ADVERTISEMENT

ಮಳೆಗೆ ಪಂದ್ಯ ರದ್ದು : ದ. ಆಪ್ರಿಕಾಕ್ಕೆ ಸರಣಿ

ಕಾಕ್‌, ಡಿವಿಲಿಯರ್ಸ್‌ ಶತಕ ವೈಭವ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:48 IST
Last Updated 11 ಡಿಸೆಂಬರ್ 2013, 19:48 IST

ಸೆಂಚೂರಿಯನ್‌: ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಾದರೂ ಗೆಲ್ಲಬೇಕು ಎಂಬ ಕನಸು ಹೊಂದಿದ್ದ ಭಾರತ ತಂಡದ ಆಸೆಗೆ ಅಡ್ಡಿಯಾಗಿದ್ದು ಮಳೆ. ದಕ್ಷಿಣ ಆಫ್ರಿಕಾ ತಂಡದ ಇನಿಂಗ್ಸ್‌ ಬಳಿಕ ಸುರಿದ ಭಾರಿ ಮಳೆಯಿಂದಾಗಿ ಕೊನೆಯ ಪಂದ್ಯವನ್ನು ರದ್ದು ಮಾಡಲಾಯಿತು.

ಈ ಕಾರಣ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳ ಸರಣಿಯನ್ನು 2–0ರಲ್ಲಿ ಗೆದ್ದುಕೊಂಡಿತು.ಹರಿಣಗಳ ನಾಡಿನ ನೆಲದಲ್ಲಿ ಭಾರತ 21 ವರ್ಷಗಳಿಂದ ಸರಣಿ ಗೆದ್ದಿರಲಿಲ್ಲ. ಅದು ಈ ಬಾರಿಯೂ ಈಡೇರಲಿಲ್ಲ.

ಈ ಪಂದ್ಯದಲ್ಲಿ ಮಳೆಗೂ ಮುನ್ನ ದಕ್ಷಿಣ ಆಫ್ರಿಕಾ ತಂಡದವರು ಸುರಿಸಿದ್ದ ರನ್‌ಗಳ ಮಳೆ ಪ್ರವಾಸಿಗರ ಪಾಲಿಗೆ ಕಠಿಣ ಸವಾಲಾಗಿ ಪರಿಣಮಿಸಿತ್ತು.

ಸೂಪರ್‌ ಸ್ಪೋರ್ಟ್ಸ್‌ ಪಾರ್ಕ್‌ ಕ್ರೀಡಾಂಗಣ ದಲ್ಲಿ ಬುಧವಾರ ನಡೆದ  ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ತಂಡ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 301 ರನ್‌ಗಳ ಸವಾಲಿನ ಮೊತ್ತವನ್ನು ಕಲೆ ಹಾಕಿತು. 

ಶತಕ ವೈಭವ: ಮೊದಲ ಎರಡೂ ಪಂದ್ಯಗಳಲ್ಲಿ ಶತಕ ಗಳಿಸಿದ್ದ ಕ್ವಿಂಟಾನ್ ಡಿ ಕಾಕ್‌ ಅಬ್ಬರ ಮೂರನೇ ಪಂದ್ಯದಲ್ಲೂ ಮುಂದುವರಿಯಿತು. 120 ಎಸೆತಗಳನ್ನು ಎದುರಿಸಿದ ಆರಂಭಿಕ ಬ್ಯಾಟ್ಸ್‌ಮನ್‌ 9 ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದಂತೆ 101 ರನ್‌ ಕಲೆ ಹಾಕಿದರು. ಈ ಮೂಲಕ ಅವರು ಏಕದಿನ ಕ್ರಿಕೆಟ್‌ನಲ್ಲಿ ಸತತ ಮೂರು ಬಾರಿ ಶತಕ ಗಳಿಸಿದ ವಿಶ್ವದ ಐದನೇ ಬ್ಯಾಟ್ಸ್‌ಮನ್‌ ಎನಿಸಿದರು.

ಪಾಕಿಸ್ತಾನದ ಜಹೀರ್‌ ಅಬ್ಬಾಸ್‌, ಸಯೀದ್‌ ಅನ್ವರ್‌, ದಕ್ಷಿಣ ಆಫ್ರಿಕಾದ ಹರ್ಷಲ್‌ ಗಿಬ್ಸ್‌ ಮತ್ತು ಎ.ಬಿ. ಡಿವಿಲಿಯರ್ಸ್‌ ಈ ಸಾಧನೆ ಮಾಡಿದ್ದಾರೆ. ಕಾಕ್‌ ಮೊದಲೆರೆಡು ಪಂದ್ಯಗಳಲ್ಲಿ ಕ್ರಮವಾಗಿ 135 ಮತ್ತು 106 ರನ್‌ಗಳನ್ನು ಕಲೆ ಹಾಕಿದ್ದರು.

