ADVERTISEMENT

ಮಹಾನ್ ಆಟಗಾರರಿಗೆ `ಬೆಳ್ಳಿ ಗೌರವ'

​ಪ್ರಜಾವಾಣಿ ವಾರ್ತೆ
Published 3 ಜನವರಿ 2013, 19:59 IST
Last Updated 3 ಜನವರಿ 2013, 19:59 IST
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರರನ್ನು ಗುರುವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಟಗಾರರ ಜೊತೆ ಕಾಣಿಸಿಕೊಂಡರು
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರರನ್ನು ಗುರುವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಟಗಾರರ ಜೊತೆ ಕಾಣಿಸಿಕೊಂಡರು   

ಕೋಲ್ಕತ್ತ: ಅದೊಂದು ಸ್ಮರಣೀಯ ಕ್ಷಣ. 1960 ರಿಂದ ಕಳೆದ ದಶಕದವರೆಗೆ ಕ್ರಿಕೆಟ್ ಆಡಿದ್ದ ಭಾರತ ಮತ್ತು ಪಾಕಿಸ್ತಾನದ ಕೆಲವು ಮಹಾನ್ ಆಟಗಾರರಿಗೆ ಗೌರವ ಸಲ್ಲಿಸುವ ಸಂದರ್ಭ. `ಸಾಂಪ್ರದಾಯಿಕ ಎದುರಾಳಿ'ಗಳಾದ ಭಾರತ- ಪಾಕಿಸ್ತಾನ ಪಂದ್ಯದ ವೇಳೆ ಗುರುವಾರ ಮಧ್ಯಾಹ್ನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ 22 ಮಂದಿ ಮಾಜಿ ಆಟಗಾರರು ಬರಬೇಕಿದ್ದರೂ, ಅಂತಿಮವಾಗಿ ಗೌರವ ಪಡೆದವರು 19 ಮಂದಿ.

ಈ ಕ್ರೀಡಾಂಗಣದಲ್ಲಿ 25 ವರ್ಷ ಹಿಂದೆ (ಫೆಬ್ರವರಿ 18, 1987) ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೊದಲ ಒಂದು ದಿನದ ಕ್ರಿಕೆಟ್ ಪಂದ್ಯ ನಡೆದ ನೆನಪಿಗಾಗಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆ ವತಿಯಿಂದ ಈ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಭಾರತ ತಂಡದ ಪರ ಮಾಜಿ ನಾಯಕರಾದ ಬಿಷನ್ ಸಿಂಗ್ ಬೇಡಿ, ಅಜಿತ್ ವಾಡೇಕರ್, ಸುನೀಲ್ ಗಾವಸ್ಕರ್, ಜಿ.ಆರ್.ವಿಶ್ವನಾಥ್, ದಿಲೀಪ್ ವೆಂಗ್‌ಸರ್ಕರ್, ಕಪಿಲ್ ದೇವ್, ಕೆ.ಶ್ರೀಕಾಂತ್, ಸಂದೀಪ್ ಪಾಟೀಲ್, ರವಿಶಂಕರ್ ಶಾಸ್ತ್ರಿ, ನವಜೋತ್ ಸಿಧು, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ವಿ.ವಿ.ಎಸ್.ಲಕ್ಷ್ಮಣ್ ಗೌರವ ಪಡೆದರು. ಇವರಲ್ಲಿ ಮಧ್ಯಮ ಕ್ರಮಾಂಕದ ಕಲಾತ್ಮಕ ಆಟಗಾರ ವಿಶ್ವನಾಥ್ ಕರ್ನಾಟಕದ ಏಕೈಕ ಆಟಗಾರರಾಗಿ ಕಾಣಿಸಿಕೊಂಡರು. ಇನ್ನೊಬ್ಬ ಕಲಾತ್ಮಕ ಆಟಗಾರ ರಾಹುಲ್ ದ್ರಾವಿಡ್ ಅವರ ಹೆಸರೂ ಇತ್ತಾದರೂ ಅವರು ಬಂದಿರಲಿಲ್ಲ.

