ADVERTISEMENT

ಮಹಿಳಾ ಹಾಕಿ; ಕರ್ನಾಟಕಕ್ಕೆ ದೆಹಲಿ ಸವಾಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2011, 19:30 IST
Last Updated 9 ಏಪ್ರಿಲ್ 2011, 19:30 IST
ಮಹಿಳಾ ಹಾಕಿ; ಕರ್ನಾಟಕಕ್ಕೆ ದೆಹಲಿ ಸವಾಲು
ಮಹಿಳಾ ಹಾಕಿ; ಕರ್ನಾಟಕಕ್ಕೆ ದೆಹಲಿ ಸವಾಲು   

ಬೆಂಗಳೂರು: ಎಂ.ಪಿ. ಅಕಾಡೆಮಿ, ಪಿಯುಇಪಿಎಸ್‌ಯು ಹಾಗೂ ಮುಂಬೈ ತಂಡಗಳು ಕರ್ನಾಟಕ ರಾಜ್ಯ ಮಹಿಳಾ ಹಾಕಿ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 56ನೇ ಐಎಚ್‌ಎಫ್ ರಾಷ್ಟ್ರೀಯ ಸೀನಿಯರ್ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ  ಕ್ವಾರ್ಟರ್‌ಫೈನಲ್ ಪ್ರವೇಶಿಸಿವೆ. ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಎಂ.ಪಿ ಅಕಾಡೆಮಿ ತಂಡವು 14-0 ಗೋಲುಗಳಿಂದ ದಾದ್ರಾ ನಗರ ಹವೇಲಿ ತಂಡವನ್ನು ಮಣಿಸುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿತು.

ಗೋಲಿನ ಸುರಿಮಳೆಯನ್ನೇ ಸುರಿಸಿದ ಎಂ.ಪಿ. ಅಕಾಡೆಮಿ ತಂಡದ ಕವಿತಾ (1, 18, 19, 56 ಹಾಗೂ 58), ರೀನಾ (16, 23, 29, 54 ಹಾಗೂ 55), ಶ್ವೇತಾ (43 ಹಾಗೂ 44), ದೀಪಿಕಾ ಶರ್ಮಾ (51), ಮಂಜಿರಿ ಪಾಂಡೆ (57) ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ವಿಜಯಿ ತಂಡದ ಗೋಲಿನ ಓಟಕ್ಕೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನು ಎದುರಾಳಿ ತಂಡ ಮಾಡಲಿಲ್ಲ. ವಿರಾಮಕ್ಕೆ ಮೊದಲು 6-0 ಗೋಲುಗಳ ಮುನ್ನಡೆ ಸಾಧಿಸಿದ್ದ ವಿಜಯಿ ತಂಡ ನಂತರ ಚುರುಕಿನ ಆಟವಾಡಿ ಗೆಲುವಿನ ಅಂತರ ಹೆಚ್ಚಿಸಿಕೊಂಡಿತು.

ಇನ್ನೊಂದು ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ 17-0ಗೋಲುಗಳಿಂದ ಗುಜರಾತ್ ತಂಡವನ್ನು ಮಣಿಸಿತು. ಪಂದ್ಯದ ಮೊದಲಾರ್ಧದಲ್ಲಿ 7-0ಗೋಲುಗಳ ಮುನ್ನಡೆ ಹೊಂದಿತ್ತು. ಮತ್ತೊಂದು ಪಂದ್ಯದಲ್ಲಿ ಮಧ್ಯ ಪ್ರದೇಶ 11-0 ಗೋಲುಗಳಿಂದ ಮಣಿಪುರ ತಂಡವನ್ನು ಸೋಲಿಸಿತು. ‘ಬಿ’ ಗುಂಪಿನಲ್ಲಿ ಒಂದು ಪಂದ್ಯವನ್ನಾಡದ ಆತಿಥೇಯ ಕರ್ನಾಟಕ ತಂಡದವರು ನೇರವಾಗಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಎಂಟರ ಘಟ್ಟದ ಪಂದ್ಯದಲ್ಲಿ ತವರು ನೆಲದ ಆಟಗಾರರು ದೆಹಲಿ ತಂಡದ ಸವಾಲನ್ನು ಎದುರಿಸಲಿದ್ದಾರೆ.ಕರ್ನಾಟಕ,  ಪಿಯುಪಿಎಸ್‌ಯು, ಮುಂಬೈ, ಎಂ.ಪಿ. ಅಕಾಡೆಮಿ, ಭೋಪಾಲ, ದೆಹಲಿ, ಮಧ್ಯ ಪ್ರದೇಶ, ಹರಿಯಾಣ ತಂಡಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿವೆ.

ಭಾನುವಾರದ ಎಂಟರಘಟ್ಟದ ಪಂದ್ಯಗಳು:
ಪಿಯುಪಿಎಸ್‌ಯು,-ಭೋಪಾಲ (ಮಧ್ಯಾಹ್ನ 3ಕ್ಕೆ), ಕರ್ನಾಟಕ-ದೆಹಲಿ (ಸಂಜೆ 5ಕ್ಕೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.