20 ವರ್ಷದ ಕಾಕ್‌ ಇದೇ ವರ್ಷ ನ್ಯೂಜಿಲೆಂಡ್‌ ಎದುರು ಆಡುವ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಬ್ಯಾಟ್ಸ್‌ಮನ್‌ ಗಳಿಸಿದ ನಾಲ್ಕನೇ ಶತಕ ಇದಾಗಿದೆ. ಅದರಲ್ಲಿ ಮೂರು ಶತಕಗಳು ಭಾರತದ ವಿರುದ್ಧವೇ ಬಂದಿವೆ. ಒಂದು ಶತಕವನ್ನು ಹೋದ ತಿಂಗಳು ಪಾಕಿಸ್ತಾನ ಎದುರು ಬಾರಿಸಿದ್ದರು.

ಪುಟಿದೆದ್ದ ಆಫ್ರಿಕಾ: ಎಂಟು ಓವರ್‌ ಪೂರ್ಣಗೊಳ್ಳುವ ವೇಳೆಗಾಗಲೇ ಹಾಶಿಮ್‌ ಆಮ್ಲಾ (13), ಹೆನ್ರಿ ಡೇವಿಡ್ಸ್‌ (1) ಮತ್ತು ಜೆ.ಪಿ. ಡುಮಿನಿ (0) ಅವರ ವಿಕೆಟ್‌ ಕಳೆದುಕೊಂಡರೂ ಆತಿಥೇಯರು ಎದೆಗುಂದಲಿಲ್ಲ. ನಾಲ್ಕನೇ ವಿಕೆಟ್‌ಗೆ ಜೊತೆಯಾದ ಡಿವಿಲಿಯರ್ಸ್‌ ಮತ್ತು ಡೇವಿಡ್‌ ಮಿಲ್ಲರ್‌ (ಔಟಾಗದೆ 56) 171 ರನ್‌ ಕಲೆ ಹಾಕಿ ಆರಂಭದಲ್ಲಿ ಅನುಭವಿಸಿದ್ದ ಸಂಕಷ್ಟದಿಂದ ತಂಡವನ್ನು ದೂರ ಮಾಡಿದರು. ಮೊದಲು ನಿಧಾ ನವಾಗಿ ರನ್‌ ಪೇರಿಸಿದ ಆತಿಥೇಯರು   ಕೊನೆಯಲ್ಲಿ ಅಬ್ಬರಿಸಿ ನಿಂತರು. ಕೊನೆಯ 23 ಓವರ್‌ಗಳಲ್ಲಿ 185 ರನ್‌ಗಳನ್ನು ಕಲೆ ಹಾಕಿದ್ದೇ ಇದಕ್ಕೆ ಸಾಕ್ಷಿ.

ಡಿವಿಲಿಯರ್ಸ್‌ ಮಿಂಚು: ಎರಡನೇ ಏಕದಿನ ಪಂದ್ಯದಲ್ಲಿ ಮೂರು ರನ್‌ಗಳನ್ನಷ್ಟೇ ಗಳಿಸಿದ್ದ ನಾಯಕ ಡಿವಿಲಿಯರ್ಸ್‌್ ಮೂರನೇ ಪಂದ್ಯದಲ್ಲಿ ಅಬ್ಬರಿಸಿದರು. 101 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಐದು ಸಿಕ್ಸರ್‌ಗಳು ಒಳಗೊಂಡಂತೆ 109 ರನ್‌ ಸಿಡಿಸಿದರು. ಡಿವಿಲಿಯರ್ಸ್‌ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ 16ನೇ ಶತಕ ಇದಾಗಿದೆ.

ಹಿಡಿತ ಕಳೆದುಕೊಂಡ ಬೌಲರ್‌ಗಳು: ಆರಂಭ ದಲ್ಲಿ ಆತಿಥೇಯ ತಂಡವನ್ನು ಕಟ್ಟಿ ಹಾಕಿದ್ದ ಭಾರ ತದ ಬೌಲರ್‌ಗಳು ನಂತರವೂ ಬಿಗುವಿನ ದಾಳಿ ಮುಂದುವರಿಸುವಲ್ಲಿ ವಿಫಲರಾದರು.   ವೇಗಿಗಳಾದ ಇಶಾಂತ್‌ ಶರ್ಮ (40ಕ್ಕೆ4), ಮೊಹಮ್ಮದ್‌ ಶಮಿ (69ಕ್ಕೆ3) ಮತ್ತು ಉಮೇಶ್‌್ ಯಾದವ್‌ (57ಕ್ಕೆ1) ವಿಕೆಟ್‌ ಉರುಳಿಸಿದರು.