ಪಾಕಿಸ್ತಾನ ತಂಡದ ಪರ ಇಂತಿಕಾಬ್ ಆಲಂ, ಇಮ್ತಿಯಾಜ್ ಅಹ್ಮದ್, ಸೋದರರಾದ ಮುಷ್ತಾಕ್ ಮಹಮದ್, ಸಾದಿಕ್ ಮಹಮದ್, ರಮೀಜ್ ರಾಜಾ ಮತ್ತು ವಾಸಿಂ ಅಕ್ರಮ್ ಸನ್ಮಾನ ಸ್ವೀಕರಿಸಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಆಟಗಾರರನ್ನು ಗೌರವಿಸಿದರು. ಆಟಗಾರರಿಗೆ ತಲಾ ಒಂದು ಲಕ್ಷ ರೂಪಾಯಿ ನಗದು ಪ್ರದಾನ ಮಾಡಲಾಯಿತು.

ಪಿಸಿಬಿ ಅಧ್ಯಕ್ಷ ಜಕಾ ಅಶ್ರಫ್, ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಉಪಸ್ಥಿತರಿದ್ದರು.ಭಾರತ ಮತ್ತು ಪಾಕ್ ನಡುವಣ ಎರಡನೇ ಒಂದು ದಿನದ ಪಂದ್ಯದ ಭೋಜನ ವಿರಾಮದ ವೇಳೆ ಈ ಆಟಗಾರರನ್ನು ಆರು ಸಾಲಂಕೃತ ಜೀಪ್‌ಗಳಲ್ಲಿ ಕ್ರೀಡಾಂಗಣದ ಒಂದು ಸುತ್ತು ಮೆರವಣಿಗೆ ಮಾಡಲಾಯಿತು. ಕಿಕ್ಕಿರಿದಿದ್ದ ಪ್ರೇಕ್ಷಕರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಗುರುವಾರ ಸನ್ಮಾನಿತರಾದವರಲ್ಲಿ ಆರು ಮಂದಿ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ (ಪಾಕಿಸ್ತಾನ ವಿರುದ್ಧ)  ನಡೆದ ಮೊದಲ ಒಂದು ದಿನದ ಪಂದ್ಯದಲ್ಲಿ ಆಡಿದ್ದರು. ಕೆ.ಶ್ರಿಕಾಂತ್, ವೆಂಗಸರ್ಕರ್, ಕಪಿಲ್ ದೇವ್ ಮತ್ತು ರವಿಶಾಸ್ತ್ರಿ ಭಾರತದ ಪರ, ರಮೀಜ್ ರಾಜಾ ಮತ್ತು ವಾಸಿಂ ಅಕ್ರಮ್ ಪಾಕ್ ತಂಡದಲ್ಲಿ ಆಡಿದ್ದರು.

ವಿ.ವಿ.ಎಸ್. ಲಕ್ಷ್ಮಣ್ ತಮ್ಮ ಕ್ರಿಕೆಟ್ ಬದುಕಿನ ಶೇಷ್ಠ ಇನಿಂಗ್ಸ್ 281 ರನ್ ಹೊಡೆದಿದ್ದು ಇದೇ ಮೈದಾನದಲ್ಲಿ. 2001ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅವಿಸ್ಮರಣೀಯವಾಗಿದ್ದ ಎರಡನೇ ಟೆಸ್ಟ್‌ನಲ್ಲಿ ಭಾರತ ಫಾಲೊ ಆನ್ ಪಡೆದ ನಂತರ ಅಮೋಘವಾಗಿ ಚೇತರಿಸಿ ಜಯಗಳಿಸಿತ್ತು. ಆ ಪಂದ್ಯದಲ್ಲಿ ರಾಹುಲ್ ದ್ರಾವಿಡ್ 180 ರನ್ ಬಾರಿಸಿದ್ದರು.

ರಮೀಜ್ ರಾಜಾ, ವಾಸಿಂ ಅಕ್ರಮ್, ರವಿಶಾಸ್ತ್ರಿ, ಸುನೀಲ್ ಗಾವಸ್ಕರ್, ನವಜೋತ್ ಸಿಧು, ಪ್ರಸ್ತುತ ಈ ಪಂದ್ಯದ ಟಿ.ವಿ. ವೀಕ್ಷಕ ವಿವರಣೆಗಾರರ ಪಾತ್ರ ವಹಿಸುತ್ತಿದ್ದಾರೆ. ಸಂದೀಪ್ ಪಾಟೀಲ್ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT