ADVERTISEMENT

ರಾಬ್ರೆಡೊಗೆ ಬೆದರಿದ ಫೆಡರರ್

ಅಮೆರಿಕ ಓಪನ್ ಟೆನಿಸ್: ಕ್ವಾರ್ಟರ್ ಫೈನಲ್‌ಗೆ ನಡಾಲ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ನ್ಯೂಯಾರ್ಕ್ (ಎಎಫ್‌ಪಿ): ವಿಶ್ವದ ಮಾಜಿ ಅಗ್ರ ರ‍್ಯಾಂಕ್ ‌ನ ಆಟಗಾರ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಅಮೆರಿಕ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಸೋತು ಹೊರಬಿದ್ದರು. ಸ್ಪೇನ್‌ನ ರಫೆಲ್ ನಡಾಲ್ ಅಧಿಕಾರಯುತ ಗೆಲುವಿನ ಮೂಲಕ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.

ಲೂಯಿಸ್ ಆರ್ಮ್‌ಸ್ಟ್ರಾಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸ್ಪೇನ್‌ನ ಟಾಮಿ ರಾಬ್ರೆಡೊ 7–-6, 6–-3, 6–-4 ರಲ್ಲಿ ಫೆಡರರ್‌ಗೆ ಆಘಾತ ನೀಡಿದರು. ಈ ಹಿಂದೆ ಇವರಿಬ್ಬರು ಹತ್ತು ಸಲ ಪರಸ್ಪರ ಪೈಪೋಟಿ ನಡೆಸಿದಾಗ ಫೆಡರರ್‌ ಅವರೇ ಗೆಲುವು ಪಡೆದಿದ್ದರು. ಸ್ವಿಸ್‌ ಆಟಗಾರನ ವಿರುದ್ಧ ರಾಬ್ರೆಡೊ ತಮ್ಮ ಮೊದಲ ಗೆಲುವು ಸಾಧಿಸಿದರು.

‘ನಾನೇ ನನ್ನನ್ನು ಸೋಲಿಸಿದೆ ಎಂಬ ಭಾವನೆ ಕಾಡುತ್ತಿದೆ. ನಿಜವಾಗಿಯೂ ನಿರಾಸೆ ಉಂಟಾಗಿದೆ. ಪಂದ್ಯದಲ್ಲಿ ಮೇಲುಗೈ ಸಾಧಿಸುವ ಹಲವು ಅವಕಾಶಗಳು ಲಭಿಸಿತ್ತಾದರೂ, ಅದನ್ನು ಸದುಪಯೋಗಪಡಿಸಿಕೊಳ್ಳಲು ಆಗಲಿಲ್ಲ’ ಎಂದು ಪಂದ್ಯದ ಬಳಿಕ ಫೆಡರರ್‌ ಪ್ರತಿಕ್ರಿಯಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಫೆಡರರ್‌– ನಡಾಲ್‌ ನಡುವಿನ ಹೋರಾಟ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇದೀಗ ರಾಬ್ರೆಡೊ ಮತ್ತು ನಡಾಲ್‌ ಎಂಟರಘಟ್ಟದಲ್ಲಿ ಹೋರಾಟ ನಡೆಸುವರು.

17 ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಜಯಿಸಿರುವ ಫೆಡರರ್‌ ಸೋಲು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸ್ವಿಸ್‌ ಆಟಗಾರನ ವೃತ್ತಿ ಜೀವನದ ಅಂತ್ಯ ಸಮೀಪಿಸುತ್ತಿ­ದೆಯೇ ಎಂಬ ಚರ್ಚೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಫೆಡರರ್‌ ವಿಂಬಲ್ಡನ್‌ ಟೂರ್ನಿಯ ಎರಡನೇ ಸುತ್ತಿನಲ್ಲೇ ಮುಗ್ಗರಿಸಿದ್ದರು. 2002ರ ಬಳಿಕ ಅವರು ಪ್ರತಿ ಋತುವಿನಲ್ಲೂ ಒಂದಲ್ಲ ಒಂದು ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯ ಫೈನಲ್‌ನಲ್ಲಿ ಆಡಿದ್ದಾರೆ. ಆದರೆ ಪ್ರಸಕ್ತ ವರ್ಷ ಯಾವುದೇ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿಲ್ಲ. ಆಸ್ಟ್ರೇಲಿಯಾ ಓಪನ್‌ನ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದರೆ, ಫ್ರೆಂಚ್‌ ಓಪನ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಹೊರಬಿದ್ದಿದ್ದರು.

