ADVERTISEMENT

ಮಹಿಳೆಯರ ಐಟಿಎಫ್ ಟೆನಿಸ್ ಅಂಕಿತಾ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ನವದೆಹಲಿ (ಪಿಟಿಐ): ಭಾರತದ ಅಶ್ವರ್ಯ ಶ್ರೀವಾಸ್ತವ ಹಾಗೂ ಅಂಕಿತಾ ರೈನಾ ಅವರು ಇಲ್ಲಿ ಆರಂಭವಾದ ಮಹಿಳೆಯರ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದು ಶುಭಾರಂಭ ಮಾಡಿದರು.

ಇಲ್ಲಿನ ಡಿಎಲ್‌ಟಿಎ ಅಂಗಳದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಅಶ್ವರ್ಯ 7-5, 6-2ರಲ್ಲಿ ದಕ್ಷಿಣ ಕೊರಿಯಾದ ಜುಂಗ್ ಯೂನ್ ಶೈನ್ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಪ್ರಭಾವಿ ಪ್ರತಿರೋಧ ತೋರಿದ ಶೈನ್ ಅವರನ್ನು ಅತ್ಯುತ್ತಮ ರಿಟರ್ನ್‌ಗಳ ಮೂಲಕ ಅಶ್ವರ್ಯ ಕಟ್ಟಿ ಹಾಕಿದರು.

ಎರಡನೇ ಸೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಭಾರತದ ಆಟಗಾರ್ತಿ ಎರಡನೇ ಸುತ್ತಿಗೆ ಮುನ್ನಡೆದರು. ಮುಂದಿನ ಸುತ್ತಿನ ಪಂದ್ಯದಲ್ಲಿ ಅಶ್ವರ್ಯ ಅಸ್ಟ್ರಿಯಾದ ಪಟ್ರಿಸಿಯಾ ಹಾಸ್ ಅಥವಾ ಭಾರತದ ಗೋಪಿಕಾ ಕಪೂರ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಇದೇ ಟೂರ್ನಿಯ ಇನ್ನೊಂದು ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಅಂಕಿತಾ ರೈನಾ 6-4, 6-3ರಲ್ಲಿ ವಿನಯಾ ದಿಂಗ್ವಾಲ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.ಮೊದಲ ಸೆಟ್‌ನಲ್ಲಿ ಅಲ್ಪ ಪ್ರತಿರೋಧ ಎದುರಿಸಿದ ಅಂಕಿತಾ ಎರಡನೇ ಸೆಟ್‌ನಲ್ಲಿ ಸುಲಭ ಗೆಲುವು ಪಡೆದರು. ಚೀನಾದ ಜ್ವಾಕ್ಸೊವುನ್ ಯಾಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಯಾಂಗ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಜಿ. ಪ್ರಾರ್ಥನಾ ಅವರನ್ನು 6-1, 6-1ರಲ್ಲಿ ಸುಲಭವಾಗಿ ಮಣಿಸಿ ಮೊದಲ ಸುತ್ತಿಗೆ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.