ADVERTISEMENT

ರಾಯಲ್ಸ್ ಎದುರು ಗೆಲುವಿನ ಕನಸಿನಲ್ಲಿ ಮುಂಬೈ ಇಂಡಿಯನ್ಸ್

​ಪ್ರಜಾವಾಣಿ ವಾರ್ತೆ
Published 19 ಮೇ 2012, 19:30 IST
Last Updated 19 ಮೇ 2012, 19:30 IST

ಜೈಪುರ (ಪಿಟಿಐ): `ಪ್ಲೇ ಆಫ್~ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಭಾನುವಾರ ರಾಜಸ್ತಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಈ ತಂಡಗಳ ನಡುವಿನ ಸೆಣಸಾಟದೊಂದಿಗೆ ಪ್ರಸಕ್ತ ಋತುವಿನ ಐಪಿಎಲ್‌ನ ಲೀಗ್ ಹಂತಕ್ಕೆ ತೆರೆಬೀಳಲಿದ್ದು,  `ಪ್ಲೇ ಆಫ್~  ಹಂತದ ಹೋರಾಟಕ್ಕೆ ವೇದಿಕೆ ಸಿದ್ಧವಾಗಲಿದೆ.

ಹರಭಜನ್ ಸಿಂಗ್ ನೇತೃತ್ವದ ತಂಡ 15 ಪಂದ್ಯಗಳಿಂದ 18 ಪಾಯಿಂಟ್ ಹೊಂದಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಸೋತರೂ ಪಾಯಿಂಟ್ ಪಟ್ಟಿಯಲ್ಲಿ ಮೊದಲ ನಾಲ್ಕರಲ್ಲಿ ಸ್ಥಾನ ಖಚಿತ. ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಪಡೆದ ಕಾರಣ ಮುಂಬೈ ಇಂಡಿಯನ್ಸ್ ತಂಡದ `ಪ್ಲೇ ಆಫ್~ ಹಾದಿ ಸುಗಮವಾಯಿತು.

ಮತ್ತೊಂದೆಡೆ ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ಸ್ ಮುಂದಿನ ಹಂತ ಪ್ರವೇಶಿಸುವ ಅವಕಾಶ ಕಳೆದುೊಂಡಿದೆ. ಆದ್ದರಿಂದ ಅಂತಿಮ ಪಂದ್ಯದಲ್ಲಿ ಯಶಸ್ಸು ಸಾಧಿಸಿ ಪ್ರಸಕ್ತ ಋತುವಿನ ಟೂರ್ನಿಗೆ ಗೆಲುವಿನೊಂದಿಗೆ ತೆರೆ ಎಳೆಯುವ ಗುರಿಯನ್ನು ಹೊಂದಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ಸೋಲು ಅನುಭವಿಸಿದ್ದರಿಂದ ರಾಯಲ್ಸ್ `ಪ್ಲೇ ಆಫ್~ ಕನಸು ಭಗ್ನಗೊಂಡಿತ್ತು.

ಹರಭಜನ್ ಬಳಗ ಪೂರ್ಣ ಶಕ್ತಿಯೊಂದಿಗೆ ಹೋರಾಡುವುದು ಖಚಿತ. ಸಚಿನ್ ತೆಂಡೂಲ್ಕರ್, ಹರ್ಷಲ್ ಗಿಬ್ಸ್, ರೋಹಿತ್ ಶರ್ಮ ಮತ್ತು ಅಂಬಟಿ ರಾಯುಡು ಈ ತಂಡದ ಬ್ಯಾಟಿಂಗ್‌ನ ಶಕ್ತಿ ಎನಿಸಿದ್ದಾರೆ. ಟೂರ್ನಿಯಲ್ಲಿ ಈಗಾಗಲೇ ಒಂದು ಶತಕ ಗಳಿಸಿರುವ ರೋಹಿತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಆದರೆ ಸಚಿನ್ ಕಳೆದ ಕೆಲ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಅವರು ಕೈಬೆರಳಿನ ಕಾರಣ ಕೆಲವೊಂದು ಪಂದ್ಯಗಳನ್ನು ಕಳೆದುಕೊಂಡಿದ್ದರು.

ತಂಡಕ್ಕೆ ಮರಳಿದ ಬಳಿಕ ಅವರಿಂದ ಭರ್ಜರಿ ಆಟ ಕಂಡುಬಂದಿಲ್ಲ. ಬೌಲಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ಲಸಿತ್ ಮಾಲಿಂಗ ಅವರನ್ನೇ ನೆಚ್ಚಿಕೊಂಡಿದೆ. ಶ್ರೀಲಂಕಾದ ಈ ವೇಗಿ ಇದುವರೆಗೆ ಒಟ್ಟು 21 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ನೆರವು ನೀಡಲಿರುವ ಕಾರಣ ದೊಡ್ಡ ಮೊತ್ತದ ಹೋರಾಟವನ್ನು ನಿರೀಕ್ಷಿಸಬಹುದು.

ದ್ರಾವಿಡ್ ಬಳಗ ಕಳೆದ ಪಂದ್ಯದ ನಿರಾಸೆಯನ್ನು ಮರೆತು ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿದೆ. ಈ ತಂಡ ಬ್ಯಾಟಿಂಗ್‌ನಲ್ಲಿ ಅಜಿಂಕ್ಯ ರಹಾನೆ ಹಾಗೂ ಶೇನ್ ವ್ಯಾಟ್ಸನ್ ಅವರನ್ನು ನೆಚ್ಚಿಕೊಂಡಿದೆ. ಆದರೆ, ಈ ಪಂದ್ಯದಲ್ಲಿ ಗೆಲುವ ಪಡೆದು ಪಾಯಿಂಟ್ಸ್ ಹೆಚ್ಚಿಸಿಕೊಳ್ಳಲು ಮುಂಬೈ ಕಾತರದಲ್ಲಿದೆ.
ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.