ADVERTISEMENT

ರಾಷ್ಟ್ರೀಯ ಅಥ್ಲೆಟಿಕ್ಸ್: ರಾಜ್ಯ ತಂಡಕ್ಕೆ ಪ್ರವೇಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಂಚಿಯಲ್ಲಿ ಆಗಸ್ಟ್ ಏಳರಿಂದ ನಡೆಯಲಿರುವ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಕರ್ನಾಟಕ ತಂಡಕ್ಕೆ ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಅವಕಾಶ ನಿರಾಕರಿಸಿದೆ.

ಕರ್ನಾಟಕ ಅಥ್ಲೆಟಿಕ್ ಸಂಸ್ಥೆಗೆ ಸಂಬಂಧಿಸಿದಂತೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೇ ಭಾನುವಾರ ಆಯ್ಕೆ ಟ್ರಯಲ್ಸ್ ನಡೆಸಿ, ತಂಡವನ್ನು ಆಯ್ಕೆ ಮಾಡಿತ್ತು. ಆಯ್ಕೆಯಾದ ಅಥ್ಲೀಟ್‌ಗಳ ಹೆಸರು ಇರುವ ಪಟ್ಟಿಯನ್ನು ಭಾನುವಾರ ರಾತ್ರಿಯೇ ಎಎಫ್‌ಐಗೆ ತಲುಪಿಸಿತ್ತು.

ಇದಕ್ಕೆ ಸಂಬಂಧಿಸಿದಂತೆ ಎಎಫ್‌ಐ ಹಿರಿಯ ಪದಾಧಿಕಾರಿಗಳು ಸೋಮವಾರ ಸಭೆ ನಡೆಸಿ ಚರ್ಚಿಸಿದ್ದು, ಕೊನೆಗೆ ರಾಜ್ಯದ `ಪ್ರವೇಶ'ವನ್ನು ನಿರಾಕರಿಸಿದೆ.

`ಈಗಾಗಲೇ `ಪ್ರವೇಶ ಪತ್ರ'ಗಳನ್ನು ತಲುಪಿಸಲು ಹತ್ತು ದಿನಗಳಷ್ಟು ವಿಳಂಬವಾಗಿದೆ ಮತ್ತು ಈ `ಪ್ರವೇಶ'ವು ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಮೂಲಕ ಬರದೆ, ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯ ಮೂಲಕ ತಲುಪಿಸಲಾಗಿದೆ. ಇದು ಫೆಡರೇಷನ್‌ನ ನಿಯಮಗಳಿಗೆ ವಿರುದ್ಧವಾಗಿದೆ' ಎಂದು ಫೆಡರೇಷನ್‌ನ ಉನ್ನತ ಮೂಲಗಳು ತಿಳಿಸಿವೆ.

ನಿರಾಸೆ: ಅಖಿಲ ಭಾರತ ಅಂತರ ವಾರ್ಸಿಟಿ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಸಾಧನೆ ತೋರಿದ್ದು, ಮಾಸ್ಕೊದಲ್ಲಿ ನಡೆದಿದ್ದ ವಿಶ್ವ ಅಂತರ ವಾರ್ಸಿಟಿ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಅಥ್ಲೀಟ್ ಚೇತನ್ ಅವರನ್ನು ಈ ಕುರಿತು `ಪ್ರಜಾವಾಣಿ' ಮಾತನಾಡಿಸಿದಾಗ `ಅತೀವ ನಿರಾಸೆಯಾಗಿದೆ' ಎಂದರು.

ಆಯ್ಕೆ ಟ್ರಯಲ್ಸ್‌ನಲ್ಲಿ ಅತ್ಯುತ್ತಮ ಸಾಧನೆ ತೋರಿದ್ದ ಇವರು ರಾಂಚಿಯಲ್ಲಿ ನಡೆಯಲಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಬಂಗಾರದ ಸಾಧನೆ ತೋರುವ ಹುಮ್ಮಸ್ಸಿನಲ್ಲಿದ್ದರು.

`ಬೇರೆ ರಾಜ್ಯಗಳಿಂದಾದರೂ ಅವಕಾಶಕ್ಕೆ ಯತ್ನಿಸೋಣವೆಂದರೆ ಈಗಾಗಲೇ ವಿಳಂಬವಾಗಿಬಿಟ್ಟಿದೆ. ನನ್ನ ಕನಸು ಸಂಪೂರ್ಣ ಭಗ್ನಗೊಂಡಿದೆ' ಎಂದು ಅವರು ನೊಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.