ADVERTISEMENT

ರಣಜಿ: ಬೆಂಗಳೂರಿನಲ್ಲಿ ಕೇರಳ ತಂಡದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

ಬೆಂಗಳೂರು: ಕೇರಳದ ತಂಡ ಅಕ್ಟೋಬರ್ 27ರಿಂದ ಆರಂಭಗೊಳ್ಳಲಿರುವ ರಣಜಿ ಪಂದ್ಯಗಳಿಗಾಗಿ ಈಗಿನಿಂದಲೇ ಅಭ್ಯಾಸ ಶುರುಮಾಡಿದೆ. ನಗರದ ಹೊರವಲಯದಲ್ಲಿರುವ ಎಸ್‌ಜಿಕೆ ಅಂತರರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಂಭಾವ್ಯ ಆಟಗಾರರು ಸೇರಿದಂತೆ ಸುಮಾರು 25 ಆಟಗಾರರು ಕಳೆದ ಎರಡು ವಾರಗಳಿಂದ ಅಭ್ಯಾಸ ನಡೆಸುತ್ತಿದ್ದಾರೆ.

ಸದ್ಯಕ್ಕೆ ಶಫಿ ದಾರಾ ಷಾ ಟ್ರೋಫಿಯ ಮೇಲೂ ಚಿತ್ತ ನೆಟ್ಟಿರುವ ಕೇರಳ ತಂಡಕ್ಕೆ ಮಾಜಿ ಕ್ರಿಕಿಟಿಗ ಕರ್ನಾಟಕದ ಸುಜಿತ್ ಸೋಮಸುಂದರ್ ಕೋಚ್ ಆಗಿ ಮಾರ್ಗದರ್ಶನ ನೀಡುತ್ತಿದ್ದಾರೆ. `ಕೇರಳದಲ್ಲಿ ಸದ್ಯ ತುಂಬಾ ಮಳೆ. ಅಭ್ಯಾಸಕ್ಕೆ ತೊಂದರೆಯಾಗುತ್ತದೆ. ಆದರೆ ಬೆಂಗಳೂರಿನ ವಾತಾವರಣ ಚೆನ್ನಾಗಿದೆ. ಹೀಗಾಗಿ ನಮ್ಮ ತಂಡ ಇಲ್ಲಿ ಅಭ್ಯಾಸ ನಡೆಸುತ್ತಿದೆ' ಎಂದೂ ಕೋಚ್ ಸುಜಿತ್ ನುಡಿದರು.

`ಐಪಿಎಲ್‌ನಲ್ಲಿ ಕೊಚ್ಚಿ ಟಸ್ಕರ್ಸ್ ಹಾಗೂ ಪುಣೆ ವಾರಿಯರ್ಸ್ ಪರ ಆಡಿದ್ದೆ. ಅದಕ್ಕೂ ಮುನ್ನ ಇಲ್ಲಿಯೇ ನಡೆಸಿದ ಅಭ್ಯಾಸದಿಂದ ಐಪಿಎಲ್ ಪಂದ್ಯಗಳಲ್ಲಿ ನೆರವಾಗಿತ್ತು' ಎಂದು ಶಫಿ ದಾರಾಷಾ ಟ್ರೋಫಿ ಟೂರ್ನಿಯ ಕೇರಳ ತಂಡದ ನಾಯಕ ರೈಫಿ  ಹೇಳಿದರು. `ಕೇರಳದ ಸಂದೀಪ್ ವಾರಿಯರ್, ಸಂಜು ಸ್ಯಾಮ್ಸನ್, ಸಚಿನ್ ಬೇಬಿ, ಪ್ರಶಾಂತ್ ಹಾಗೂ ಪರಮೇಶ್ವರ್ ಅವರೂ ಅಭ್ಯಾಸ ನಡೆಸುತ್ತಿದ್ದಾರೆ' ಎಂದೂ ಅವರು  ತಿಳಿಸಿದರು.

`ಉದಯೋನ್ಮುಖ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಐದೂವರೆ ಎಕರೆ ಜಾಗದಲ್ಲಿ ಎಸ್‌ಜಿಕೆ ಅಂತರರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ.  ಕ್ರಿಕೆಟ್ ಆಟಗಾರರಿಗೆ ಅಗತ್ಯ ಸೌಲಭ್ಯಗಳೆಲ್ಲವೂ ಇಲ್ಲಿದೆ' ಎಂದು ಎಸ್‌ಜಿಕೆ ಕ್ರಿಕೆಟ್ ಅಕಾಡೆಮಿ ಬಗ್ಗೆ ಅದರ ಸಂಸ್ಥಾಪಕ ಕೆ. ಚಂದ್ರಶೇಖರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.