ADVERTISEMENT

ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕಕ್ಕೆ 11ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 17:55 IST
Last Updated 26 ಫೆಬ್ರುವರಿ 2011, 17:55 IST

ರಾಂಚಿ (ಐಎಎನ್‌ಎಸ್): ