ADVERTISEMENT

ರಣಜಿ ಕ್ರಿಕೆಟ್: ಕರುನಾಡ ಪಡೆಗೆ ಇನಿಂಗ್ಸ್ ಜಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2011, 19:30 IST
Last Updated 12 ನವೆಂಬರ್ 2011, 19:30 IST
ರಣಜಿ ಕ್ರಿಕೆಟ್: ಕರುನಾಡ ಪಡೆಗೆ ಇನಿಂಗ್ಸ್ ಜಯ
ರಣಜಿ ಕ್ರಿಕೆಟ್: ಕರುನಾಡ ಪಡೆಗೆ ಇನಿಂಗ್ಸ್ ಜಯ   

ನವದೆಹಲಿ: `ಕೊಡಗಿನ ಕುವರ~ ಕೆ.ಪಿ.ಅಪ್ಪಣ್ಣ ಅವರ ಎಸೆತಗಳು ಶನಿವಾರ ರೇಲ್ವೇಸ್ ತಂಡದ ಆಟಗಾರರ ಪಾಲಿಗೆ ಕೋವಿಯಿಂದ ಹೊರಟ ಮದ್ದಿನ ಗುಂಡುಗಳಂತೆ ಭಾಸವಾದವೋ ಏನೋ. ಮಧ್ಯಾಹ್ನದ ವೇಳೆಗೆ ಆ ತಂಡದ ಎಲ್ಲ ವಿಕೆಟ್‌ಗಳು ಇಸ್ಪೀಟ್ ಎಲೆಗಳಂತೆ ಧರೆಗೆ ಉರುಳಿಬಿಟ್ಟವು.

ಅಪ್ಪಣ್ಣ ಅವರ ಕ್ರಿಕೆಟ್ ಜೀವನದ ಸರ್ವಶ್ರೇಷ್ಠ ಸಾಧನೆಯನ್ನೇ ಬುನಾದಿ ಮಾಡಿಕೊಂಡ ಕರ್ನಾಟಕ ತಂಡ, ಇಲ್ಲಿಯ ಕರ್ನೇಲ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ  ಕ್ರಿಕಟ್ ಸೂಪರ್ ಲೀಗ್ `ಎ~ ಗುಂಪಿನ ಪಂದ್ಯದಲ್ಲಿ ರೇಲ್ವೇಸ್ ತಂಡದ ವಿರುದ್ಧ, ಇನಿಂಗ್ಸ್ ಹಾಗೂ 51 ರನ್‌ಗಳ ಭಾರಿ ಅಂತರದಿಂದ ಜಯ ಸಾಧಿಸಿತು. ಇನ್ನೂ ಒಂದೂವರೆ ದಿನದ ಆಟ ಬಾಕಿ ಇರುವಾಗಲೇ ವಿನಯ್ ಪಡೆ ಗೆಲುವಿನ ಕೇಕೆ ಹಾಕಿತು.

ಪ್ರವಾಸಿಗರ 347 ರನ್‌ಗಳ ಮೊದಲ ಇನಿಂಗ್ಸ್ ಮೊತ್ತಕ್ಕೆ ಉತ್ತರವಾಗಿ ಬಂಗಾರ್ ಪಡೆ, ಮೊದಲ ಇನಿಂಗ್ಸ್‌ನಲ್ಲಿ 134 ಹಾಗೂ ದ್ವಿತೀಯ ಇನಿಂಗ್ಸ್ ನಲ್ಲಿ 162 ರನ್ ಗಳಿಸುವಷ್ಟರಲ್ಲಿ ಕುಸಿಯಿತು. 30ರ ಗಡಿ ದಾಟಿದ ಅರ್ಧ ಡಜನ್ ಆಟಗಾರರನ್ನು ಹೊಂದಿದ್ದ ರೇಲ್ವೇಸ್ ತಂಡ, ಕರ್ನಾಟಕದ ಬಿಸಿರಕ್ತದ ಹುಡುಗರ ಮುಂದೆ ಯಾವ ವಿಭಾಗದಲ್ಲೂ ಸರಿಸಾಟಿಯಾಗಲಿಲ್ಲ.

ಬಂಗಾರ್ ಬಳಗ ಇದೇ ಮೈದಾನದಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಮುಂಬಯಿ ತಂಡದ ಎದುರು ಹತ್ತು ವಿಕೆಟ್ ಅಂತರದಿಂದ ಶರಣಾಗಿತ್ತು. ಸತತ ಎರಡನೇ ಹೀನಾಯ ಸೋಲಿನಿಂದ ಆ ತಂಡ ನಿರಾಸೆಯ ಮಡುವಿನಲ್ಲಿ ಹೂತುಹೋದರೆ, ರಾಜಸ್ತಾನ ತಂಡದ ಎದುರಿನ ಪಂದ್ಯದಲ್ಲಿ ಗೆಲುವಿನ ಹತ್ತಿರ ಬಂದು ದೂರವಾಗಿದ್ದ ಕರ್ನಾಟಕ ತಂಡ, ಇಂದಿನ ಇನಿಂಗ್ಸ್ ಜಯದ ಮೂಲಕ ಹಳೆಯ ನಿರಾಸೆಯನ್ನು ಮರೆಯಿತು.

ಬೆಳಿಗ್ಗೆ ಶುಕ್ರವಾರದ ಆಟವನ್ನು (16 ಓವರ್‌ಗಳಲ್ಲಿ 2 ವಿಕೆಟ್‌ಗೆ 33) ಮುಂದುವರಿಸಿದ ರೇಲ್ವೇಸ್ ತಂಡ, ಮೊದಲ ಇನಿಂಗ್ಸ್‌ನಂತೆಯೇ ಮತ್ತೆ ಬ್ಯಾಟಿಂಗ್ ಹಳಿಯನ್ನು ಸಂಪೂರ್ಣವಾಗಿ ತಪ್ಪಿ, ಕೇವಲ 43 ಓವರ್‌ಗಳಲ್ಲಿ ತನ್ನ ಮಿಕ್ಕ ವ್ಯವಹಾರವನ್ನು ಮುಗಿಸಿತು. ಏಳು ವಿಕೆಟ್ ಕಳೆದುಕೊಂಡು ಊಟಕ್ಕೆ ತೆರಳಿತ್ತು ರೇಲ್ವೇಸ್ ತಂಡ. ಭೋಜನ ವಿರಾಮದ ಬಳಿಕ ಏಳು ಓವರ್‌ಗಳಲ್ಲಿ ಉಳಿದ ಮೂರು ವಿಕೆಟ್‌ಗಳು ಪತನಗೊಳ್ಳುತ್ತಿದ್ದಂತೆಯೇ ಪಂದ್ಯದ ರೆಫ್ರಿ ರಾಜೇಂದ್ರ ಜಡೇಜಾ `ಕರ್ನಾಟಕಕ್ಕೆ ಇನಿಂಗ್ಸ್ ಜಯ~ ಎಂಬ ಅಂತಿಮ ಷರಾ ಬರೆದರು.

ರಕ್ಷಣಾ ಚಿಪ್ಪಿನೊಳಗೆ ಅಡಗಿ ಕುಳಿತು ಬಲು ಎಚ್ಚರಿಕೆಯಿಂದ ಆಡುತ್ತಿದ್ದ ಬಂಗಾರ್ ಅವರನ್ನು ಎಲ್‌ಬಿ ಜಾಲಕ್ಕೆ ಕೆಡವಿದ ಅಪ್ಪಣ್ಣ, ಎದುರಾಳಿ ತಂಡದ ಬ್ಯಾಟಿಂಗ್ ಹಡಗಿಗೆ ದೊಡ್ಡ ತೂತು ಕೊರೆದರು. ಕ್ರೀಸ್‌ನಿಂದ ತುಸು ದೂರ ಆಚೆಗೆ ಬಿದ್ದ ಚೆಂಡು, ಹೊರಹೋಗುತ್ತಿದೆ ಎಂಬ ಭ್ರಮೆ ಮೂಡಿಸಿ ಲಬಕ್ಕನೆ ವಿಕೆಟ್‌ನತ್ತ ಓಡಿಬಂತು. ಬಂಗಾರ್ ಬ್ಯಾಟ್ ಅಡ್ಡ ತಂದರಾದರೂ ಚೆಂಡು ಪ್ಯಾಡ್ ಹುಡುಕಿಕೊಂಡು ಹೋಯಿತು. ಆ ಕ್ಷಣವೇ ಅಂಪೈರ್ ರಾಜೇಶ್ ದೇಶಪಾಂಡೆ ಅವರ ತೋರುಬೆರಳು ಸಹ ಮುಗಿಲು ನೋಡಿತು.

ಜೊತೆಗಾರ ಹೋದಮೇಲೆ ಹೆಚ್ಚುಹೊತ್ತು ನಿಲ್ಲದ ಶಿವಕಾಂತ್ ಶುಕ್ಲಾ, ಸ್ಪಿನ್ ಛೂಮಂತ್ರ ಹಾಕುತ್ತಿದ್ದ ಅಪ್ಪಣ್ಣ ಅವರ ಎಸೆತದಲ್ಲಿ ಚೆಂಡನ್ನು ಮೆಲ್ಲಗೆ ತಳ್ಳಿದರು. ಕೆಳಹಂತದಲ್ಲಿ ತೂರಿಬಂದ ಕ್ಯಾಚ್ ಅನ್ನು ಸಿಲ್ಲಿ ಪಾಯಿಂಟ್‌ನಲ್ಲಿದ್ದ ಕೆ.ಬಿ.ಪವನ್ ಉದ್ದಕ್ಕೆ ಮಲಗಿ ಒಂದೇ ಕೈಯಲ್ಲಿ ಪಡೆದ ರೀತಿ ಅತ್ಯಂತ ರೋಚಕವಾಗಿತ್ತು. ಆಮೇಲೆ ಶುರುವಾಗಿದ್ದು ಲೆಫ್ಟ್-ರೈಟ್ ನಡಿಗೆ. ಬ್ಯಾಟ್ಸ್‌ಮನ್‌ಗಳು ಕ್ರೀಸ್‌ಗೆ ಬಂದು, ಮುಖ ತೋರಿಸಿ ಹೋಗುವ ಪರೇಡ್ ಮುಕ್ಕಾಲು ಗಂಟೆ ನಡೆಯಿತು.

ಮಹೇಶ್ ರಾವತ್ ಮತ್ತು ಜೈಪ್ರಕಾಶ್ ಯಾದವ್ ಮಾತ್ರ ಆರುವ ಮುನ್ನ ಉರಿಯುವ ದೀಪದಂತೆ ಕೆಲವು ಬೌಂಡರಿಗಳನ್ನು ಗಿಟ್ಟಿಸಿ, ನಿದ್ದೆ ಹೋದವರನ್ನು ಎಚ್ಚರಗೊಳ್ಳುವಂತೆ ಮಾಡಿದರು. ವಿಕೆಟ್‌ನ ಒಂದು ತುದಿಯಿಂದ ನಿರಂತರವಾಗಿ ಬೌಲ್ ಮಾಡಿದ ಅಪ್ಪಣ್ಣ, ನಿಯಮಿತ ಅಂತರದಲ್ಲಿ ವಿಕೆಟ್ ಪಡೆಯುತ್ತಲೇ ಸಾಗಿದರು. ಶಿಸ್ತುಬದ್ಧ ದಾಳಿ ನಡೆಸಿದ ಅವರು, ಚೆಂಡನ್ನು ತಿರುಗಿಸುತ್ತಿದ್ದ ರೀತಿಯೂ ಅದ್ಭುತವಾಗಿತ್ತು. ಪಿಚ್ ಜೊತೆ ಹಾಯ್ ಹೇಳುತ್ತಲೇ ಕೆಳಹಂತದಲ್ಲಿ ತೂರಿ ಬರುತ್ತಿದ್ದ ಚೆಂಡು, ಎತ್ತ ಹೋಗುತ್ತಿದೆ ಎಂಬುದು ತಿಳಿಯದೆ ಬ್ಯಾಟ್ಸ್‌ಮನ್‌ಗಳು ಕಕ್ಕಾಬಿಕ್ಕಿ ಆಗುತ್ತಿದ್ದರು.

ರಣಜಿ ಕ್ರಿಕೆಟ್‌ನಲ್ಲಿ 50ನೇ ಬಲಿಯನ್ನೂ ಅಪ್ಪಣ್ಣ ಅವರಿಗೆ ಈ ಪಂದ್ಯ ತಂದುಕೊಟ್ಟಿತು. ರಾವತ್ ಅವರ ವಿಕೆಟ್ ರೂಪದಲ್ಲಿ ಅವರಿಗೆ ಈ ಅದೃಷ್ಟ ಒಲಿಯಿತು. ಕರ್ನೇಲ್ ಸಿಂಗ್ ಪಿಚ್ ಮೇಲೆ ಮೂಡಿಬಂದ ಸಾಧನೆ (107 ರನ್‌ಗಳಿಗೆ 11 ವಿಕೆಟ್) ಅವರ ರಣಜಿ ಕ್ರಿಕೆಟ್‌ನ ಶ್ರೇಷ್ಠ ಪ್ರದರ್ಶನವಾಗಿದೆ. ಪಂದ್ಯವೊಂದರಲ್ಲಿ ಆರು ವಿಕೆಟ್ ಪಡೆದಿದ್ದೇ ಅವರ ಇದುವರೆಗಿನ ಉತ್ತಮ ಪ್ರದರ್ಶನವಾಗಿತ್ತು.

ಎರಡು ಪಂದ್ಯಗಳಿಂದ ಒಟ್ಟಾರೆ ಒಂಬತ್ತು ಪಾಯಿಂಟ್ ಗಳಿಸಿರುವ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ಮುಂಬಯಿ ವಿರುದ್ಧ ಅದರ ನೆಲದಲ್ಲೇ ನ. 17ರಿಂದ ಆಡಲಿದೆ.

ಸ್ಕೋರು ವಿವರ
ಕರ್ನಾಟಕ ಮೊದಲ ಇನಿಂಗ್ಸ್ 114.3 ಓವರ್‌ಗಳಲ್ಲಿ 347
ರೇಲ್ವೇಸ್ ಮೊದಲ ಇನಿಂಗ್ಸ್ 53.5 ಓವರ್‌ಗಳಲ್ಲಿ 134
ರೇಲ್ವೇಸ್ ದ್ವಿತೀಯ ಇನಿಂಗ್ಸ್ 59 ಓವರ್‌ಗಳಲ್ಲಿ 162
(ಶುಕ್ರವಾರ 16 ಓವರ್‌ಗಳಲ್ಲಿ 2 ವಿಕೆಟ್‌ಗೆ 33)

ಶಿವಕಾಂತ್ ಶುಕ್ಲಾ ಸಿ ಕೆ.ಬಿ. ಪವನ್ ಬಿ ಕೆ.ಪಿ.ಅಪ್ಪಣ್ಣ  34
(172 ನಿಮಿಷ, 111 ಎಸೆತ, 4 ಬೌಂಡರಿ)
ಸಂಜಯ್ ಬಂಗಾರ್ ಎಲ್‌ಬಿಡಬ್ಲ್ಯು ಬಿ ಕೆ.ಪಿ.ಅಪ್ಪಣ್ಣ  14
(69 ನಿಮಿಷ, 47 ಎಸೆತ, 3 ಬೌಂಡರಿ)
ಫೈಯಾಜ್ ಫಜಲ್ ಸ್ಟಂಪ್ಡ್ ಸಿ.ಎಂ.ಗೌತಮ್ ಬಿ ಕೆ.ಪಿ.ಅಪ್ಪಣ್ಣ  14
(43 ನಿಮಿಷ, 26 ಎಸೆತ, 2 ಬೌಂಡರಿ)
ಯರೇಗೌಡ ಸಿ ಮನೀಷ್ ಪಾಂಡೆ ಬಿ ಕೆ.ಪಿ.ಅಪ್ಪಣ್ಣ  10
(21 ನಿಮಿಷ, 21 ಎಸೆತ, 1 ಸಿಕ್ಸರ್)
ಮಹೇಶ್ ರಾವತ್ ಬಿ ಕೆ.ಪಿ.ಅಪ್ಪಣ್ಣ  28
(67 ನಿಮಿಷ, 39 ಎಸೆತ, 5 ಬೌಂಡರಿ)
ಜೈಪ್ರಕಾಶ್ ಯಾದವ್ ಎಲ್‌ಬಿಡಬ್ಲ್ಯು ಬಿ ಕೆ.ಪಿ.ಅಪ್ಪಣ್ಣ 17
(29 ನಿಮಿಷ, 26 ಸೆತ, 3 ಬೌಂಡರಿ)
ಮುರಳಿ ಕಾರ್ತಿಕ್ ಸಿ ಕೆ.ಬಿ.ಪವನ್ ಬಿ ಕೆ.ಪಿ.ಅಪ್ಪಣ್ಣ  01
(2 ನಿಮಿಷ, 3 ಎಸೆತ)
ನಿಲೇಶ್‌ಕುಮಾರ್ ಚವ್ಹಾಣ್ ನಾಟೌಟ್  03 
(23 ನಿಮಿಷ, 21 ಎಸೆತ)
ಆರ್ಲೆನ್ ಕೋನ್ವಾರ್ ಸ್ಟಂಪ್ಡ್ ಸಿ.ಎಂ.ಗೌತಮ್ ಬಿ ಅಮಿತ್ ವರ್ಮಾ (9 ನಿಮಿಷ, 12 ಎಸೆತ, 2 ಬೌಂಡರಿ) 08
ಇತರೆ: (ಬೈ-8, ಲೆಗ್‌ಬೈ-3, ನೋಬಾಲ್-3)  14
ವಿಕೆಟ್ ಪತನ: 1-6 (5.5, ಖನೋಲ್ಕರ್), 2-33 (16.6, ಮರುಪುರಿ), 3-66 (31.4, ಬಂಗಾರ್), 4-87 (37.6, ಶುಕ್ಲಾ), 5-103 (40.1, ಫಜಲ್), 6-109 (ಯರೇಗೌಡ, 43.4), 7-141 (51.1, ಯಾದವ್), 8-143 (51.6, ಮುರಳಿ), 9-152 (55.4, ರಾವತ್), 10-162 (58.6, ಕೋನ್ವಾರ್).
ಬೌಲಿಂಗ್: ಆರ್.ವಿನಯಕುಮಾರ್ 9-4-13-1, ಕೆ.ಪಿ.ಅಪ್ಪಣ್ಣ 21-3-68-6, ಮಿಥುನ್ ಅಭಿಮನ್ಯು 8-2-13-1, ಸ್ಟುವರ್ಟ್ ಬಿನ್ನಿ 3-1-8-0, ಗಣೇಶ್ ಸತೀಶ್ 2-0-7-0, ಎಸ್.ಅರವಿಂದ್ 8-3-10-0 (ನೋಬಾಲ್-2), ಅಮಿತ್ ವರ್ಮಾ 8-1-32-2 (ನೋಬಾಲ್-1).
ಫಲಿತಾಂಶ: ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 51 ರನ್‌ಗಳ ಗೆಲುವು; ಒಂದು ಬೋನಸ್ ಸೇರಿದಂತೆ ಆರು ಪಾಯಿಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.