ADVERTISEMENT

ರಣಜಿ ಟ್ರೋಫಿ;: ವೇಗದ ಅಬ್ಬರ; ಕರ್ನಾಟಕ ತತ್ತರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST
ರಣಜಿ ಟ್ರೋಫಿ;: ವೇಗದ ಅಬ್ಬರ; ಕರ್ನಾಟಕ ತತ್ತರ
ರಣಜಿ ಟ್ರೋಫಿ;: ವೇಗದ ಅಬ್ಬರ; ಕರ್ನಾಟಕ ತತ್ತರ   

ಮೀರತ್: ಒಂದು, ಎರಡು, ಮೂರು, ನಾಲ್ಕು... ಹೀಗೆ ಒಂದರ ಮೇಲೊಂದು ಹೆಜ್ಜೆ ಇಟ್ಟಂತೆ ವಿಕೆಟ್ ಒಪ್ಪಿಸಿದರು ಕರ್ನಾಟಕದ ಬ್ಯಾಟ್ಸ್‌ಮನ್‌ಗಳು. ಬಲಿಷ್ಠ ಬ್ಯಾಟಿಂಗ್ ಶಕ್ತಿ ಹೊಂದಿದ್ದರೂ, ಸ್ಟುವರ್ಟ್ ಬಿನ್ನಿ ಪಡೆಗೆ ಉತ್ತರಪ್ರದೇಶದ ಎದುರು ಎದೆಯುಬ್ಬಿಸಿ ಸವಾಲೊಡ್ಡಿ ನಿಲ್ಲಲು ಸಾಧ್ಯವಾಗಲಿಲ್ಲ.

ವಿಕ್ಟೋರಿಯ ಪಾರ್ಕ್ ಕ್ರೀಡಾಂಗಣದ ಮೇಲೆ ಭಾನುವಾರ ಸುತ್ತುಗಟ್ಟುತ್ತಿದ್ದ ಹದ್ದುಗಳು ಯಾವುದಾದರೂ ತಂಡಕ್ಕೆ ಅಪಾಯ ಎದುರಾಗಲಿದೆ ಎನ್ನುವ ಮನ್ಸೂಚನೆ ನೀಡಿದ್ದವು. ಆ ಸಂಕಷ್ಟ ಕರ್ನಾಟಕದ ಬ್ಯಾಟ್ಸ್‌ಮನ್‌ಗಳಿಗೆ ಎಂಬುದು ಗೊತ್ತಾಗಲು ತುಂಬಾ ಹೊತ್ತು ಬೇಕಾಗಲಿಲ್ಲ.

ಎರಡನೇ ದಿನ ಕೇವಲ 8.1 ಓವರ್‌ಗಳ ಆಟವಾಡಿ ಹತ್ತು ರನ್ ಕಲೆಹಾಕಿ ಉತ್ತರಪ್ರದೇಶ ಒಟ್ಟು 283 ರನ್‌ಗಳನ್ನು ಮೊದಲ ಇನಿಂಗ್ಸ್‌ನಲ್ಲಿ ಪೇರಿಸಿಟ್ಟಿತು. ಈ ಅಲ್ಪ ಮೊತ್ತದ ಸವಾಲು ಪ್ರಬಲ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಕರ್ನಾಟಕಕ್ಕೆ ಸುಲಭವೆಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಪಿಚ್‌ನ `ಮರ್ಮ~ದ ಮುಂದೆ ಬಿನ್ನಿ ಪಡೆಯ ಬ್ಯಾಟ್ಸ್‌ಮನ್‌ಗಳ `ಆಟ~ ನಡೆಯಲಿಲ್ಲ. ಕೇವಲ ಮೂರು ಗಂಟೆ 57 ನಿಮಿಷದಲ್ಲಿ ಕರ್ನಾಟಕದ ಎಲ್ಲಾ ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದರು. ಕಲೆ ಹಾಕಿದ್ದು 181 ರನ್ ಮಾತ್ರ.

ಕರ್ನಾಟಕ ತಂಡವನ್ನು ಕೇವಲ 54.4 ಓವರ್‌ಗಳಲ್ಲಿ ಕಟ್ಟಿ ಹಾಕಿ 102 ರನ್‌ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದ ಉತ್ತರಪ್ರದೇಶ ಎರಡನೇ ಇನಿಂಗ್ಸ್‌ನ ಬ್ಯಾಟಿಂಗ್‌ಗೆ ಮುಂದಾಯಿತು. ಭಾನುವಾರದ ಅಂತ್ಯಕ್ಕೆ ಈ ತಂಡ 22 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮುಕುಲ್ ದಾಗರ್ (18), ಅಮೀರ್ ಖಾನ್ (5) ಹಾಗೂ ನಾಯಕ ಸುರೇಶ್ ರೈನಾ (8) ಔಟಾಗಿದ್ದಾರೆ.

ಪರದಾಡಿದ ಕರ್ನಾಟಕ: ಉತ್ತರಪ್ರದೇಶದ `ವೇಗ~ದ ಬೌಲಿಂಗ್ ಮುಂದೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ತತ್ತರಿಸಿ ಹೋದರು. ಈ ತಂಡದ ಬ್ಯಾಟಿಂಗ್ ಶಕ್ತಿ ಎನಿಸಿದ್ದ ಆರಂಭಿಕ ಆಟಗಾರ ಕೆ.ಬಿ. ಪವನ್ `ಸೊನ್ನೆ~ ಸುತ್ತಿದರು. ರಾಬಿನ್ ಉತ್ತಪ್ಪ (12), ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದ ಗಣೇಶ್ ಸತೀಶ್ (5), ಆಲ್‌ರೌಂಡರ್ ಬಿನ್ನಿ (21), ಕೆ. ಗೌತಮ್ (6) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಕರ್ನಾಟಕದ ಆಟಗಾರರು `ಪೆವಿಲಿಯನ್ ಪರೇಡ್~ ನಡೆಸುತ್ತಿದ್ದ ಸಂಕಷ್ಟದ ಸಂದರ್ಭದಲ್ಲೂ ಮನೀಷ್ ಪಾಂಡೆ (54, 97 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಎಡಗೈ ಬ್ಯಾಟ್ಸ್‌ಮನ್ ಅಮಿತ್ ವರ್ಮಾ (52, 90ಎಸೆತ, 10 ಬೌಂಡರಿ) ಗಮನ ಸೆಳೆದರು. ಇವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಕ್ರೀಸ್‌ಗೆ ಅಂಟಿಕೊಂಡು ನಿಂತು 93 ರನ್ ಕಲೆ ಹಾಕಿದರು.

ಆಫ್‌ಸೈಡ್‌ನಲ್ಲಿ ಮೂರು ಬೌಂಡರಿ ಹಾಗೂ ವೈಡ್ ಲಾಂಗ್‌ಆನ್‌ನಲ್ಲಿ ಒಂದು ಆಕರ್ಷಕ ಸಿಕ್ಸರ್ ಸಿಡಿಸಿದ ಪಾಂಡೆ ಕರ್ನಾಟಕ ತಂಡದಲ್ಲಿ ಭರವಸೆಯ ಆಶಾಕಿರಣ ಮೂಡಿಸಿದರು. ಇದಕ್ಕೆ ವರ್ಮಾ ಕೂಡಾ ನೆರವಾದರು ಆದರೆ, 35ನೇ ಓವರ್‌ನಲ್ಲಿ ವೇಗಿ ಅಂಕಿತ್‌ಸಿಂಗ್ ರಜಪೂತ್ ಎಸೆತದಲ್ಲಿ ಪಾಂಡೆ ಬ್ಯಾಟಿನ ಅಂಚಿಗೆ ಸವರಿದ ಚೆಂಡು ವಿಕೆಟ್‌ಕೀಪರ್ ಅಮೀರ್ ಖಾನ್ ಕೈಗಸುವಿನಲ್ಲಿ ಭದ್ರವಾಗಿತ್ತು. ಬಲಗೈ ಬ್ಯಾಟ್ಸ್‌ಮನ್ ಪಾಂಡೆ ಔಟಾದ ಮೂರು ಓವರ್‌ಗಳ ಅಂತರದಲ್ಲಿ ವರ್ಮಾ ಕೂಡಾ ವಿಕೆಟ್ ಒಪ್ಪಿಸಿದರು.

ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಪಿಯೂಷ್ ಚಾವ್ಲಾ ಅವರ ಸ್ಪಿನ್ `ಮೋಡಿ~ ವರ್ಮಾ ಅವರ ವಿಕೆಟ್ ಪಡೆಯಿತು. ಬ್ಯಾಟಿನ ತುದಿಗೆ ಬಡಿದ ಚೆಂಡು ವಿಕೆಟ್‌ಗೂ ತಗುಲಿತು. ಇದನ್ನು ನಿರೀಕ್ಷೆಯೇ ಮಾಡಿರದ ವರ್ಮಾ ಕೆಲಹೊತ್ತು ಕಕ್ಕಾಬಿಕ್ಕಿಯಾಗಿ ಕ್ರೀಸ್‌ನಲ್ಲಿಯೇ ನಿಂತುಬಿಟ್ಟರು. ನಂತರ ಅಂಪೈರ್ ತೀರ್ಪು ನೋಡಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ನಂತರ ಬಂದ ಬ್ಯಾಟ್ಸ್‌ಮನ್‌ಗಳು ತಾಳ್ಮೆಯಿಂದ ಕ್ರೀಸ್‌ನಲ್ಲಿ ನಿಲ್ಲುವ ಕೆಲಸ ಮಾಡಲಿಲ್ಲ. ಕೊನೆಯ 60 ರನ್ ಗಳಿಸುವ ಅಂತರದಲ್ಲಿ ಆರು ಮಂದಿ ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದರು. ಸಿ.ಎಂ. ಗೌತಮ್ (ಔಟಾಗದೆ 24, 41ಎಸೆತ, 3 ಬೌಂಡರಿ) ನಿಧಾನವಾಗಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ, ಇನ್ನೊಂದು ಬದಿಯಿದ್ದ ಬ್ಯಾಟ್ಸ್‌ಮನ್‌ಗಳು ನೆರವಾಗಲಿಲ್ಲ.

