ADVERTISEMENT

ಮೇಜರ್ ಧ್ಯಾನ್‌ಚಂದ್ ಹೆಸರು ಶಿಫಾರಸು

`ಭಾರತ ರತ್ನ' ಗೌರವ ನೀಡುವಂತೆ ಪ್ರಧಾನಿಗೆ ಕ್ರೀಡಾ ಸಚಿವಾಲಯದ ಪತ್ರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ನವದೆಹಲಿ (ಪಿಟಿಐ): ಕ್ರೀಡಾ ಸಚಿವಾಲಯವು ಹಾಕಿ ದಂತಕತೆ ಧ್ಯಾನ್‌ಚಂದ್ ಅವರ ಹೆಸರನ್ನು ದೇಶದ ಅತ್ಯುನ್ನತ ಪ್ರಶಸ್ತಿ `ಭಾರತ ರತ್ನ'ಕ್ಕೆ ಶಿಫಾರಸು ಮಾಡಿದೆ.

`ಧ್ಯಾನ್‌ಚಂದ್ ಅವರಿಗೆ ಭಾರತ ರತ್ನ ನೀಡಬೇಕೆಂದು ಶಿಫಾರಸು ಮಾಡಿರುವ ಪತ್ರವನ್ನು ಈಗಾಗಲೇ ಪ್ರಧಾನ ಮಂತ್ರಿಗೆ ಕಳುಹಿಸಿಕೊಡಲಾಗಿದೆ' ಎಂದು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಪಿ.ಕೆ. ದೇವ್ ಹೇಳಿದ್ದಾರೆ. `ಸಚಿವಾಲಯವು ಈ ಪ್ರಶಸ್ತಿಗೆ ಧ್ಯಾನ್‌ಚಂದ್ ಹೆಸರನ್ನು ಮಾತ್ರ ಶಿಫಾರಸು ಮಾಡಿದೆ' ಎಂದು ಅವರು ಸ್ಪಷ್ಟಪಡಿಸಿದರು.

ಧ್ಯಾನ್‌ಚಂದ್ ಪುತ್ರ ಅಶೋಕ್ ಕುಮಾರ್ ನೇತೃತ್ವದ ಆರು ಸದಸ್ಯರ ಪ್ರತಿನಿಧಿಗಳ ನಿಯೋಗ ಜುಲೈ 12 ರಂದು ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿತ್ತು. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಮತ್ತು ಧ್ಯಾನ್‌ಚಂದ್ ಮೊಮ್ಮಗ ಗೌರವ್ ಸಿಂಗ್ ಅವರೂ ನಿಯೋಗದಲ್ಲಿದ್ದರು.

`ಪ್ರಶಸ್ತಿ ಲಭಿಸಲಿ ಅಥವಾ ಲಭಿಸದೇ ಇರಲಿ. `ಭಾರತ ರತ್ನ'ಕ್ಕೆ ಧ್ಯಾನ್‌ಚಂದ್ ಹೆಸರನ್ನು ಕ್ರೀಡಾ ಸಚಿವಾಲಯ ಶಿಫಾರಸು ಮಾಡಿರುವುದು ನಮ್ಮ ಕುಟುಂಬಕ್ಕೆ ದೊರೆತ ಬಲುದೊಡ್ಡ ಗೌರವ' ಎಂದು ಅಶೋಕ್ ಕುಮಾರ್ ಹೇಳಿದರು.

`ಧ್ಯಾನ್‌ಚಂದ್ ಹೆಸರನ್ನು ಪ್ರಶಸ್ತಿಗೆ ಪರಿಗಣಿಸುವಂತೆ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಸುವ ಭರವಸೆಯನ್ನು ಕ್ರೀಡಾ ಸಚಿವರು ನೀಡಿದ್ದಾರೆ. `ಭಾರತ ರತ್ನ'ಕ್ಕೆ ಇತರ ಯಾವುದೇ ಹೆಸರನ್ನು ಶಿಫಾರಸು ಮಾಡದಿರುವ ಕಾರಣ ಗೊಂದಲಕ್ಕೆ ಆಸ್ಪದವಿಲ್ಲ. ಧ್ಯಾನ್‌ಚಂದ್‌ಗೆ ಮರಣೋತ್ತವಾಗಿ ಈ ಗೌರವ ಲಭಿಸುವ ವಿಶ್ವಾಸ ನಮ್ಮದು' ಎಂದು ಅವರು ತಿಳಿಸಿದರು.

ಆಮ್‌ಸ್ಟರ್‌ಡಮ್ (1928), ಲಾಸ್ ಏಂಜಲೀಸ್ (1932) ಮತ್ತು ಬರ್ಲಿನ್‌ನಲ್ಲಿ (1936) ನಡೆದ ಒಲಿಂಪಿಕ್ ಕೂಟಗಳಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿದ್ದ ಧ್ಯಾನ್‌ಚಂದ್1979 ರಲ್ಲಿ ನಿಧನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.