ADVERTISEMENT

ಮ್ಯಾಥ್ಯೂಸ್‌ ಪಡೆಗೆ ಅಮೋಘ ಗೆಲುವು

ಶಿಖರ್ ಧವನ್‌ ಶತಕ ; ರೋಹಿತ್ ಶರ್ಮಾ ಮಹೇಂದ್ರ ಸಿಂಗ್‌ ದೋನಿ ಅರ್ಧಶತಕ ವ್ಯರ್ಥ: ಭಾರತಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 20:14 IST
Last Updated 8 ಜೂನ್ 2017, 20:14 IST
ಶ್ರೀಲಂಕಾ ತಂಡದ ಗೆಲುವಿನ ರೂವಾರಿ ಕುಸಾಲ ಮೆಂಡಿಸ್ ಬ್ಯಾಟಿಂಗ್ ವೈಖರಿ.
ಶ್ರೀಲಂಕಾ ತಂಡದ ಗೆಲುವಿನ ರೂವಾರಿ ಕುಸಾಲ ಮೆಂಡಿಸ್ ಬ್ಯಾಟಿಂಗ್ ವೈಖರಿ.   

ಲಂಡನ್‌: ಧನುಷ್ಕಾ ಗುಣತಿಲಕ (76; 72ಎ, 7ಬೌಂ, 2ಸಿ) ಮತ್ತು ಕುಶಾಲ್‌ ಮೆಂಡಿಸ್‌ (89; 93ಎ, 11ಬೌಂ, 1ಸಿ) ಗುರುವಾರ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಭಾರತದ ಬೌಲರ್‌ಗಳಿಗೆ ಸಿಂಹಸ್ವಪ್ನರಾದರು.

ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ ಇವರು ಸೇರಿಸಿದ 159 ರನ್‌ಗಳ ಬಲದಿಂದ ಶ್ರೀಲಂಕಾ ತಂಡ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 7 ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಇದರೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸುವ ಕನಸನ್ನು ಜೀವಂತವಾಗಿಟ್ಟುಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ವಿರಾಟ್‌ ಪಡೆ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 321ರನ್‌ ಕಲೆಹಾಕಿತು.  ಲಂಕಾ ತಂಡ 48.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ಸೇರಿತು.

ADVERTISEMENT

ನಡೆಯದ ಡಿಕ್ವೆಲ್ಲಾ ಆಟ: ಗುರಿ ಬೆನ್ನಟ್ಟಿದ ಮ್ಯಾಥ್ಯೂಸ್‌ ಪಡೆಗೆ ಐದನೇ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಆಘಾತ ನೀಡಿ
ದರು. ಭುವಿ ತಾವೆಸೆದ ನಾಲ್ಕನೇ ಎಸೆತದಲ್ಲಿ ನಿರೋಷನ್‌ ಡಿಕ್ವೆಲ್ಲಾ (7) ವಿಕೆಟ್‌ ಕಬಳಿಸಿದರು. ಈ ಹಂತದಲ್ಲಿ ಒಂದಾದ ಗುಣತಿಲಕ ಮತ್ತು ಮೆಂಡಿಸ್‌ ಅವರು ಸುಂದರ ಇನಿಂಗ್ಸ್‌ ಕಟ್ಟಿದರು. ಇವರನ್ನು ಔಟ್‌ ಮಾಡಲು ಭಾರತದ ಬೌಲರ್‌ಗಳು ಪಡಿಪಾಟಲು ಪಟ್ಟರು.

