ADVERTISEMENT

`ಮುಂದೆಯೂ ಕಠಿಣ ಹೋರಾಟ ತೋರುತ್ತೇವೆ'

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ಹೈದರಾಬಾದ್ (ಪಿಟಿಐ): `ಐಪಿಎಲ್ ಆರನೇ ಆವೃತ್ತಿಯ ಆರಂಭದ ಪಂದ್ಯದಿಂದಲೂ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದೇವೆ. ಇದೇ ರೀತಿಯ ಹೋರಾಟವನ್ನು ಮುಂದಿನ ಪಂದ್ಯಗಳಲ್ಲಿಯೂ ನೀಡುತ್ತೇವೆ' ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಕ್ಯಾಮರೂನ್ ವೈಟ್ ಹೇಳಿದರು.

ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವನ್ನು ಮುನ್ನಡೆಸಿದ್ದ ವೈಟ್ ಪಂದ್ಯದ ನಂತರ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಈ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಮೊದಲು ಬ್ಯಾಟ್ ಮಾಡಿ ಕಿಂಗ್ಸ್ ಇಲೆವೆನ್ ನೀಡಿದ್ದ 124 ರನ್‌ಗಳ ಗುರಿಯನ್ನು ಸನ್‌ರೈಸರ್ಸ್ 18.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತ್ತು. ಕುಮಾರ ಸಂಗಕ್ಕಾರ ಬದಲು ವೈಟ್ ತಂಡವನ್ನು ಮುನ್ನಡೆಸಿದ್ದರು.

`ಖಂಡಿತವಾಗಿಯೂ ನಾವು ಚೆನ್ನಾಗಿ ಆಡುತ್ತಿದ್ದೇವೆ. ಪ್ರತಿ ಪಂದ್ಯದಲ್ಲೂ ಎದುರಾಳಿಯ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿರೋಧ ತೋರುತ್ತಿದ್ದೇವೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ತಾನ ರಾಯಲ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಎದುರು ನಮ್ಮ ಆಟಗಾರರು ನೀಡಿದ ಪ್ರದರ್ಶನ ಖುಷಿ ನೀಡಿದೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಗುರಿ ಮುಟ್ಟುವ ಹಾದಿಯಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಸನ್‌ರೈಸರ್ಸ್ ಹನುಮ ವಿಹಾರಿ ಗಳಿಸಿದ್ದ 46 ರನ್‌ಗಳ ನೆರವಿನಿಂದ ಗೆಲುವು ಸಾಧಿಸಿತ್ತು. ಈ ತಂಡದ ಇನ್ನೊಬ್ಬ ಆಟಗಾರ ತಿಸ್ಸಾರ ಪೆರೆರಾ ಔಟಾಗದೆ 23 ರನ್ ಪೇರಿಸಿದ್ದರು. ಏಳು ಪಂದ್ಯಗಳನ್ನಾಡಿರುವ ಸನ್‌ರೈಸರ್ಸ್ ತಂಡ ಐದು ಪಂದ್ಯಗಳಲ್ಲಿ ಗೆಲುವು ಪಡೆದಿದೆ.

`ಹನುಮ ವಿಹಾರಿ ಉತ್ತಮ ಬ್ಯಾಟಿಂಗ್ ತೋರಿದರು. ತಂಡಕ್ಕೆ ತುಂಬಾ ಅಗತ್ಯವಿದ್ದಾಗ ಅವರು ಅತ್ಯುತ್ತಮ ಇನಿಂಗ್ಸ್ ಕಟ್ಟಿದರು. ವಿಹಾರಿ ಯಾವಾಗಲೂ ಸಕಾರಾತ್ಮಕವಾದ ಚಿಂತನೆಯನ್ನೇ ಮಾಡುತ್ತಾರೆ. ಗುರಿ ಬೆನ್ನಟ್ಟುವ ಹಾದಿಯಲ್ಲಿ ತೋರಿದ ಬ್ಯಾಟಿಂಗ್ ಮೆಚ್ಚುವಂತದ್ದು' ಎಂದು ವೈಟ್ ನುಡಿದರು.

`ನಾವೀಗ ಉತ್ತಮ ಸ್ಥಾನದಲ್ಲಿದ್ದೇವೆ. ಇನ್ನುಳಿದ ಪಂದ್ಯಗಳಲ್ಲಿಯೂ ಇದೇ ರೀತಿಯ ಪ್ರದರ್ಶನ ತೋರಿದರೆ, ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಅವಕಾಶವಿದೆ. ನಮ್ಮ ತಂಡದ ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆ ವಿಭಾಗವೂ ಬಲಿಷ್ಠವಾಗಿದೆ. ಆದರೆ, ಬ್ಯಾಟಿಂಗ್ ಇನ್ನೂ ಸುಧಾರಣೆ ಕಾಣುವುದು ಅಗತ್ಯವಿದೆ' ಎಂದೂ ಅವರು ಅಭಿಪ್ರಾಯ ಪಟ್ಟರು.

ಡೆಕ್ಕನ್ ಚಾರ್ಜರ್ಸ್ ಬದಲು ಹೊಸ ತಂಡವಾಗಿ ರೂಪುಗೊಂಡಿರುವ ಸನ್‌ರೈಸರ್ಸ್ ತನ್ನ ಮೊದಲ ಆವೃತ್ತಿಯಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ತೋರುತ್ತಿದೆ. ಈ ತಂಡ ತನ್ನ ಮುಂದಿನ ಪಂದ್ಯದಲ್ಲಿ ಏಪ್ರಿಲ್ 27ರಂದು ರಾಜಸ್ತಾನ ರಾಯಲ್ಸ್ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.