ಎರಡನೇ ಶ್ರೇಯಾಂಕದ ಆಟಗಾರ ನಡಾಲ್‌ ದಿನದ ಮತ್ತೊಂದು ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 6–7, 6–4, 6–3, 6–1 ರಲ್ಲಿ ಜರ್ಮನಿಯ ಫಿಲಿಪ್‌ ಕೊಲ್‌ಶ್ರೈಬರ್‌ ಅವರನ್ನು ಮಣಿಸಿದರು.

‘ಇಂತಹ ಪರಿಸ್ಥಿತಿಯಲ್ಲಿ ಆಡುವುದು ಕಷ್ಟ. ಪಂದ್ಯ ಗೆಲ್ಲಲು ಸಾಕಷ್ಟು ಬೆವರು ಸುರಿಸಬೇಕಾಯಿತು. ಕೊಲ್‌ಶ್ರೈಬರ್‌ ಪ್ರಬಲ ಎದುರಾಳಿ. ಅದೃಷ್ಟವಿದ್ದ ಕಾರಣ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ಸಾಧ್ಯವಾಯಿತು’ ಎಂದು ನಡಾಲ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದ್ದ ನಡಾಲ್‌ ಮುಂದಿನ ಮೂರೂ ಸೆಟ್‌ಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡಿದರು. ನಾಲ್ಕನೇ ಸೆಟ್‌ನಲ್ಲಿ ಅವರು ಎದುರಾಳಿಗೆ ಕೇವಲ ಒಂದು ಗೇಮ್‌ ಮಾತ್ರ ಬಿಟ್ಟುಕೊಟ್ಟರು.

ಸ್ಪೇನ್‌ನ ಡೇವಿಡ್‌ ಫೆರರ್‌ ಮತ್ತು ಫ್ರಾನ್ಸ್‌ನ ರಿಚರ್ಡ್‌ ಗ್ರ್ಯಾಸ್ಕ್ವೆಟ್‌ ಕೂಡಾ ಎಂಟರಘಟ್ಟ ಪ್ರವೇಶಿಸಿದರು. ನಾಲ್ಕನೇ ಶ್ರೇಯಾಂಕ ಹೊಂದಿರುವ ಫೆರರ್‌ 7–6, 3–6, 7–5, 7–6 ರಲ್ಲಿ 18ನೇ ಶ್ರೇಯಾಂಕದ ಆಟಗಾರ ಸರ್ಬಿಯದ ಜಾಂಕೊ ತಿಪ್ಸರೆವಿಕ್‌ ವಿರುದ್ಧ ಗೆಲುವು ಪಡೆದರು. ಗ್ಯಾಸ್ಕ್ವೆಟ್‌ 6–7, 7–6, 2–6, 7–6, 7–5 ರಲ್ಲಿ ಕೆನಡಾದ ಮಿಲೋಸ್‌ ರೋನಿಕ್‌ ಅವರನ್ನು ಸೋಲಿಸಿದರು.
ವಿನ್ಸಿ, ಪೆನೆಟಾ ಜಯಭೇರಿ: ಇಟಲಿಯ ರಾಬರ್ಟಾ ವಿನ್ಸಿ, ಫ್ಲೇವಿಯಾ ಪೆನೆಟಾ ಮತ್ತು ಸ್ಲೊವೇಕಿಯದ ಡೇನಿಯೆಲಾ ಹಂಟುಚೋವಾ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಈ ಕಾರಣ 30 ವರ್ಷ ವಯಸ್ಸು ದಾಟಿದ ಐವರು ಆಟಗಾರ್ತಿಯರು ಎಂಟರಘಟ್ಟದಲ್ಲಿ ಸ್ಥಾನ ಪಡೆದಂತಾಗಿದೆ.

