ADVERTISEMENT

ಯುವ ಆಟಗಾರ ಅರುಣ್‌ ನಿಧನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 19:00 IST
Last Updated 22 ಏಪ್ರಿಲ್ 2011, 19:00 IST

ಬೆಂಗಳೂರು: ಅದೆಷ್ಟು ಕನಸುಗಳು ಆ ಹುಡುಗನ ಎದೆಯಾಳದಲ್ಲಿದ್ದವೋ? ಅದೆಷ್ಟು ಆಸೆಗಳನ್ನು ಹೊತ್ತು ಅವರು ಅಂಗಳದಲ್ಲಿ ಚೆಂಡಿನೊಂದಿಗೆ ಸರಸವಾಡುತ್ತಿದ್ದರೋ?ಆದರೆ ಅಭ್ಯಾಸ ಮಾಡುತ್ತಿದ್ದಾಗ ಗಾಯಗೊಂಡಿದ್ದ ಯುವ ಫುಟ್‌ಬಾಲ್‌ ಆಟಗಾರ ಎಸ್‌.ಅರುಣ್‌ ಕುಮಾರ್‌ (24) ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಎಚ್‌ಎಎಲ್‌ ಫುಟ್‌ಬಾಲ್‌ ಕ್ಲಬ್‌ ತಂಡದ ಆಟಗಾರ ಕೂಡ ಆಗಿರುವ ಅರುಣ್‌ ಅತ್ಯುತ್ತಮ ಗೋಲ್‌ ಕೀಪರ್‌. ಕೋಲಾರದ ಕೆಜಿಎಫ್‌ನ ಇವರು ಎರಡು ತಿಂಗಳಿನಿಂದ ಬೆಂಗಳೂರಿನ ಎಚ್‌ಎಎಲ್‌ ಕ್ವಾರ್ಟರ್ಸ್‌ನಲ್ಲಿ ಉಳಿದುಕೊಂಡಿದ್ದರು.

ಅರುಣ್‌ ಬುಧವಾರ ಎಚ್‌ಎಎಲ್‌ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ತೀವ್ರವಾಗಿ ಗಾಯಗೊಂಡಿದ್ದರು. ಅವರ ಕಾಲಿಗೆ ಗಾಯವಾಗಿತ್ತು. ಶುಕ್ರವಾರ ಬೆಳಿಗ್ಗೆ ಎದೆ ನೋವಿಗೆ ಒಳಗಾದ ಅವರನ್ನು ಎಚ್‌ಎಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ಅವರು ನಿಧನರಾದರು. ಅವರ ಅಂತ್ಯಕ್ರಿಯೆ ಕೆಜಿಎಫ್‌ನಲ್ಲಿ ಶನಿವಾರ ನಡೆಯಲಿದೆ.

ಅರುಣ್‌ 2003ರಲ್ಲಿ ಸಬ್‌ ಜೂನಿಯರ್‌ ಟೂರ್ನಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದರು. ವಿವಾ ಕೇರಳ ಪರ ಕೂಡ ಆಡಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದಲ್ಲಿ ಕೋಚ್‌ ಅಸ್ಲಮ್‌ ಖಾನ್‌ ಮಾರ್ಗದರ್ಶನದಲ್ಲಿ ಅವರು ಮೊದಲು ತಮ್ಮ ಆಟ ಆರಂಭಿಸಿದ್ದರು. ಅಲ್ಲಿ ನಾಲ್ಕು ವರ್ಷ ಇದ್ದರು.

`ಉದಯೋನ್ಮುಖ ಆಟಗಾರನೊಬ್ಬನನ್ನು ನಾವು ಕಳೆದುಕೊಂಡಿದ್ದೇವೆ~ ಎಂದು ಎಚ್‌ಎಎಲ್‌ ಫುಟ್‌ಬಾಲ್‌ ಕ್ಲಬ್‌ನ  ಆಟಗಾರ ಜಯಕುಮಾರ್‌ ತಿಳಿಸಿದ್ದಾರೆ. ಗೋಲ್‌ ಕೀಪರ್‌ಗಳ ಕೊರತೆ ಇರುವ ಈ ಸಮಯದಲ್ಲಿ ಇಂತಹ ಆಘಾತ ಎದುರಾಗಿದೆ ಎಂದಿದ್ದಾರೆ.

ಯುವ ಆಟಗಾರ ಅರುಣ್‌ ಅವರ ಅಕಾಲಿಕ ನಿಧನಕ್ಕೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌), ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಹಾಗೂ ಬೆಂಗಳೂರು ಜಿಲ್ಲಾ  ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಸಂತಾಪ ವ್ಯಕ್ತಪಡಿಸಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.