ADVERTISEMENT

ಮಹಿಳಾ ಕ್ರಿಕೆಟ್: ಭಾರತದ ಮುಡಿಗೆ ಏಕದಿನ ಸರಣಿ

ಮಿಂಚಿದ ಪೂನಮ್ ಯಾದವ್, ಬಾಂಗ್ಲಾಕ್ಕೆ ಮತ್ತೆ ಸೋಲು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಅಹಮದಾಬಾದ್ (ಪಿಟಿಐ): ಭಾರತ ಮಹಿಳಾ ಕ್ರಿಕೆಟ್ ತಂಡದ ಗೆಲುವಿನ ಯಾತ್ರೆ ಮುಂದುವರಿದಿದೆ. ಬಾಂಗ್ಲಾದೇಶದ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಗೆಲುವು ಸಾಧಿಸಿದ್ದ ಆತಿಥೇಯರು ಏಕದಿನ ಸರಣಿಯನ್ನೂ ತಮ್ಮದಾಗಿಸಿಕೊಂಡರು.

ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಬಾಂಗ್ಲಾದ ಎದುರು 58 ರನ್‌ಗಳ ಗೆಲುವು ಸಾಧಿಸಿ `ಕ್ಲೀನ್‌ಸ್ವೀಪ್' ಸಾಧನೆ ಮಾಡಿತು. ಮೂರು ಪಂದ್ಯಗಳ ಟ್ವೆಂಟಿ-20 ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿಯೂ ಭಾರತ ಗೆಲುವು ಪಡೆದಿತ್ತು.

ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡು 48.3 ಓವರ್‌ಗಳಲ್ಲಿ 154 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಅಲ್ಪ ಮೊತ್ತದ ಗುರಿ ಬಾಂಗ್ಲಾಕ್ಕೆ ಭಾರಿ ಸವಾಲು ಎನಿಸಿತು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಾಂಗ್ಲಾ 41.1 ಓವರ್‌ಗಳಲ್ಲಿ 96 ರನ್ ಗಳಿಸುವಷ್ಟರಲ್ಲಿ ಆಲ್‌ಔಟ್ ಆಯಿತು.

ಉತ್ತಮ ಆರಂಭ: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪೂನಮ್ ರಾವತ್ (13),  ಸ್ಮೃತಿ ಮಂಧಾನ (23) ಮೊದಲ ವಿಕೆಟ್‌ಗೆ 37 ರನ್‌ಗಳನ್ನು ಕಲೆ ಹಾಕಿದರು. ಇದು ಭಾರತದ ಪರ ಮೂಡಿಬಂದ ಗರಿಷ್ಠ ರನ್ ಜೊತೆಯಾಟ. ನಂತರದ ಬ್ಯಾಟ್ಸ್‌ಮನ್‌ಗಳು ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ಯುವಲ್ಲಿ ವಿಫಲರಾದರು.

ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಆಂಧ್ರಪ್ರದೇಶದ ವಿ. ಸ್ನೇಹಾ ದೀಪ್ತಿ (4), ಆನಘಾ ದೇಶಪಾಂಡೆ (6), ರಿತು ಧ್ರುಬ್ (2), ಎಕ್ತಾ ಬಿಸ್ಟ್ (ಔಟಾಗದೆ 4) ಎರಡಂಕಿಯ ಮೊತ್ತ ಮುಟ್ಟಲಿಲ್ಲ. ಹಿಂದಿನ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 29 ರನ್ ಗಳಿಸಿದರು.

ಈ ಅಲ್ಪ ಮೊತ್ತದ ಗುರಿ ಬಾಂಗ್ಲಾಕ್ಕೆ ಸವಾಲು ಎನ್ನಿಸುವಂತೆ ಮಾಡಿದ್ದು, ಭಾರತದ ಬಿಸ್ಟ್ (19ಕ್ಕೆ2) ಹಾಗೂ ಆರ್. ಸ್ವಾಗತಿಕಾ (15ಕ್ಕೆ2). ತಮ್ಮ ಮೊದಲ ಏಕದಿನ ಪಂದ್ಯದಲ್ಲಿಯೇ ಗಮನ ಸೆಳೆದ ಪೂನಮ್ ಯಾದವ್ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ 48.3 ಓವರ್‌ಗಳಲ್ಲಿ 154 (ಪೂನಮ್ ರಾವತ್ 13, ಸ್ಮೃತಿ ಮಂಧಾನ 23, ಹರ್ಮನ್‌ಪ್ರೀತ್ ಕೌರ್ 29, ಆರ್.ಸ್ವಾಗತಿಕಾ 30, ಪೂನಮ್ ಯಾದವ್ 15; ಪನ್ನಾ ಘೋಷ್ 37ಕ್ಕೆ2, ಲತಾ ಮಂಡಲ್ 23ಕ್ಕೆ2, ರುಮಾನಾ ಅಹ್ಮದ್ 20ಕ್ಕೆ4).
ಬಾಂಗ್ಲಾದೇಶ 41.1 ಓವರ್‌ಗಳಲ್ಲಿ 96 (ಸುಖತಾರಾ ರೆಹಮಾನ್ 12, ಫರ್ಜಾನಾ ಹಕೆ 10, ರುಮಾನಾ ಅಹ್ಮದ್ 10, ಕೆ. ಸಲ್ಮಾ 22, ಪನ್ನಾ ಘೋಷ್ 13; ಏಕ್ತಾ ಬಿಸ್ಟ್ 19ಕ್ಕೆ2, ಪೂನಮ್ ಯಾದವ್ 15ಕ್ಕೆ3) ಫಲಿತಾಂಶ: ಭಾರತಕ್ಕೆ 58 ರನ್ ಜಯ. 3-0ರಲ್ಲಿ ಸರಣಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.