ADVERTISEMENT

ಮಾಜಿ ಕ್ರಿಕೆಟಿಗ ಬಾಲು ಅಳಗನನ್ ನಿಧನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಚೆನ್ನೈ: ತಮಿಳುನಾಡು ರಣಜಿ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರರಾಗಿದ್ದ ಆರ್. ಬಾಲು ಅಳಗನನ್ (87) ಗುರುವಾರ ಇಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಅಳಗನನ್ ನೇತೃತ್ವದ ತಮಿಳುನಾಡು (ಅಂದಿನ ಮದ್ರಾಸ್) ತಂಡ 1954-55ರ ಋತುವಿನಲ್ಲಿ ರಣಜಿ ಟ್ರೋಫಿ ಜಯಿಸಿತ್ತು. ಅವರು 1946 ರಿಂದ 1955ರ ವರೆಗೆ ಆರು ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು.

ಆಲ್‌ರೌಂಡರ್ ಆಗಿದ್ದ ಅಳಗನನ್ ಎಗ್ಮೋರ್ ರಿಕ್ರಿಯೇಷನ್ ಕ್ಲಬ್‌ಗೆ ಆಡುವ ಮೂಲಕ ಕ್ರಿಕೆಟ್ ಜೀವನ ಆರಂಭಿಸಿದ್ದರು. ನಿವೃತ್ತಿಯ ಬಳಿಕ ವೀಕ್ಷಕ ವಿವರಣೆಗಾರರಾಗಿ ಸಾಕಷ್ಟು ಪ್ರಸಿದ್ಧ ಪಡೆದಿದ್ದರು. ಆಟದ ವಿವರಗಳನ್ನು ಕೇಳುಗರ ಮನಮುಟ್ಟುವ ರೀತಿಯಲ್ಲಿ ವಿವರಿಸುತ್ತಿದ್ದರು.

ಅಳಗನನ್ ಒಬ್ಬ ಉತ್ತಮ ಆಡಳಿತಗಾರರಾಗಿಯೂ ಯಶಸ್ಸು ಕಂಡಿದ್ದರು. 1961 ರಿಂದ   1986ರ ವರೆಗೆ ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಉಪಾಧ್ಯಕ್ಷರಾಗಿದ್ದ ಅವರು 1988 ರಿಂದ 93ರ ವರೆಗೆ   ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ನಿಧನಕ್ಕೆ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಹಾಗೂ ಟಿಎನ್‌ಸಿಎ ಸಂತಾಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.