ಸ್ಕೋರ್ ವಿವರ:
ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 301


ಹಾಶಿಮ್‌ ಆಮ್ಲಾ ಸಿ ಯುವರಾಜ್‌ ಸಿಂಗ್‌ ಬಿ ಮೊಹಮ್ಮದ್‌ ಶಮಿ 13
ಕ್ವಿಂಟನ್‌ ಡಿ ಕಾಕ್‌ ಬಿ ಇಶಾಂತ್‌ ಶರ್ಮ  101
ಹೆನ್ರಿ ಡೇವಿಡ್ಸ್‌್ ಸಿ ಸುರೇಶ್‌ ರೈನಾ ಬಿ ಇಶಾಂತ್‌ ಶರ್ಮ  01
ಜೆ.ಪಿ. ಡುಮಿನಿ ಸಿ ಸುರೇಶ್‌ ರೈನಾ ಬಿ ಇಶಾಂತ್‌ ಶರ್ಮ  00
ಎ.ಬಿ. ಡಿವಿಲಿಯರ್ಸ್‌್ ಎಲ್‌ಬಿಡಬ್ಲ್ಯು ಬಿ ಉಮೇಶ್‌್ ಯಾದವ್‌  109
ಡೇವಿಡ್‌ ಮಿಲ್ಲರ್‌ ಔಟಾಗದೆ  56
ಲಾರೆನ್‌ ಸಿ ಉಮೇಶ್‌ ಯಾದವ್‌ ಬಿ ಇಶಾಂತ್‌ ಶರ್ಮ  06
ವೇಯ್ನ್‌ ಪಾರ್ನೆಲ್‌ ಸಿ ರೋಹಿತ್‌ ಶರ್ಮ ಬಿ ಮೊಹಮ್ಮದ್‌ ಶಮಿ 09
ವೆರ್ನಾನ್‌ ಫಿಲಾಂಡರ್‌ ಬಿ ಮೊಹಮ್ಮದ್‌ ಶಮಿ  00
ಲೊನ್ವಾಬೊ ಸೊಸೊಬೆ ಔಟಾಗದೆ  01

ಇತರೆ: (ಲೆಗ್‌ ಬೈ-2, ವೈಡ್‌-3) 05
ವಿಕೆಟ್‌ ಪತನ: 1-22 (ಆಮ್ಲಾ; 4.3), 2-28 (ಡೇವಿಡ್ಸ್‌; 7.1), 3-28 (ಡುಮಿನಿ; 7.4), 4-199 (ಕಾಕ್‌; 37.6), 5-252 (ಡಿವಿಲಿಯರ್ಸ್‌್; 43.4), 6-269 (ಮೆಕ್‌ಲಾರೆನ್‌; 46.2), 7-291 (ಪಾರ್ನೆಲ್‌; 49.1), 8-298 (ಫಿಲಾಂಡರ್‌; 49.4).
ಬೌಲಿಂಗ್‌: ಇಶಾಂತ್‌ ಶರ್ಮ 10-1-40-4, ಉಮೇಶ್ ಯಾದವ್‌ 9-0-57-1, ಮೊಹಮ್ಮದ್‌ ಶಮಿ 10-0-69-3, ರವಿಚಂದ್ರನ್‌ ಅಶ್ವಿನ್‌ 9-0-63-0, ರವೀಂದ್ರ ಜಡೇಜ 6-0-32-0, ಸುರೇಶ್‌ ರೈನಾ 3-0-16-0, ವಿರಾಟ್‌ ಕೊಹ್ಲಿ 3-0-22-0.

ಫಲಿತಾಂಶ: ಮಳೆಯ ಕಾರಣ ಪಂದ್ಯ ರದ್ದು.
ದಕ್ಷಿಣ ಆಫ್ರಿಕಾಕ್ಕೆ 2–0ರಲ್ಲಿ ಸರಣಿ ಜಯ.
ಸರಣಿ ಶ್ರೇಷ್ಠ: ಕ್ವಿಂಟಾನ್‌ ಡಿ ಕಾಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT