ADVERTISEMENT

ಮತ್ತೊಂದು ಸೋಲಿನ ಭೀತಿಯಲ್ಲಿ ಇಂಗ್ಲೆಂಡ್

ಆ್ಯಷಸ್‌ ಟೆಸ್ಟ್‌: ಇಂದಿನಿಂದ ಅಂತಿಮ ಪಂದ್ಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಸಿಡ್ನಿ (ಎಎಫ್‌ಪಿ): ಆ್ಯಷಸ್‌ ಟೆಸ್ಟ್‌ ಸರಣಿಯ ಸತತ ನಾಲ್ಕು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಇಂಗ್ಲೆಂಡ್‌,ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಾದರೂ ಗೆಲುವು ಪಡೆದು ವೈಟ್‌ವಾಷ್ ಭೀತಿಯಿಂದ ಪಾರಾಗಲು ಹವಣಿಸುತ್ತಿದೆ.

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ ಸತತ ನಾಲ್ಕು ಗೆಲುವು ದಾಖಲಿಸಿ ವಿಶ್ವಾಸ ದಿಂದ ಬೀಗುತ್ತಿರುವ ಆಸ್ಟ್ರೇಲಿಯಾ  ಅಂತಿಮ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್‌ಸ್ವೀಪ್ ಮಾಡುವ ಇರಾದೆಯಲ್ಲಿದೆ. 

ಈಗಾಗಲೇ  ಸರಣಿ ಸೋತು  ಮುಖಭಂಗ ಅನುಭವಿಸಿರುವ ಆಂಗ್ಲರು ಈ ಪಂದ್ಯದಲ್ಲಿ ಜಯ ಪಡೆದು ಒಂದು ಪಂದ್ಯವನ್ನಾದರೂ ಗೆದ್ದ ಅಲ್ಪ ತೃಪ್ತಿಯೊಂದಿಗೆ ತವರಿಗೆ ಮರಳುವ ಯೋಚನೆಯಲ್ಲಿದ್ದಾರೆ.

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಸಂಪೂರ್ಣ ವೈಫಲ್ಯ ಅನು ಭವಿಸಿರುವ ಇಂಗ್ಲೆಂಡ್ ತಂಡ ಅಂತಿಮ ಪಂದ್ಯದಲ್ಲಿ ಗ್ಯಾರಿ ಬಾಲನ್ಸ್ , ಸ್ಕಾಟ್‌ ಬಾರ್ತ್ವಿಕ್ ಮತ್ತು ಸ್ಟೀವನ್ ಫಿನ್ ಅವರಿಗೆ ಅಂತಿಮ ಇಲೆವನ್‌ನಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ. ಆಸೀಸ್‌ ಅಂತಿಮ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.

ಸಿಡ್ನಿ ಪಿಚ್‌ ಸ್ಪಿನ್ನರ್‌ ಸ್ನೇಹಿಯಾಗಿದ್ದು, ಇಲ್ಲಿ ಇಂಗ್ಲೆಂಡ್ ತಾನು ಆಡಿ ರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಪಡೆದಿದೆ. ಆಸ್ಟ್ರೇಲಿಯಾ ಒಂದು ಪಂದ್ಯದಲ್ಲಿ ಜಯ ಸಂಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.