10ನೇ ಶ್ರೇಯಾಂಕ ಹೊಂದಿರುವ ವಿನ್ಸಿ 6–4, 6–2 ರಲ್ಲಿ ತಮ್ಮದೇ ದೇಶದ ಕ್ಯಾಮಿಲಾ ಜಾರ್ಜಿ ಅವರನ್ನು ಮಣಿಸಿದರು. ಈ ಮೂಲಕ ಇಲ್ಲಿ ಸತತ ಎರಡನೇ ವರ್ಷ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

ವಿಶ್ವ ರ್‍ಯಾಂಕ್‌ನಲ್ಲಿ 83ನೇ ಸ್ಥಾನದಲ್ಲಿರುವ ಪೆನೆಟಾ 6–2, 7–6 ರಲ್ಲಿ ರೊಮೇನಿಯದ ಸಿಮೊನಾ ಹಲೆಪ್‌ ವಿರುದ್ಧ ಜಯ ಪಡೆದರು. ಕ್ವಾರ್ಟರ್‌ ಫೈನಲ್‌ನಲ್ಲಿ ವಿನ್ಸಿ ಹಾಗೂ ಪೆನೆಟಾ ಪರಸ್ಪರ ಪೈಪೋಟಿ ನಡೆಸುವರು.

ಹಂಟುಚೋವಾ 6–3, 5–7, 6–2 ರಲ್ಲಿ ಅಮೆರಿಕದ ಆ್ಯಲಿಸನ್‌ ರಿಸ್ಕ್‌ ಎದುರು ಪ್ರಯಾಸದ ಜಯ ದಾಖಲಿಸಿದರು. ಸ್ಲೊವೇಕಿಯದ ಆಟಗಾರ್ತಿ ಈ ಪಂದ್ಯದಲ್ಲಿ ಒಟ್ಟು 15 ಏಸ್‌ ಹಾಗೂ 46 ವಿನ್ನರ್‌ಗಳನ್ನು ಸಿಡಿಸಿದರು. ಹಂಟುಚೋವಾ ಇಲ್ಲಿ 2002 ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಇದೀಗ 11 ವರ್ಷಗಳ ಬಿಡುವಿನ ಬಳಿಕ ಮತ್ತೆ ಎಂಟರಘಟ್ಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

‘ಪಂದ್ಯದ ವೇಳೆ ಮಳೆ ಸುರಿದ ಕಾರಣ ಇಬ್ಬರಿಗೂ ಸಾಕಷ್ಟು ತೊಂದರೆ ಉಂಟಾ-­ಯಿತು. ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ಸಾಧ್ಯ­ವಾ­ದದ್ದು ಸಂತಸ ಉಂಟುಮಾಡಿದೆ’ ಎಂದು ಹಂಟುಚೋವಾ ಪ್ರತಿಕ್ರಿಯಿಸಿದ್ದಾರೆ.

ಟೆನಿಸ್: ದಿವಿಜ್– ಸುನ್ ಜೋಡಿಗೆ ಸೋಲು
ನ್ಯೂಯಾರ್ಕ್ (ಪಿಟಿಐ): ಭಾರತದ ದಿವಿಜ್ ಶರಣ್ ಮತ್ತು ಚೀನಾ ತೈಪೆಯ ಯೆನ್ ಸುನ್ ಲು ಜೋಡಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಮೂರನೇ ಸುತ್ತಿನಲ್ಲಿ ಸೋಲು ಅನುಭವಿಸಿತು.

ಸೋಮವಾರ ನಡೆದ ಪಂದ್ಯದಲ್ಲಿ ದಿವಿಜ್- ಸುನ್ 6-–7, 6-–3, 3–-6 ರಲ್ಲಿ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಮತ್ತು ಹಾಲೆಂಡ್‌ನ ಜೀನ್ ಜೂಲಿಯನ್ ರೋಜೆರ್ ಕೈಯಲ್ಲಿ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.