ADVERTISEMENT

ಮಿಂಚಿದ ಅರವಿಂದ್, ದಾಮಿನಿ

ರಾಷ್ಟ್ರೀಯ ಈಜು: ಕರ್ನಾಟಕಕ್ಕೆ ಮತ್ತೆ ಆರು ಬಂಗಾರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 19:59 IST
Last Updated 12 ಜುಲೈ 2013, 19:59 IST

ಹೈದರಾಬಾದ್: ಎಂ. ಅರವಿಂದ್ ಮತ್ತು ದಾಮಿನಿ ಕೆ. ಗೌಡ ಇಲ್ಲಿ ನಡೆಯುತ್ತಿರುವ 40ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕಕ್ಕೆ ಬಂಗಾರದ ಪದಕ ತಂದುಕೊಟ್ಟರು. ಗಾಚಿಬೌಳಿ ಕ್ರೀಡಾಂಗಣದ ಈಜುಕೊಳದಲ್ಲಿ ನಡೆಯುತ್ತಿರುವ ಕೂಟದಲ್ಲಿ ಪ್ರಭುತ್ವ ಮುಂದುವರಿಸಿದ ರಾಜ್ಯದ ಸ್ಪರ್ದಿಗಳು ಮೂರನೇ ದಿನ ಆರು ಚಿನ್ನ ಹಾಗೂ ಐದು ಬೆಳ್ಳಿ ಪದಕ ಗೆದ್ದುಕೊಂಡರು.

ಬಸವನಗುಡಿ ಈಜು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅರವಿಂದ್ ಬಾಲಕರ ಗುಂಪು-1ರ 400 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ 4:41.60 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದರಲ್ಲದೆ, ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು. ಕರ್ನಾಟಕದ ರೆಹಾನ್ ಪೂಂಚಾ 2003 ರಲ್ಲಿ ಸ್ಥಾಪಿಸಿದ್ದ (4:42.57) ದಾಖಲೆಯನ್ನು ಅವರು ಮುರಿದರು.

ದಾಮಿನಿ ಬಾಲಕಿಯರ ಗುಂಪು-2ರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ 1:07.27 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು. ಬಾಲಕರ ಗುಂಪು-2ರ 100 ಮೀ. ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಸ್ಪಂದನ್ ಪ್ರತೀಕ್ ಚಿನ್ನ ಗೆದ್ದು ಎಲ್ಲರಿಗೂ ಅಚ್ಚರಿ ಉಂಟುಮಾಡಿದರು. ಅವರು 59.09 ಸೆಕೆಂಡ್‌ಗಳಲ್ಲಿ ನಿಗದಿತ ದೂರ ಕ್ರಮಿಸಿದರು. ಮೊದಲ 50 ಮೀ.ನಲ್ಲಿ ಇತರ ಸ್ಪರ್ಧಿಗಳಿಂದ ಹಿಂದಿದ್ದ ಸ್ಪಂದನ್ ಕೊನೆಯ 50 ಮೀ.ನಲ್ಲಿ ಮಿಂಚಿನ ವೇಗದಲ್ಲಿ ಮುನ್ನುಗ್ಗಿ ಅಗ್ರಸ್ಥಾನ ಪಡೆದರು.

ರಿಲೆ ಸ್ಪರ್ಧೆಗಳಲ್ಲಿ ಪ್ರಭುತ್ವ ಮೆರೆದ ಕರ್ನಾಟಕ ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. ಬಾಲಕರ ಗುಂಪು-1 ಮತ್ತು 2 ರ 4x200 ಮೀ. ಫ್ರೀಸ್ಟೈಲ್ ಹಾಗೂ ಬಾಲಕಿಯರ ಗುಂಪು-2ರ 4x200 ಮೀ. ಫ್ರೀಸ್ಟೈಲ್ ರಿಲೆ ಸ್ಪರ್ಧೆಯಲ್ಲಿ ಬಂಗಾರ ಜಯಿಸಿದರೆ, ಬಾಲಕಿಯರ ಗುಂಪು-1ರ 4ಷ200 ಮೀ. ಫ್ರೀಸ್ಟೈಲ್‌ನಲ್ಲಿ ರಜತ ಪದಕ ಗೆದ್ದುಕೊಂಡಿತು.

ರಕ್ಷಿತ್ ಯು ಶೆಟ್ಟಿ (ಬಾಲಕರ 100 ಮೀ. ಫ್ರೀಸ್ಟೈಲ್), ಬಿ. ಪ್ರಣಾಮ್ (ಬಾಲಕರ 50 ಮೀ. ಬ್ಯಾಕ್‌ಸ್ಟ್ರೋಕ್), ಹೇಮಂತ್ ಜೆ.ಬಿ (400 ಮೀ. ವೈಯಕ್ತಿಕ ಮೆಡ್ಲೆ) ಮತ್ತು ಶ್ರದ್ಧಾ ಸುಧೀರ್ (ಬಾಲಕಿಯರ 800 ಮೀ. ಫ್ರೀಸ್ಠೈಲ್) ಅವರು ರಾಜ್ಯಕ್ಕೆ ಬೆಳ್ಳಿ ಪದಕ ತಂದುಕೊಟ್ಟರು. ವಾಟರ್‌ಪೋಲೊ ಸ್ಪರ್ಧೆಯಲ್ಲಿ ಕರ್ನಾಟಕ ಬಾಲಕಿಯರ ತಂಡದವರು 0-4 ರಲ್ಲಿ ಮಹಾರಾಷ್ಟ್ರದ ಎದುರು ಸೋಲು ಅನುಭವಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.