿತು ರುಮ್...ರುಮ್... ಸದ್ದಿನೊಂದಿಗೆ ಲಯಗೂಡಿಸಿ ತೂಗುತ್ತಿದ್ದ `ಮಿಡಿ~ಯುದ್ದದ ಉಡುಗೆ ತೊಟ್ಟ ಹುಡುಗಿಯರು, ಅವರಿಗೆ ಒರಗಿಕೊಂಡ ಹುಡುಗರು ಎಲ್ಲರೂ `ಕಮಾನ್ ಶೂಮಿ, ಕಮಾನ್ ವೆಟ್ಟಿ...~ ಎಂದು ಗಂಟಲು ಕಿತ್ತುಹೋಗುವ ಹಾಗೆ ಕೂಗುಹಾಕಿದರು. ಪರದೆಯ ಮೇಲೆ ಸಹಾರಾ ಫೋರ್ಸ್ ಇಂಡಿಯಾ ತಂಡದ ಕಾರು ಕಂಡಾಗ ಮಾತ್ರ `ಓ...ಲುಕ್...ಆಡ್ರಿಯಾನ್ ಸುಟಿಲ್~ ಎನ್ನುವ ಧ್ವನಿ.

ಇಂಥ ವಾತಾವರಣ ಉದ್ಯಾನನಗರಿಯಲ್ಲಿ ಭಾನುವಾರ ಕಾಣಿಸಿತು. ಮಹಾತ್ಮಾ ಗಾಂಧಿ ರಸ್ತೆಯ ತುದಿಯಲ್ಲಿರುವ ಯುವಕರ ಅತ್ಯಂತ ಆಕರ್ಷಣೆಯ ಪಬ್‌ನಲ್ಲಿಯಂತೂ ಸೂರ್ಯ ನೆತ್ತಿಯ ಮೇಲೆ ಬರುವ ಹೊತ್ತಿಗೆ ಸಂಗೀತದ ಅಬ್ಬರ. ಆ ವೇಳೆಗಾಗಲೇ ಸಾಕಷ್ಟು ಯುವಕ-ಯುವತಿಯರ ದಂಡು. ಇದಕ್ಕೆ ಕಾರಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ಫಾರ್ಮುಲಾ ಒನ್ ಗ್ರ್ಯಾನ್ ಪ್ರಿ ಮೋಟಾರ್ ರ‌್ಯಾಲಿ.

ಅತ್ತ ನವದೆಹಲಿ ಸಮೀಪದ ಗ್ರೇಟರ್ ನೊಯಿಡಾದಲ್ಲಿನ ಬುದ್ಧ ಇಂಟರ್‌ನ್ಯಾಷನಲ್ ಟ್ರ್ಯಾಕ್‌ನಲ್ಲಿ ರೇಸರ್‌ಗಳು ಕಾರು ಏರಿ ವೇಗದ ಸವಾರಿಗೆ ಸಜ್ಜಾಗುವ ವೇಳೆಗೆ ಇತ್ತ ಬೆಂಗಳೂರಿನಲ್ಲಿ ರೇಸ್ ಪ್ರೇಮಿಗಳು ಟೆಲಿವಿಷನ್ ಸೆಟ್‌ಗಳ ಮುಂದೆ ಸೆಟ್ಟಾಗಿ ಕುಳಿತಿದ್ದರು.
 
ಕೆಲವರಿಗೆ ದೊಡ್ಡ ಪರದೆಯ ಮೇಲೆ ಈ ರೋಮಾಂಚನದ ಸವಿಯನ್ನು ಸವಿಯುವ ಆಸೆ. ಅಂಥವರು ಕ್ಲಬ್ ಹಾಗೂ ಪಬ್‌ಗಳ ಕಡೆಗೆ ತಮ್ಮ ಬಂಡಿ ಓಡಿಸಿದರು. ಟೆಲಿವಿಷನ್ ನೇರ ಪ್ರಸಾರದಲ್ಲಿ ಕಾರುಗಳು ಗುರುಗುಡುವ ಮೊದಲೇ ಅಬ್ಬರದ ಸಂಗೀತಕ್ಕೆ ಕುಣಿದವರೂ ಅಪಾರ.

