ಮುಂಬೈ (ಪಿಟಿಐ): ಬ್ಯಾಟಿಂಗ್ ವಿಭಾಗದಲ್ಲಿ ಬಲ ಹೆಚ್ಚಿಸಿಕೊಂಡು ಹೋರಾಡಬೇಕು. ಅದೇ ಮುಂಬೈ ಇಂಡಿಯನ್ಸ್ ತಂಡದ ಹೆಗ್ಗುರಿ.
ನಿಶ್ಚಿತ ಪ್ರದರ್ಶನ ಸಾಧ್ಯವಾಗುತ್ತಿಲ್ಲ. ಭದ್ರ ಬುನಾದಿಯ ಮೇಲೆ ಇನಿಂಗ್ಸ್ ಕಟ್ಟುವುದು ಕೂಡ ಹರಭಜನ್ ಸಿಂಗ್ ನಾಯಕತ್ವದ ತಂಡಕ್ಕೆ ಕಷ್ಟವಾಗಿದೆ. ಆದರೂ ಸಂಕಷ್ಟಗಳನ್ನು ಮೀರಿ ಅದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ ಮೊದಲ ಮೂರು ಪಂದ್ಯಗಳಲ್ಲಿ ಎರಡರಲ್ಲಿ ವಿಜಯ ಸಾಧಿಸಿದೆ. ಅಷ್ಟಾದರೂ ಚಿಂತೆ ಮಾತ್ರ ತಪ್ಪಿಲ್ಲ.
ಸೋಮವಾರದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ಐದು ವಿಕೆಟ್‌ಗಳ ಗೆಲುವು ಪಡೆದಿದ್ದಂತೂ ರೋಚಕ. ಇಂಥದೊಂದು ಜಯದಿಂದ ಉತ್ಸಾಹಗೊಂಡಿದ್ದರೂ `ಭಜ್ಜಿ~ ಬಳಗ ನಿರುಮ್ಮಳವಾಗಿ ಇರುವಂಥ ಪರಿಸ್ಥಿತಿಯಂತೂ ಇಲ್ಲ. ಅದು ಬ್ಯಾಟಿಂಗ್ ಸುಧಾರಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
ರಾಜಸ್ತಾನ್ ರಾಯಲ್ಸ್ ವಿರುದ್ಧ ಬುಧವಾರ ಇಲ್ಲಿ ನಡೆಯುವ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಕೊರತೆ ಕಾಡದಂತೆ ಆಡಬೇಕು. ಅದಕ್ಕಾಗಿ ಹರಭಜನ್ ತಂತ್ರದ ಬಲೆ ಹೆಣೆಯುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಒತ್ತಡದಲ್ಲಿ ಸಿಲುಕಿ ತೊಳಲಾಡುವುದಕ್ಕಿಂತ ಆರಂಭದಲ್ಲಿಯೇ ಇನಿಂಗ್ಸ್ ಭದ್ರಗೊಳ್ಳುವಂತೆ ಮಾಡಬೇಕು ಎನ್ನುವುದು ಅವರ ಆಶಯ.
ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ವಿಶ್ವಾಸದಿಂದ ಮುನ್ನುಗ್ಗುತ್ತಿರುವ ರಾಜಸ್ತಾನ್ ರಾಯಲ್ಸ್ ದೊಡ್ಡ ಮೊತ್ತವನ್ನು ನಿರಾಯಾಸವಾಗಿ ಪೇರಿಸಿಡುವ ತಂಡವಾಗಿದೆ. ಆದ್ದರಿಂದ ಇಂಥ ಎದುರಾಳಿಯು ಗೆಲುವಿನೆಡೆ ದಾಪುಗಾಲು ಇಡದಂತೆ ಮಾಡಲು ವೇಗವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ಮುಂಬೈ ಇಂಡಿಯನ್ಸ್ ತೋರಲೇಬೇಕು.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 31 ರನ್‌ಗಳ ಅಂತರದಿಂದ ಗೆದ್ದು ಈ ಟೂರ್ನಿಯಲ್ಲಿ ಶುಭಾರಂಭ ಮಾಡಿದ ದ್ರಾವಿಡ್ ಪಡೆಯು ನಂತರ ಕೋಲ್ಕತ್ತ ನೈಟ್ ರೈಡರ್ಸ್ ಎದುರೂ ಅದ್ಭುತ ಆಟವನ್ನೇ ಆಡಿದೆ. ಆದರೆ ಮುಂಬೈ ಇಂಡಿಯನ್ಸ್ ತಂಡದ್ದು ಯಶಸ್ಸಿನ ಓಟವಲ್ಲ. ಅದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದರೂ, ಪುಣೆ ವಾರೀಯರ್ಸ್ ಎದುರು ಮುಗ್ಗರಿಸಿತು. ಪಂದ್ಯ ಆರಂಭ: ರಾತ್ರಿ 8.00ಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.