ADVERTISEMENT

ಮೂರನೇ ಟೆಸ್ಟ್‌ನಲ್ಲೂ ಮುಗ್ಗರಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಪರ್ತ್: ಕೇವಲ ಒಂಬತ್ತು ತಿಂಗಳ ಹಿಂದೆ ವಿಶ್ವಕಪ್ ಜಯಿಸಿ ಚಾಂಪಿಯನ್ನರಾಗಿ ಮೆರೆದ ಭಾರತ ಕ್ರಿಕೆಟ್ ತಂಡದ ಆಟಗಾರರ ಬ್ಯಾಟಿಂಗ್ ದೌರ್ಬಲ್ಯ ಮತ್ತೊಮ್ಮೆ ಬಯಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಈ ತಂಡ ಇನಿಂಗ್ಸ್ ಹಾಗೂ 37 ರನ್ ಸೋಲು ಕಂಡಿದ್ದು ಇದಕ್ಕೆ ಸಾಕ್ಷಿಯಾಯಿತು.

ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಅಗತ್ಯವಿದ್ದ 120 ರನ್ ಗಳಿಸಲು ಭಾನುವಾರ ಭಾರತಕ್ಕೆ ಸಾಧ್ಯವಾಗಲಿಲ್ಲ. 63.2 ಓವರ್‌ಗಳಲ್ಲಿ 171 ರನ್ ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಆಸೀಸ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0ರಲ್ಲಿ ಗೆಲುವಿನ ಮುನ್ನಡೆ ಸಾಧಿಸಿತು. ಇದಕ್ಕೆ ಬೆನ್ ಹಿಲ್ಫೆನಾಸ್ (54ಕ್ಕೆ 4) ಉತ್ತಮ ಬೌಲಿಂಗ್ ಕಾರಣವಾಯಿತು.

ಸತತ ಸೋಲಿನ ಚಿಂತೆ ಒಂದೆಡೆಯಾದರೆ, ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ನಾಯಕ ಮಹೇಂದ್ರ ಸಿಂಗ್ ದೋನಿ ಒಂದು ಪಂದ್ಯದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ವಿದೇಶಿ ನೆಲದಲ್ಲಿ ಸತತ ಏಳನೇ ಸೋಲು ಹಾಗೂ ನಾಯಕ ಸ್ಥಾನದ `ತಲೆದಂಡ~ದ ಒತ್ತಡಕ್ಕೆ ಸಿಲುಕಿರುವ ದೋನಿಗೆ ಈ ಶಿಕ್ಷೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನವರಿ 24ರಿಂದ ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ನಲ್ಲಿ ದೋನಿ ಆಡುವಂತಿಲ್ಲ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.