ಹೊಗೆ...!:
ದೂರದ ನೊಯಿಡಾದಲ್ಲಿ ಬಿಎಂಡಬ್ಲ್ಯು ಸೌಬರ್ ಚಾಲಕ ಕಮುಯಿ ಕೊಬಾಯಾಶಿ ತಮ್ಮ ಕಾರನ್ನು ಗುರುಗುಟ್ಟಿಸಿ ಹೊಗೆ ಎಬ್ಬಿಸುವ ಹೊತ್ತಿಗೆ ಇಲ್ಲಿ ಪಬ್‌ನಲ್ಲಿ ಫ್ಲೆವರ್ ಸಿಗರೇಟ್ ಹಿಡಿದ ಬೆಡಗಿಯ ಕೆಂದುಟಿಯಿಂದ ಹೊಗೆ. ಕಾರುಗಳು ಸರಸರವೆಂದು ಟ್ರ್ಯಾಕ್‌ನಲ್ಲಿ ಸಾಗುವ ಅದ್ಭುತವನ್ನು ನೋಡುತ್ತಲೇ ಫಿಲ್ಟರ್ ಟಿಪ್ ಅನ್ನು ತುಟಿಗಿಟ್ಟು ಗತ್ತಿನಲ್ಲಿಯೇ ಹೊಗೆಯ ಗಮ್ಮತ್ತಿನಲ್ಲಿ ತೇಲುತ್ತಿದ್ದ ಹುಡುಗಿಯ ಮೊಗದಲ್ಲಿಯೂ ಮಂದಹಾಸ ಅಂದದಿಂದ ನಲಿದಿತ್ತು.

ರೇಸ್ ಹಾಕು: ಭಾನುವಾರ ಮಧ್ಯಾಹ್ನದ ಸಿನಿಮಾ ನೋಡಬೇಕೆಂದು ಟೆಲಿವಿಷನ್ ಮುಂದೆ ಕುಳಿತ ಅಮ್ಮಂದಿರಿಗಂತೂ ಭಾರಿ ಕಿರಿಕಿರಿ. ಪುಟಾಣಿ ಮಕ್ಕಳು `ಫಾರ್ಮುಲಾ ಒನ್ ರೇಸ್ ಹಾಕು...~ ಎಂದು ದುಂಬಾಲು ಬಿದ್ದರು. ಅಮ್ಮಂದಿರು ಕೂಡ ಒಂದಿಷ್ಟು ಹೊತ್ತು ಕಾರುಗಳ ಓಟವನ್ನು ನೋಡಿ ಕುಳಿತಲ್ಲಿಯೇ ನಿದ್ದೆಗೆ ಜಾರಿದರೆ, ಮಕ್ಕಳು ಎದ್ದೆದ್ದು ಕುಣಿದು `ಇದು ಶೂಮ್ಯಾಕರ್... ಮೊದಲು ಕೆಂಪು ಡ್ರೆಸ್ ಹಾಕುತಿದ್ದ. ಈಗ ಬೇರೆ ಟೀಮ್. ಡ್ರೆಸ್ ಚೇಂಜ್ ಆಗಿದೆ...~ ಎಂದೆಲ್ಲಾ ತಮ್ಮ ರೇಸಿಂಗ್ ಜ್ಞಾನವನ್ನು ಅನಾವರಣಗೊಳಿಸಿದರು.

ಮಾಲ್‌ಗಳಲ್ಲಿ ಮಿನಿ ಕಾರ್: ಇಂಡಿಯನ್ ಗ್ರ್ಯಾನ್ ಪ್ರಿ ಮಾಧ್ಯಮಗಳಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಂತೆಯೇ ಮಾಲ್‌ಗಳಲ್ಲಿ ಮಿನಿ ರೇಸಿಂಗ್ ಕಾರ್‌ಗಳ ಮಾರಾಟವೂ ಜೋರಾಗಿದೆ. ಯಾವುದೇ ಕ್ರೇಜ್ ಇದ್ದರೆ ಅದನ್ನು ಬಂಡವಾಳವಾಗಿಸಿಕೊಳ್ಳುವ ಉತ್ಪಾದಕರು ಕೀಬಂಚ್‌ನಿಂದ ಹಿಡಿದು ವಿವಿಧ ರೀತಿಯ ಎಫ್-1 ಸ್ಮರಣಿಕೆಗಳನ್ನು ಮಾರುಕಟ್ಟಗೆ ಬಿಟ್ಟಿದ್ದಾರೆ.

ಮಕ್ಕಳು ಮಾತ್ರವಲ್ಲ ಹಿರಿಯರಿಗೂ ವೇಗದ ಕಾರುಗಳ ಪ್ರತಿಕೃತಿ ಕೈಯಲ್ಲಿ ಹಿಡಿಯುವ ಉತ್ಸಾಹ. ಫೋರ್ಸ್ ಇಂಡಿಯಾ ತಂಡದ ಟಿ-ಶರ್ಟ್‌ಗಳಿಗೂ ಭಾರಿ ಬೇಡಿಕೆ. ಉದ್ಯಾನನಗರಿಯ ಹೆಚ್ಚಿನ ಮಾಲ್‌ಗಳಲ್ಲಿ ವಿಶೇಷವಾದ ಎಫ್-1 ಮಳಿಕೆಗಳೂ ಕಾಣಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.