ADVERTISEMENT

ರಾಜ್ಯದ ಪ್ರಿಯಾಂಕಾ, ಜಗದೀಶ್‌ಗೆ ಚಿನ್ನ

ಅಂತರ ವಲಯ ಜೂನಿಯರ್‌ ಅಥ್ಲೆಟಿಕ್ಸ್‌

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಕೊಚ್ಚಿ: ಕರ್ನಾಟಕದ ಎಸ್‌.ಜಿ.ಪ್ರಿಯಾಂಕಾ ಹಾಗೂ ಜಗದೀಶ್‌ ಚಂದ್ರ ಇಲ್ಲಿ ನಡೆಯುತ್ತಿರುವ 25ನೇ ರಾಷ್ಟ್ರೀಯ ಅಂತರ ವಲಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ.

ಮಹಾರಾಜ ಕಾಲೇಜ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ  18 ವರ್ಷದೊಳಗಿನವರ ಬಾಲಕಿಯರ ವಿಭಾಗದ 100 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಪ್ರಿಯಾಂಕಾ ಮೊದಲ ಸ್ಥಾನ ಪಡೆದರು.

ಅವರು ಈ ದೂರ ಕ್ರಮಿಸಲು 14.59 ಸೆ. ತೆಗೆದುಕೊಂಡರು. ಇದೇ ವಯೋಮಿತಿಯ 400 ಮೀ.ಹರ್ಡಲ್ಸ್‌ನಲ್ಲಿ ಸಿಮೊನಾ ಮಸ್ಕರೇನ್ಹಸ್‌ ಕಂಚಿನ ಪದಕ ಜಯಿಸಿದರು.

20 ವರ್ಷದೊಳಗಿನವರ ವಿಭಾಗದ 100 ಮೀ.ಹರ್ಡಲ್ಸ್‌ನಲ್ಲಿ ಮೇಘನಾ ಶೆಟ್ಟಿ (14.58 ಸೆ.) ಎರಡನೇ ಸ್ಥಾನ ಪಡೆದರು.  ಟ್ರಿಪಲ್‌ ಜಂಪ್‌ನಲ್ಲಿ ಬಿ.ವಿ.ಚಾಂದಿನಿ (10.94 ಮೀ.) ಮೂರನೇ ಸ್ಥಾನ ಗಳಿಸಿದರು.

ಬಾಲಕರ ವಿಭಾಗದ 20 ವರ್ಷದೊಳಗಿನವರ 400 ಮೀ. ಹರ್ಡಲ್ಸ್‌ನಲ್ಲಿ ಜಗದೀಶ್‌ ಮೊದಲ ಸ್ಥಾನ ಪಡೆದರು. ಅವರು ಈ ದೂರವನ್ನು 53.58 ಸೆಕೆಂಡ್‌ಗಳಲ್ಲಿ ತಲುಪಿದರು.

18 ವರ್ಷದೊಳಗಿನವರ ವಿಭಾಗದ 110 ಮೀ. ಹರ್ಡಲ್ಸ್‌ನಲ್ಲಿ ಸಂತೋಷ್‌ (14.65 ಸೆ.) ಕಂಚಿನ ಪದಕ ಗೆದ್ದರು. ಹ್ಯಾಮರ್‌ ಥ್ರೋನಲ್ಲಿ ಗವಿಸ್ವಾಮಿ ಮನೋಹರ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ತಮಿಳುನಾಡಿನ ಆರ್‌.ನವೀನ್‌ 14 ವರ್ಷದೊಳಗಿನವರ 600 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

1 ನಿಮಿಷ 23.22 ಸೆಕೆಂಡ್‌ಗಳಲ್ಲಿ ಅವರು ಈ ದೂರ ಕ್ರಮಿಸಿದರು.  ಮಹಾರಾಷ್ಟ್ರದ ಸುಮಿತ್‌ ಕುಮಾರ್‌ ಜೈಸ್ವಾಲ್‌ (400 ಮೀ. ಹರ್ಡಲ್ಸ್‌) ಮತ್ತು ಅಮೋಲ್‌ ಕೆ. ಸಿಂಗ್‌ (ಅಕ್ಟಾಥ್ಲಾನ್‌) ನೂತನ ಕೂಟ ದಾಖಲೆ ನಿರ್ಮಿಸಿದರು.

ಪದಕ ಪಟ್ಟಿಯಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಹಾಗೂ ಕೇರಳ ತಂಡಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.