ADVERTISEMENT

ಮೋದಿ ಮೇಲೆ ನಿಷೇಧಕ್ಕೆ ರಹದಾರಿ

ವಿಶೇಷ ಮಹಾಸಭೆ ನಡೆಸಲು ಬಿಸಿಸಿಐಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST

ಚೆನ್ನೈ (ಪಿಟಿಐ): ವಿಶೇಷ ಮಹಾಸಭೆ ನಡೆಸಲು ಬಿಸಿಸಿಐಗೆ ದೆಹಲಿ ಹೈಕೋರ್ಟ್‌ ಅನುಮತಿ ನೀಡಿದ್ದು, ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಅವರ ಮೇಲೆ ಆಜೀವ ನಿಷೇಧ ಹೇರಲು ಚಿಂತಿಸುತ್ತಿರುವ ಮಂಡಳಿಯ ಹಾದಿ ಸುಗಮಗೊಂಡಿದೆ.

ಬುಧವಾರ ಇಲ್ಲಿ ಈ ಸಭೆ ನಡೆಯಲಿದ್ದು, 2008–2010ರ ಅವಧಿಯಲ್ಲಿ ಐಪಿಎಲ್‌ನಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರದ ಕಾರಣ ಮೋದಿ ಅವರ ಮೇಲೆ ಆಜೀವ ನಿಷೇಧ ಹೇರಲು ಕ್ರಿಕೆಟ್‌ ಮಂಡಳಿಯು ಮುಂದಾಗಿದೆ.

ಈ ಸಭೆಯ ಅಧ್ಯಕ್ಷತೆಯನ್ನು ಬಿಸಿಸಿಐ ಮುಖ್ಯಸ್ಥ (ಅಧಿಕಾರ ರಹಿತ) ಎನ್‌.ಶ್ರೀನಿವಾಸನ್‌ ವಹಿಸುವ ನಿರೀಕ್ಷೆ ಇದೆ. ಮೋದಿ ವಿರುದ್ಧ ಶಿಸ್ತು ಸಮಿತಿ ನೀಡಿರುವ ವರದಿಯ ಬಗ್ಗೆ ಚರ್ಚೆ ನಡೆಸಲು ಈ ಸಭೆ ಕರೆಯಲಾಗಿದೆ. ಜೊತೆಗೆ ಶಿಕ್ಷೆಯ ಪ್ರಮಾಣದ ಬಗ್ಗೆಯೂ ತೀರ್ಮಾನಿಸಲಾಗುತ್ತದೆ.

ಆದರೆ ಮೋದಿ ಅವರ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಲು ಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಬೇಕು. ಅಂದರೆ ಬಿಸಿಸಿಐನಲ್ಲಿ ಒಟ್ಟು 31 ಮತಗಳಿದ್ದು ಆಜೀವ ಶಿಕ್ಷೆ ವಿಧಿಸಲು 21 ಮತಗಳ ಅಗತ್ಯವಿದೆ.

‘ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಹೊರತುಪಡಿಸಿದರೆ ಉಳಿದ ಯಾವುದೇ ಸಂಸ್ಥೆ ಮೋದಿ ಅವರನ್ನು ಬೆಂಬಲಿಸಲಾರದು. ಅದರಲ್ಲೂ ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದರ ಮೇಲೆ ಅವಲಂಬಿಸಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವಿಶೇಷ ಮಹಾಸಭೆ ನಡೆಸದಂತೆ ಪಟಿಯಾಲ ಹೌಸ್‌ ಕೋರ್ಟ್‌ನಲ್ಲಿ ಮೋದಿ ಶನಿವಾರ ತಡೆಯಾಜ್ಞೆ ತಂದಿದ್ದರು. ಆದರೆ ಮಂಗಳವಾರ ಹೈಕೋರ್ಟ್‌ ನೀಡಿದ ತೀರ್ಪು ಮೋದಿಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಮೋದಿ ಐಪಿಎಲ್‌ನ ಮೊದಲ ಮೂರು ಅವತರಣಿಕೆಗಳಲ್ಲಿ ಅಧ್ಯಕ್ಷರಾಗಿದ್ದರು. ಆದರೆ ಹಣಕಾಸು ಅವ್ಯವಹಾರ ಆರೋಪ ಕಾರಣ 2010ರಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ಮೂರು ಸದಸ್ಯರ ಶಿಸ್ತು ಸಮಿತಿ ರಚಿಸಲಾಗಿತ್ತು. ಅದರಲ್ಲಿ ಅರುಣ್‌ ಜೇಟ್ಲಿ, ಜ್ಯೋತಿರಾದಿತ್ಯ ಸಿಂದಿಯಾ ಹಾಗೂ ಎನ್‌.ಶ್ರೀನಿವಾಸನ್‌ ಇದ್ದರು. ಆದರೆ ಶ್ರೀನಿವಾಸನ್‌ ಹಿಂದೆ ಸರಿದಿದ್ದರು. ಹಾಗಾಗಿ ಅಂದಿನ ಐಪಿಎಲ್‌ ಅಧ್ಯಕ್ಷ ಚಿರಾಯು ಅಮಿನ್‌ ಅವರನ್ನು ಆ ಸಮಿತಿಗೆ ಸೇರಿಸಲಾಗಿತ್ತು. ಕೆಲ ದಿನಗಳ ನಂತರ ಅಮಿನ್‌ ಕೂಡ ಹಿಂದೆ ಸರಿದರು. ಈ ಕಾರಣ ಸಮಿತಿಯಲ್ಲಿ ಜೇಟ್ಲಿ ಹಾಗೂ ಸಿಂದಿಯಾ ಮಾತ್ರ ಇದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಇವರು 400 ಪುಟಗಳ ವರದಿ ಸಲ್ಲಿಸಿದ್ದರು.

ಬುಧವಾರ ನಡೆಯಲಿರುವ ಈ ಸಭೆಯಲ್ಲಿ ಪಾಲ್ಗೊಳ್ಳಲು ಬಿಸಿಸಿಐನ ಹಲವು ಸದಸ್ಯರು ಈಗಾಗಲೇ ಇಲ್ಲಿಗೆ ಬಂದಿದ್ದಾರೆ. ಒಂದು ಮೂಲದ ಪ್ರಕಾರ ಸದಸ್ಯರಿಗಾಗಿ ಮಹಾಬಲಿಪುರಂನಲ್ಲಿ ಶ್ರೀನಿವಾಸನ್‌ ಮೂರು ದಿನಗಳ ಪ್ರವಾಸ ಆಯೋಜಿಸಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್‌ 29ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನು ತಮ್ಮತ್ತ ಸೆಳೆಯಲು ರೂಪಿಸಿರುವ ತಂತ್ರ ಎಂಬುದು ತಿಳಿದುಬಂದಿದೆ. ಅಧ್ಯಕ್ಷರಾಗಿ ಅವರು ಮತ್ತೊಂದು ವರ್ಷ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂಕಷ್ಟದಲ್ಲಿ ಶ್ರೀನಿವಾಸನ್‌
ನವದೆಹಲಿ (ಪಿಟಿಐ):
ಮುಂಬರುವ ಬಿಸಿಸಿಐ ಚುನಾವಣೆಯಲ್ಲಿ ಎನ್‌.ಶ್ರೀನಿವಾಸನ್‌ ಮತ್ತೆ ಸ್ಪರ್ಧಿಸದಂತೆ ತಡೆಯೊಡ್ಡಬೇಕು ಎಂದು ಕೋರಿ ಬಿಹಾರ ಕ್ರಿಕೆಟ್‌ ಸಂಸ್ಥೆ (ಸಿಎಬಿ) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮುಂದಾಗಿದೆ.

ಮತ್ತೊಂದು ವರ್ಷ ಮರುಆಯ್ಕೆ ಬಯಸಿರುವ ಬಿಸಿಸಿಐ ಅಧ್ಯಕ್ಷ (ಅಧಿಕಾರ ರಹಿತ) ಶ್ರೀನಿವಾಸನ್‌ ಈ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೆಪ್ಟೆಂಬರ್‌ 29ರಂದು ಚೆನ್ನೈನಲ್ಲಿ ಕ್ರಿಕೆಟ್‌ ಮಂಡಳಿಯ ವಾರ್ಷಿಕ ಮಹಾಸಭೆ ನಡೆಯಲಿದೆ. ಶ್ರೀನಿವಾಸನ್‌ ಅಧ್ಯಕ್ಷರಾಗಿ ಮರುಆಯ್ಕೆ ಬಯಸಿದ್ದಾರೆ.

‘ಆಯಿತು. ನಾವು ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸುತ್ತೇವೆ’ ಎಂದು ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್‌ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ವಿಚಾರಣೆ ನಡೆಸಲು ಬಿಸಿಸಿಐ ರಚಿಸಿದ್ದ ಆಂತರಿಕ ತನಿಖಾ ಆಯೋಗವನ್ನು ಕಾನೂನು ಬಾಹಿರ ಎಂದು ಬಾಂಬೆ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಮಂಡಳಿಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆ ಬಗ್ಗೆ ವಿಚಾರಣೆಯನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆ.

ಈ ಬಗ್ಗೆ ವಿಚಾರಣೆ ಮುಗಿಯುವವರೆಗೆ ಶ್ರೀನಿವಾಸನ್‌ ಬಿಸಿಸಿಐನಲ್ಲಿ ಯಾವುದೇ ಹುದ್ದೆಯನ್ನು  ಹೊಂದದಂತೆ ನಿರ್ಬಂಧ ಹೇರಬೇಕು ಎಂದೂ ಬಿಹಾರ ಕ್ರಿಕೆಟ್‌ ಸಂಸ್ಥೆ ನ್ಯಾಯಾಲಯವನ್ನು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.