ADVERTISEMENT

ಮುರಳಿ ಆಟ ಅಮೂಲ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:40 IST
Last Updated 16 ಫೆಬ್ರುವರಿ 2011, 18:40 IST

ಕೊಲಂಬೊ: ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಗೆಲುವಿನ ಸಾಧನೆ ಮಾಡಬೇಕಾದರೆ ‘ಸ್ಪಿನ್ ಸಾಮ್ರಾಟ’ ಮುತ್ತಯ್ಯ ಮುರಳೀಧರನ್ ಫಿಟ್ ಆಗಿರಬೇಕು. ಅದಕ್ಕಾಗಿಯೇ ಶನಿವಾರ ನೆದರ್‌ಲ್ಯಾಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

ನಿವೃತ್ತಿಯ ಹಾದಿಯಲ್ಲಿರುವ ಮುರಳೀಗೆ ಇದು ಬಹುತೇಕ ಕೊನೆಯ ವಿಶ್ವಕಪ್ ಟೂರ್ನಿ. ಆದರೆ ಅವರ ಆಫ್‌ಸ್ಪಿನ್ ಇನ್ನೂ ಮೊನಚು ಕಳೆದುಕೊಂಡಿಲ್ಲ. ಯುವಕರು ಮತ್ತು ಅನುಭವಿಗಳಿರುವ ಉತ್ತಮ ತಂಡವಿದ್ದರೂ, ಮುರಳಿಯ ಅನುಭವದ ಬೌಲಿಂಗ್ ಶ್ರೀಲಂಕಾಕ್ಕೆ ನೆರವು ನೀಡಬಲ್ಲುದು. ಮುತ್ತಯ್ಯ ಶ್ರೀಲಂಕಾ ಪಾಲಿಗೆ ‘ಮ್ಯಾಚ್ ವಿನ್ನರ್’ ಎನ್ನುವ ಅಭಿಪ್ರಾಯ ತಂಡದ ಕೋಚ್ ಟ್ರೆವೋರ್ ಬೇಲಿಸ್ಸ್ ಅವರದ್ದು.

ನೆದರ್‌ಲ್ಯಾಂಡ್ಸ್ ಎದುರಿಗಿನ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಗೆದ್ದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುರಳಿಗೆ ಆ ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದು ಹೀಗೆ.

‘ಈ ಬಾರಿ ವಿಶ್ವಕಪ್ ಟೂರ್ನಿಗೆ ಭಾರತ ಮತ್ತು ಬಾಂಗ್ಲಾದೇಶದೊಂದಿಗೆ ಶ್ರೀಲಂಕಾ ಆತಿಥ್ಯ ವಹಿಸಿದೆ.  ಈ ದ್ವೀಪ ರಾಷ್ಟ್ರಕ್ಕೆ ಕಪ್ ಗೆಲ್ಲುವ ಗುರಿ ಇದೆ. ಟೆಸ್ಟ್‌ನಲ್ಲಿ 800 ಮತ್ತು ಏಕದಿನ ಪಂದ್ಯಗಳಲ್ಲಿ 519 ವಿಕೆಟ್ ಗಳಿಸಿದ ದಾಖಲೆಯಿರುವ ಆಫ್‌ಸ್ಪಿನ್ನರ್ ಮುರಳಿಯ ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್ ತಂಡಕ್ಕೆ ಅಮೂಲ್ಯ ಆಸ್ತಿ’ ಎಂದರು.

‘ನೆದರಲ್ಯಾಂಡ್ ವಿರುದ್ಧ ಉತ್ತಮ ಪ್ರದರ್ಶನ ಮೂಡಿಬಂದಿದೆ.  ತಿಲಕರತ್ನೆ ದಿಲ್ಶಾನ್ (78 ರನ್), ತಿಲ್ಲಾನ್ ಸಮರವೀರ (60), ಚಾಮರ ಸಿಲ್ವಾ (54) ಮತ್ತು ಚಾಮರಾ ಕಪುಗೆಡೆರಾ (ಅಜೇಯ 50) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ದಿಲ್ಹಾರಾ ಫರ್ನಾಂಡೋ (43ಕ್ಕೆ4) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಪ್ರವಾಸಿ ತಂಡವನ್ನು 195ಕ್ಕೆ ಕಟ್ಟಿ ಹಾಕಿದರು. ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಮಹೇಲಾ ಜಯವರ್ಧನೆ ಕೂಡ ಈ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು. ಲಂಕಾದ ತಂಡದ ಬೆಂಚ್ ಸಾಮರ್ಥ್ಯ ಕೂಡ ಚೆನ್ನಾಗಿದ್ದು, ಪ್ರತಿಭಾನ್ವಿತ ಯುವ ಆಟಗಾರರಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ವಿಶ್ವಕಪ್ ಟೂರ್ನಿಯ ನಂತರ ತಮ್ಮ ಸ್ಥಾನದಿಂದ ನಿರ್ಗಮಿಸುವ ಬಗ್ಗೆಯೂ ಬೆಲಿಸ್ಸ್ ಸೂಚ್ಯವಾಗಿ ಹೇಳಿದರು. ಮಂಗಳವಾರ (ಫೆ 15) ವೆಸ್ಟ್ ಇಂಡೀಸ್ ವಿರುದ್ಧ ಅಭ್ಯಾಸ ಪಂದ್ಯವನ್ನು ಶ್ರೀಲಂಕಾ ಆಡಲಿದೆ. ಟೂರ್ನಿಯಲ್ಲಿ ಶ್ರೀಲಂಕಾ ತನ್ನ ಮೊದಲ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ. ಫೆಬ್ರುವರಿ 20ರಂದು ಹಂಬನಟೋಟಾದಲ್ಲಿ ಪಂದ್ಯ ನಡೆಯಲಿದೆ. ಟೂರ್ನಿಯು 19ರಂದು ಢಾಕಾದಲ್ಲಿ ಉದ್ಘಾಟನೆಯಾಗಲಿದ್ದು, ಮೊದಲ ಪಂದ್ಯದಲ್ಲಿ ಭಾರತ, ಬಾಂಗ್ಲಾ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.