ನಾಯಕ ಕೊಹ್ಲಿ ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಸ್ವತಃ ಅವರೇ ದಾಳಿಗಿಳಿದರು. ಕೊಹ್ಲಿ ಹಾಕಿದ 28ನೇ ಓವರ್‌ನ ಮೊದಲ ಎಸೆತವನ್ನು ಮೆಂಡಿಸ್‌ ಬೌಂಡರಿಗಟ್ಟಿದರು. ಐದನೇ ಎಸೆತದಲ್ಲಿ ಗುಣತಿಲಕ ರನ್‌ಔಟ್‌ ಆದರು. ಇದರ ಬೆನ್ನಲ್ಲೇ ಮೆಂಡಿಸ್‌ ಕೂಡ ರನ್‌ಔಟ್‌ ಆಗಿ ಪೆವಿಲಿಯನ್‌ ಸೇರಿದರು. ಹೀಗಾಗಿ ಭಾರತದ ಪಾಳಯದಲ್ಲಿ ಗೆಲುವಿನ ಕನಸು ಚಿಗುರೊಡೆದಿತ್ತು.

ಆದರೆ ಕುಶಾಲ್‌ ಪೆರೇರಾ (47; 44ಎ, 5ಬೌಂ), ನಾಯಕ ಮ್ಯಾಥ್ಯೂಸ್‌ (ಔಟಾಗದೆ 52; 45ಎ, 6ಬೌಂ) ಮತ್ತು ಅಸೆಲಾ ಗುಣರತ್ನೆ (ಔಟಾಗದೆ 34; 21ಎ, 2ಬೌಂ, 2ಸಿ) ಬಿರುಸಿನ ಆಟ ಆಡಿ ವಿರಾಟ್‌ ಪಡೆಯ ಕನಸನ್ನು ಚಿವುಟಿ ಹಾಕಿದರು.

ಶತಕದ ಆರಂಭ: ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಶಿಖರ್‌ ಮತ್ತು ರೋಹಿತ್‌ ಭದ್ರ ಅಡಿಪಾಯ ಹಾಕಿಕೊಟ್ಟರು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಮಿಂಚಿದ್ದ ಈ ಜೋಡಿ ಲಂಕಾ ಬೌಲಿಂಗ್‌ ದಾಳಿಯನ್ನೂ ಸಮರ್ಥವಾಗಿ ಎದುರಿಸಿತು. ಆರಂಭದ ಲ್ಲಿ ತಾಳ್ಮೆಯ ಆಟ ಆಡಿದ    ಈ ಜೋಡಿ ಐದನೇ ಓವರ್‌ ಬಳಿಕ ತೋಳರಳಿಸಿ ಆಡಲು ಅಣಿಯಾಯಿತು.

ಸುರಂಗ ಲಕ್ಮಲ್‌ ಹಾಕಿದ ಆರನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿದ ಧವನ್‌, ಅಸೆಲಾ ಗುಣತಿಲಕ ಅವರನ್ನೂ ದಂಡಿಸಿದರು.
ಇನ್ನೊಂದೆಡೆ ರೋಹಿತ್‌ ಕೂಡ ಗರ್ಜಿಸಿದರು. ತಿಸಾರ ಪೆರೇರಾ ಬೌಲ್‌ ಮಾಡಿದ 20ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಿದ ಅವರು ನಾಲ್ಕನೇ ಎಸೆತವನ್ನೂ ಸಿಕ್ಸರ್‌ಗೆ ಅಟ್ಟಿ ತಂಡದ ಮೊತ್ತ ಶತಕದ ಗಡಿ ದಾಟುವಂತೆ ಮಾಡಿದರು.

ಎಡಗೈ ಬ್ಯಾಟ್ಸ್‌ಮನ್‌ ಧವನ್‌, ಮಾಲಿಂಗ ಹಾಕಿದ 25ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ಅರ್ಧಶತಕದ ಸಂಭ್ರಮ ಆಚರಿಸಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 69 ಎಸೆತ. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್‌ ಗಳಿಸಿದ ರೋಹಿತ್‌ ಮರು ಎಸೆತದಲ್ಲಿ ತಿಸಾರ ಪೆರೇರಾಗೆ ಕ್ಯಾಚ್ ನೀಡಿದರು. ಇದರೊಂದಿಗೆ 138ರನ್‌ಗಳ ಮೊದಲ ವಿಕೆಟ್‌ ಜೊತೆಯಾಟಕ್ಕೆ ತೆರೆ ಬಿತ್ತು.

ನಾಯಕ ವಿರಾಟ್‌ ಕೊಹ್ಲಿ (0) ಮತ್ತು ಯುವರಾಜ್‌ ಸಿಂಗ್‌ (7) ಅವರೂ ಬೇಗನೆ ಔಟಾದರು. ಆದರೆ ಶಿಖರ್‌ ಮತ್ತು ಮಹೇಂದ್ರ ಸಿಂಗ್‌ ದೋನಿ (63; 52ಎ, 7ಬೌಂ, 2ಸಿ) ನಾಲ್ಕನೇ ವಿಕೆಟ್‌ಗೆ 82ರನ್‌ ಪೇರಿಸಿ ತಂಡವನ್ನು ಆತಂಕದಿಂದ ದೂರ ಮಾಡಿದರು.

ಎಡಗೈ ಬ್ಯಾಟ್ಸ್‌ಮನ್‌ ಧವನ್‌, ನುವಾನ್‌ ಪ್ರದೀಪ್ ಬೌಲ್‌ ಮಾಡಿದ 40ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬೌಂಡರಿ ಗಳಿಸಿ ಶತಕದ ಸಂಭ್ರಮ ಆಚರಿಸಿದರು. ಈ ಮೊತ್ತಕ್ಕೆ 25ರನ್‌ ಸೇರಿಸಿ ಅವರು ಲಸಿತ್‌ ಮಾಲಿಂಗಾಗೆ ವಿಕೆಟ್‌ ನೀಡಿದರು. ಆ ನಂತರ  ಕೇದಾರ್‌ ಜಾಧವ್‌ (ಔಟಾಗದೆ 25; 13ಎ, 3ಬೌಂ, 1ಸಿ) ಮಿಂಚಿದರು. ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು.

ಸ್ಕೋರ್‌ಕಾರ್ಡ್‌
ಭಾರತ 6ಕ್ಕೆ321(50 ಓವರ್‌ಗಳಲ್ಲಿ)

ರೋಹಿತ್‌ ಶರ್ಮಾ ಸಿ ತಿಸಾರ ಪೆರೇರಾ ಬಿ ಲಸಿತ್‌ ಮಾಲಿಂಗ   78
ಶಿಖರ್‌ ಧವನ್‌ ಸಿ ಕುಶಾಲ್‌ ಮೆಂಡಿಸ್‌ ಬಿ ಲಸಿತ್‌ ಮಾಲಿಂಗ  125
ವಿರಾಟ್‌ ಕೊಹ್ಲಿ ಸಿ ನಿರೋಷನ್‌ ಡಿಕ್ವೆಲ್ಲಾ ಬಿ  ನುವಾನ್‌ ಪ್ರದೀಪ್‌  00
ಯುವರಾಜ್‌ ಸಿಂಗ್‌ ಬಿ ಅಸೆಲಾ ಗುಣರತ್ನೆ  07
ಮಹೇಂದ್ರ ಸಿಂಗ್‌ ದೋನಿ ಸಿ ದಿನೇಶ್‌ ಚಾಂಡಿಮಾಲ್‌ ಬಿ ತಿಸಾರ ಪೆರೇರಾ 63
ಹಾರ್ದಿಕ್‌ ಪಾಂಡ್ಯ ಸಿ ಕುಶಾಲ್‌ ಪೆರೇರಾ ಸುರಂಗ ಲಕ್ಮಲ್‌  09
ಕೇದಾರ್‌ ಜಾಧವ್‌ ಔಟಾಗದೆ  25
ರವೀಂದ್ರ ಜಡೇಜ ಔಟಾಗದೆ  00
ಇತರೆ: (ಲೆಗ್‌ಬೈ 4, ವೈಡ್ 10) 14
ವಿಕೆಟ್‌ ಪತನ: 1–138 (ರೋಹಿತ್‌; 24.5), 2–139 (ಕೊಹ್ಲಿ; 25.5), 3–179 (ಯುವರಾಜ್‌; 33.3), 4–261 (ಧವನ್‌; 44.1), 5–278 (ಪಾಂಡ್ಯ; 45.4), 6–307 (ದೋನಿ; 49.2).
ಬೌಲಿಂಗ್‌: ಲಸಿತ್‌ ಮಾಲಿಂಗ 10–0–70–2, ಸುರಂಗ ಲಕ್ಮಲ್‌ 10–1–72–1, ನುವಾನ್‌ ಪ್ರದೀಪ್‌ 10–0–73–1, ತಿಸಾರ ಪೆರೇರಾ 9–0–54–1, ಧನುಷ್ಕಾ ಗುಣತಿಲಕ 8–0–41–0, ಅಸೆಲಾ ಗುಣರತ್ನೆ 3–0–7–1.

ಶ್ರೀಲಂಕಾ 3ಕ್ಕೆ322(48.4 ಓವರ್‌ಗಳಲ್ಲಿ)

ನಿರೋಷನ್‌ ಡಿಕ್ವೆಲ್ಲಾ ಸಿ ರವೀಂದ್ರ ಜಡೇಜ ಬಿ ಭುವನೇಶ್ವರ್‌ ಕುಮಾರ್‌  07
ಧನುಷ್ಕಾ ಗುಣತಿಲಕ ರನ್‌ಔಟ್‌ (ಉಮೇಶ್‌ ಯಾದವ್‌/ದೋನಿ)  76
ಕುಶಾಲ್‌ ಮೆಂಡಿಸ್‌ ರನ್‌ಔಟ್‌ (ಭುವನೇಶ್ವರ್‌ ಕುಮಾರ್‌)  89
ಕುಶಾಲ್‌ ಪೆರೇರಾ ಗಾಯಗೊಂಡು ನಿವೃತ್ತಿ  47
ಏಂಜೆಲೊ ಮ್ಯಾಥ್ಯೂಸ್‌ ಔಟಾಗದೆ  52
ಅಸೆಲಾ ಗುಣರತ್ನೆ ಔಟಾಗದೆ  34
ಇತರೆ: (ಲೆಗ್‌ಬೈ 11, ವೈಡ್‌ 5, ನೋಬಾಲ್‌ 1)  17
ವಿಕೆಟ್‌ ಪತನ: 1–11 (ಡಿಕ್ವೆಲ್ಲಾ; 4.4), 2–170 (ಗುಣತಿಲಕ ; 27.5), 3–196 (ಮೆಂಡಿಸ್‌; 32.4), 3–271* (ಪೆರೇರಾ, ಗಾಯಗೊಂಡು ನಿವೃತ್ತಿ; 42.6).
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 10–0–54–1, ಉಮೇಶ್‌ ಯಾದವ್‌ 9.4–0–67–0, ಜಸ್‌ಪ್ರೀತ್‌ ಬೂಮ್ರಾ 10–0–52–0, ಹಾರ್ದಿಕ್‌ ಪಾಂಡ್ಯ 7–1–51–0, ರವೀಂದ್ರ ಜಡೇಜ 6–0–52–0, ಕೇದಾರ್‌ ಜಾಧವ್‌ 3–0–18–0, ವಿರಾಟ್‌ ಕೊಹ್ಲಿ 3–0–17–0.
ಫಲಿತಾಂಶ:  ಶ್ರೀಲಂಕಾ ತಂಡಕ್ಕೆ 7ವಿಕೆಟ್‌ ಗೆಲುವು.
ಪಂದ್ಯಶ್ರೇಷ್ಠ:  ಕುಶಾಲ್‌ ಮೆಂಡಿಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.