ADVERTISEMENT

ರಣಜಿ: ಪವನ್‌ಗೆ ಕೊಕ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:40 IST
Last Updated 3 ಡಿಸೆಂಬರ್ 2012, 19:40 IST

ಬೆಂಗಳೂರು: ಕಳಪೆ ಪ್ರದರ್ಶನ ನೀಡುತ್ತಿರುವ ಆರಂಭಿಕ ಬ್ಯಾಟ್ಸ್‌ಮನ್ ಕೆ.ಬಿ. ಪವನ್ ಅವರನ್ನು ದೆಹಲಿ ವಿರುದ್ಧದ ಮುಂದಿನ ರಣಜಿ ಪಂದ್ಯಕ್ಕೆ ಆಯ್ಕೆ ಸಮಿತಿ ಪರಿಗಣಿಸಿಲ್ಲ. ಬದಲಾಗಿ ಯುವಆಟಗಾರ ಕುನಾಲ್ ಕಪೂರ್‌ಗೆ ಅವಕಾಶ ನೀಡಿದೆ.

ಡಿಸೆಂಬರ್ 8ರಿಂದ 11ರ ವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ದೆಹಲಿ ನಡುವೆ ಪಂದ್ಯ ನಡೆಯಲಿದೆ. ಜೆ. ಅಭಿರಾಮ್ ನೇತೃತ್ವದ ಆಯ್ಕೆ ಸಮಿತಿ ಸೋಮವಾರ ಕರ್ನಾಟಕ ತಂಡವನ್ನು ಪ್ರಕಟಿಸಿತು.ಈ ಸಲದ ರಣಜಿ ಋತುವಿನಲ್ಲಿ ಒಂದೂ ಗೆಲುವು ಪಡೆಯದೆ ಪರದಾಡುತ್ತಿರುವ ವಿನಯ್ ಪಡೆ ಉದ್ಯಾನನಗರಿಯಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಒಡಿಶಾ ವಿರುದ್ಧ ಸೋಲು ಕಂಡಿತ್ತು. ಗಾಯದ ಸಮಸ್ಯೆಯಿಂದ ಬಳಲಿದ್ದ ವೇಗಿ ಅಭಿಮನ್ಯು ಮಿಥುನ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಮಿಥುನ್ ಉತ್ತರ ಪ್ರದೇಶ ಹಾಗೂ ಒಡಿಶಾ ವಿರುದ್ಧದ ಪಂದ್ಯಗಳಲ್ಲಿ  ಆಡಿರಲಿಲ್ಲ.

ಬಲಗೈ ಬ್ಯಾಟ್ಸ್‌ಮನ್ ಪವನ್ ಅವರನ್ನು ಕೈಬಿಟ್ಟಿರುವ ಕಾರಣ ಈ ಆಟಗಾರ 25 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದಲ್ಲಿ ಆಡಲಿದ್ದಾರೆ. ಈ ಸಲದ ರಣಜಿ ಋತುವಿನಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಪವನ್ ಏಳು ಇನಿಂಗ್ಸ್‌ಗಳಿಂದ 212 ರನ್ ಕಲೆ ಹಾಕಿದ್ದಾರೆ. ಒಡಿಶಾ ಎದುರು ಎರಡೂ ಇನಿಂಗ್ಸ್ ಸೇರಿ ಕೇವಲ 37 ರನ್ ಗಳಿಸಿದ್ದರು. ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದ ವೇಗಿ ರೋನಿತ್ ಮೋರೆ ಸಿ.ಕೆ. ನಾಯ್ಡು ಟ್ರೋಫಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಡಿದ್ದರು.

ADVERTISEMENT

ಮೊದಲ ಗೆಲುವಿನ ಕನಸು ನನಸು ಮಾಡಿಕೊಳ್ಳಲು ಯತ್ನಿಸುತ್ತಿರುವ ಕರ್ನಾಟಕ ತಂಡದ ಆಟಗಾರರು ಸೋಮವಾರ `ಬಿ' ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.

ತಂಡ ಇಂತಿದೆ: ಆರ್. ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ (ಉಪನಾಯಕ), ಕೆ.ಎಲ್. ರಾಹುಲ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಸಿ.ಎಂ. ಗೌತಮ್, ಕುನಾಲ್ ಕಪೂರ್, ಅಭಿಮನ್ಯು ಮಿಥುನ್, ಎಚ್.ಎಸ್. ಶರತ್, ಕೆ.ಪಿ. ಅಪ್ಪಣ್ಣ, ಅಮಿತ್ ವರ್ಮಾ, ಎಸ್.ಎಲ್.ಅಕ್ಷಯ್ ಮತ್ತು ಎಸ್.ಕೆ. ಮೊಯಿನುದ್ದೀನ್.

ಬ್ಯಾಟಿಂಗ್ ಕೋಚ್: ಜೆ. ಅರುಣ್ ಕುಮಾರ್, ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್, ಫಿಸಿಯೊ: ಶ್ರವಣ್, ಟ್ರೈನರ್: ವಿವೇಕ್ ರಾಮಕೃಷ್ಣ,    ವಿಡಿಯೊ   ಅನಲಿಸ್ಟ್: ಸಂತೋಷ್, ಮ್ಯಾನೇಜರ್: ಜೆ. ಅಭಿರಾಮ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.