14 ವಿಕೆಟ್: ಹಸಿರಿನಿಂದ ಕಂಗೊಳಿಸುತ್ತಿರುವ ವಿಕ್ಟೋರಿಯ ಕ್ರೀಡಾಂಗಣದ ಪಿಚ್ ಎರಡೂ ದಿನವೂ ವೇಗದ ಬೌಲರ್‌ಗಳಿಗೆ ನೆರವು ನೀಡಿತು. ಭಾನುವಾರ ಪತನವಾದ ಒಟ್ಟು 14 ವಿಕೆಟ್‌ಗಳಲ್ಲಿ ಹತ್ತು ವಿಕೆಟ್‌ಗಳನ್ನು ವೇಗದ ಬೌಲರ್‌ಗಳೇ ಪಡೆದದ್ದು ಇದಕ್ಕೆ ಸಾಕ್ಷಿ. ಮೊದಲ ದಿನ ಕರ್ನಾಟಕದ ವೇಗಿಗಳು ಒಟ್ಟು ಏಳು ವಿಕೆಟ್ ಕೆಡವಿದ್ದರು. ಎರಡೂ ದಿನದ ಆಟಸೇರಿ ಉಭಯ ತಂಡಗಳ ವೇಗಿಗಳಿಗೆ ದಕ್ಕಿದ್ದು ಒಟ್ಟು 17 ವಿಕೆಟ್.

ವೇಗಿಗಳಾದ ಭುವನೇಶ್ವರ್ ಕುಮಾರ್ (36ಕ್ಕೆ5), ಅಂಕಿತ್‌ಸಿಂಗ್ ರಜಪೂತ್ (49ಕ್ಕೆ1), ಇಮ್ತಿಯಾಜ್ ಅಹಮದ್ (53ಕ್ಕೆ3) ಭಾನುವಾರ ಕರ್ನಾಟಕದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಿದರು. ರಜೆಯ ದಿನವಾದ ಕಾರಣ ತಮ್ಮೂರ ಹುಡುಗರ ಆಟವನ್ನು ನೋಡಲು ಬಂದಿದ್ದ ಕ್ರೀಡಾಪ್ರೇಮಿಗಳು ಈ `ವೇಗಿ~ಗಳ ಅಬ್ಬರಕ್ಕೆ ಚಪ್ಪಾಳೆಯ ಶಹಬ್ಬಾಸ್‌ಗಿರಿ ನೀಡಿದರು.

ಭುವನೇಶ್ವರ್ ಮೊದಲ ಸ್ಪೆಲ್‌ನಲ್ಲಿ ಒಂಬತ್ತು ಓವರ್ ಬೌಲಿಂಗ್ ಮಾಡಿ ಪವನ್ ಮತ್ತು ಗಣೇಶ್ ಸತೀಶ್ ವಿಕೆಟ್ ಉರುಳಿಸಿದರು. ಇವರ ಅತ್ಯುತ್ತಮ `ಲೇನ್ ಹಾಗೂ ಲೆಂಗ್ತ್~ ದಾಳಿಯ ನೆರವಿನಿಂದ ಉತ್ತರಪ್ರದೇಶ ಭೋಜನ ವಿರಾಮದ ವೇಳೆಗೆ ಒಟ್ಟು ಮೂರು ವಿಕೆಟ್ ಪಡೆದಿತ್ತು. ಬಲಗೈ ವೇಗಿ ಇಮ್ತಿಯಾಜ್ ಅವರು ಉತ್ತಪ್ಪ ಅವರನ್ನು ಎಲ್‌ಬಿಡಬ್ಲ್ಯು `ಖೆಡ್ಡಾ~ಕ್ಕೆ ಕೆಡವಿ ತಂಡದ ಸಂಭ್ರಮಕ್ಕೆ ಇನ್ನಷ್ಟು ರಂಗು ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT