ADVERTISEMENT

ರಾಜನಗರದ ಅಂಗಳದಲ್ಲಿ ಅಗ್ನಿಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST
ಹರಿಯಾಣ ವಿರುದ್ಧದ ಪಂದ್ಯಕ್ಕಾಗಿ ಕರ್ನಾಟಕ ತಂಡದ ರಾಬಿನ್ ಉತ್ತಪ್ಪ ಶನಿವಾರ ಬ್ಯಾಟಿಂಗ್ ತಾಲೀಮು ಕೈಗೊಂಡರು	 -ಪ್ರಜಾವಾಣಿ ಚಿತ್ರ: ಎಂ.ಆರ್. ಮಂಜುನಾಥ್
ಹರಿಯಾಣ ವಿರುದ್ಧದ ಪಂದ್ಯಕ್ಕಾಗಿ ಕರ್ನಾಟಕ ತಂಡದ ರಾಬಿನ್ ಉತ್ತಪ್ಪ ಶನಿವಾರ ಬ್ಯಾಟಿಂಗ್ ತಾಲೀಮು ಕೈಗೊಂಡರು -ಪ್ರಜಾವಾಣಿ ಚಿತ್ರ: ಎಂ.ಆರ್. ಮಂಜುನಾಥ್   

ಹುಬ್ಬಳ್ಳಿ: ನೃಪತುಂಗ ಬೆಟ್ಟದ ಮಡಿಲಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ರಾಜನಗರದ ಕ್ರಿಕೆಟ್ ಅಂಗಳ  ಸ್ಟುವರ್ಟ್ ಬಿನ್ನಿ ನಾಯಕತ್ವದ ಕರ್ನಾಟಕ ತಂಡಕ್ಕೆ ಮಾತ್ರ `ಅಗ್ನಿಪರೀಕ್ಷೆ'ಯ ತಾಣದಂತೆ ಗೋಚರಿಸುತ್ತಿದೆ!

ಡಿಸೆಂಬರ್ 22 ರಿಂದ 25ರವರೆಗೆ ಈ ಹೊಚ್ಚ ಹೊಸ ಕ್ರೀಡಾಂಗಣದಲ್ಲಿ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೆ ಬಿ ಗುಂಪಿನಿಂದ ಪ್ರವೇಶ ಪಡೆಯಲು ಈ ಪಂದ್ಯದಲ್ಲಿ ಹರಿಯಾಣ ತಂಡವನ್ನು ಸೋಲಿಸಲೇಬೇಕಾದ ಒತ್ತಡದಲ್ಲಿ ಕರ್ನಾಟಕ ತಂಡವಿದೆ.

ಇಲ್ಲಿ ಆರು ಪಾಯಿಂಟ್ ಜೇಬಿಗಿಳಿಸಿ `ರಾಜ'ನಂತೆ ಮೆರೆದರೆ ಮಾತ್ರ ಕ್ವಾರ್ಟರ್‌ಫೈನಲ್ ಕನಸು ಜೀವಂತವಾಗುಳಿಯುತ್ತದೆ. ಇಲ್ಲದಿದ್ದರೆ ಲೀಗ್ ಹಂತದಲ್ಲಿಯೇ ಹೋರಾಟ ಅಂತ್ಯವಾಗುತ್ತದೆ. ಆದರೆ ಗೆಲುವಿನ ಹಾದಿ ಖಂಡಿತವಾಗಿಯೂ ಸುಗಮವಾಗಿಲ್ಲ. ಹೋದ ವರ್ಷ ಬೆಂಗಳೂರಿನಲ್ಲಿ ನಡೆದ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ ಇದೇ ಹರಿಯಾಣ ತಂಡ ಸೋಲಿನ ರುಚಿ ತೋರಿಸಿತ್ತು. ಕಳೆದ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಉತ್ತರ ಪ್ರದೇಶದ ವಿರುದ್ಧವೇ ಇನಿಂಗ್ಸ್ ಮುನ್ನಡೆ ಪಡೆದುಕೊಂಡು ಹುಬ್ಬಳ್ಳಿಗೆ ಬಂದಿದೆ. ಆದ್ದರಿಂದ ಅಮಿತ್ ಮಿಶ್ರಾ ನೇತೃತ್ವದ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. 

ಅನುಭವಿ ಬೌಲರ್ ಆರ್. ವಿನಯಕುಮಾರ್ ಮತ್ತು ಮೈಸೂರಿನಲ್ಲಿ ನಾಲ್ಕು ವಿಕೆಟ್ ಗಳಿಸಿದ್ದ ಅಭಿಮನ್ಯು ಮಿಥುನ್ ಅವರ ಸೇವೆಯೂ ತಂಡಕ್ಕೆ ಲಭ್ಯವಿಲ್ಲ. ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಕರ್ನಾಟಕ (14 ಅಂಕ), ಅಗ್ರ ಮೂರು ತಂಡಗಳಲ್ಲಿ ಸ್ಥಾನ ಪಡೆದು ಕ್ವಾರ್ಟರ್‌ಫೈನಲ್‌ಗೆ ಸಾಗಬೇಕಾದರೆ, ಎಂಟನೇ ಸ್ಥಾನದಲ್ಲಿರುವ ಹರಿಯಾಣ (10) ತಂಡವನ್ನು ಮಣಿಸಲೇಬೇಕಾದ ಒತ್ತಡದಲ್ಲಿ ತಂಡವಿದೆ. ಇದರ ನಂತರ ಪುಣೆಯಲ್ಲಿ ಮಹಾರಾಷ್ಟ್ರದ ವಿರುದ್ಧವೂ ಜಯಿಸಬೇಕು.

ಮೂರನೇ ಸ್ಥಾನದಲ್ಲಿರುವ ದೆಹಲಿ ತಂಡವು ಈಗಾಗಲೇ ಏಳು ಪಂದ್ಯಗಳಿಂದ 17 ಪಾಯಿಂಟ್ ಗಳಿಸಿದ್ದು, ಬಾಕಿಯಿರುವ ಇನ್ನೊಂದು ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯೊಂದಿಗೆ ಗೆದ್ದು, 6 ಅಂಕ ಗಳಿಸಿದರೂ 23ಕ್ಕೆ ಏರುತ್ತದೆ. ಕರ್ನಾಟಕ ಎರಡೂ ಪಂದ್ಯಗಳ ಗೆಲುವಿನಿಂದ ಒಟ್ಟು ಹತ್ತು ಅಂಕಗಳನ್ನಾದರೂ ಗಳಿಸಿದರೆ, 24ಕ್ಕೆ ಏರಿ ಮೂರನೇ ಸ್ಥಾನ ಪಡೆಯಬಹುದು. ಕೊನೆಪಕ್ಷ ಒಂದು ಪಂದ್ಯದಲ್ಲಿ ಆರು ಅಂಕ ಮತ್ತು ಇನ್ನೊಂದರಲ್ಲಿ ಇನಿಂಗ್ಸ್ ಮುನ್ನಡೆಯೊಂದಿಗೆ ಮೂರು ಅಂಕ ಗಳಿಸಬೇಕು. ಆದರೆ ಉತ್ತಮ ರನ್‌ರೇಟ್ ಇರಬೇಕು. ಆಗಲೂ ನಾಕೌಟ್ ಹಂತಕ್ಕೆ ಹೋಗಲು ಅವಕಾಶವಿದೆ.

`ಪುಣೆಯಲ್ಲಿ ಪಿಚ್ ಯಾವ ರೀತಿ ಇರುತ್ತದೆ ಎಂದು ಗೊತ್ತಿಲ್ಲ. ಇದು ನಮ್ಮ ತವರಿನ ನೆಲ. ಇಲ್ಲಿಯ ಜನರ ಬೆಂಬಲವೂ ಸಿಗುವುದರಿಂದ ಇಲ್ಲಿಯೇ ಬೋನಸ್ ಅಂಕದೊಂದಿಗೆ ಗೆಲ್ಲುವ ಗುರಿ ನಮ್ಮದು. ಇದೊಂದು ರೀತಿಯಲ್ಲಿ ರೀತಿಯಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ' ಎಂದು ಹೇಳುವ ಸ್ಟುವರ್ಟ್ ಬಿನ್ನಿಗೆ ತಮ್ಮ ಬ್ಯಾಟ್ಸ್‌ಮನ್‌ಗಳ ಮೇಲೆ ಅಪಾರ ನಂಬಿಕೆಯಿದೆ. ಕಳೆದ ಎರಡು ಪಂದ್ಯಗಳಲ್ಲಿ ಕರ್ನಾಟಕದ ಬ್ಯಾಟಿಂಗ್ ಶಕ್ತಿ ವಿಜೃಂಭಿಸಿದೆ.  

ಆದರೆ ಹರಿಯಾಣ ತಂಡ ಬ್ಯಾಟಿಂಗ್‌ಗಿಂತಲೂ ಬೌಲಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅವರ `ಟ್ರಂಪ್ ಕಾರ್ಡ್' ಬಲಗೈ ಮಧ್ಯಮವೇಗಿ ಮೋಹಿತ್ ಶರ್ಮಾ  ಕಳೆದ ಆರು ಪಂದ್ಯಗಳಿಂದ 34 ವಿಕೆಟ್ ಗಳಿಸಿದ್ದಾರೆ. ದೆಹಲಿ ವಿರುದ್ಧದ ಪಂದ್ಯಲ್ಲಿ ಭರ್ಜರಿ ಗೆಲುವು ಪಡೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಜೋಗಿಂದರ್ ಶರ್ಮಾ, ಸ್ಪಿನ್ನರ್ ಅಮಿತ್ ಮಿಶ್ರಾ, ಆಫ್‌ಸ್ಪಿನ್ನರ್ ಜಯಂತ್ ಯಾದವ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಈ ಋತುವಿನಲ್ಲಿ ಮೂರು ಪಂದ್ಯಗಳಲ್ಲಿ ಸೋಲಲು ಕಾರಣವಾಗಿದ್ದು ಅವರ ಬ್ಯಾಟಿಂಗ್ ವೈಫಲ್ಯ. ಬರೋಡಾ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸಿದ್ದ ರಾಹುಲ್ ದಲಾಲ್, ಮೂರು ಅರ್ಧಶತಕ ಗಳಿಸಿರುವ ಸನ್ನಿಸಿಂಗ್, ರಾಹುಲ್ ದಿವಾನ್ ಅವರನ್ನು ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಿಲ್ಲ. 

ಈ ದೌರ್ಬಲ್ಯದ ಲಾಭವನ್ನು ಕರ್ನಾಟಕದ ಅನನುಭವಿ ಬೌಲಿಂಗ್ ಪಡೆ ಯಾವ ರೀತಿ ಪಡೆಯುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ಬೌಲಿಂಗ್ ವಿಭಾಗದಲ್ಲಿ ಮಂಡ್ಯದ ಹುಡುಗ ಎಚ್.ಎಸ್. ಶರತ್ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಅವರು ಈ ಋತುವಿನಲ್ಲಿ ನಾಲ್ಕು ಪಂದ್ಯಗಳಿಂದ 15 ವಿಕೆಟ್ ಗಳಿಸಿದ್ದಾರೆ. ಓಡಿಶಾ ವಿರುದ್ಧದ ಪಂದ್ಯದಲ್ಲಿ ಆರು ವಿಕೆಟ್ ಗಳಿಸಿದ್ದ ಶಿವಮೊಗ್ಗದ ಎಸ್. ಎಲ್. ಅಕ್ಷಯ್ ಆಡುವುದು ಬಹುತೇಕ ಖಚಿತವಾಗಿದ್ದು, ಮೂರನೇ ಬೌಲರ್ ಆಗಿ ಬೆಳಗಾವಿಯ ರೋನಿತ್ ಮೋರೆ ಅಥವಾ ಹುಬ್ಬಳ್ಳಿಯಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದ ಆದಿತ್ಯ ಸಾಗರ್‌ಗೆ ಅವಕಾಶ ಸಿಗಬಹುದು. ಕುನಾಲ್ ಕಪೂರ್ ಸ್ನಾಯುನೋವಿನಿಂದ ಚೇತರಿಸಿಕೊಂಡಿದ್ದು ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಮಾಡಬಲ್ಲರು.  

ಬಿನ್ನಿ ಬಳಗ ಮತ್ತೊಮ್ಮೆ ತನ್ನ ಸಾಂಘೀಕ ಹೋರಾಟ ಪ್ರದರ್ಶಿಸಿದರೆ ಕಳೆದ ಬಾರಿಯ ಕ್ವಾರ್ಟರ್‌ಫೈನಲ್‌ನ ಸೋಲಿನ ಸೇಡನ್ನು ತೀರಿಸಿಕೊಂಡು ಈ ಬಾರಿಯ ಎಂಟರ ಘಟಕ್ಕೆ ಸಾಗುವ ಅವಕಾಶವೂ ಇಲ್ಲಿದೆ. 

ತಂಡಗಳು:
ಕರ್ನಾಟಕ: ಸ್ಟುವರ್ಟ್ ಬಿನ್ನಿ (ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಗಣೇಶ್ ಸತೀಶ್, ಸಿ.ಎಂ. ಗೌತಮ್ (ವಿಕೆಟ್‌ಕೀಪರ್), ಮನೀಶ್ ಪಾಂಡೆ, ಕುನಾಲ್ ಕಪೂರ್, ಅಮಿತ್ ವರ್ಮಾ, ಎಚ್.ಎಸ್. ಶರತ್, ಕೆ.ಪಿ. ಅಪ್ಪಣ್ಣ, ರೋನಿತ್ ಮೋರೆ ಎಸ್.ಎಲ್. ಅಕ್ಷಯ್, ಕರುಣ್ ನಾಯರ್, ಕೆ. ಗೌತಮ್, ಆದಿತ್ಯ ಸಾಗರ್. ತರಬೇತುದಾರ: ಜೆ. ಅರುಣಕುಮಾರ್.

ಹರಿಯಾಣ: ಅಮಿತ್ ಮಿಶ್ರಾ (ನಾಯಕ), ನಿತಿನ್ ಸೈನಿ (ವಿಕೆಟ್‌ಕೀಪರ್), ಸನ್ನಿಸಿಂಗ್, ಅಭಿಮನ್ಯು ಖೋಡ್, ರಾಹುಲ್ ದಲಾಲ್, ಯತಾರ್ಥ್ ತೋಮರ್, ಜೋಗಿಂದರ್ ಶರ್ಮಾ, ಜಯಂತ್ ಯಾದವ, ಆಶೀಶ್‌ಹೂಡಾ, ಮೋಹಿತ್ ಶರ್ಮಾ, ಯುಜುವೇಂದರ್ ಚಾಹಲ್ ಸಂಜಯ್ ಬದ್ವಾರ್, ಲಿಲಿತ್ ಬಟ್ಟಿ, ಸಂದೀಪ್ ಸಿಂಗ್, ಸಂದೀಪ್ ಗೋದಾರ, ಹರ್ಷಲ್ ಪಟೇಲ್ ರಾಹುಲ್ ದಿವಾನ್, ಪ್ರಿಯಾಂಕ್ ತೆಹ್ಲಾನ್.

ಅಂಪೈರ್: ಅಮರದೀಪ್ ಸತಾನಿಯ, ಕೆ. ಭರತನ್
ಪಂದ್ಯದ ರೆಫರಿ: ಸಂಜಯ್ ಪಾಟೀಲ (ಮುಂಬೈ)
ಪಂದ್ಯದ ಆರಂಭ: ಬೆಳಿಗ್ಗೆ 9.30ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.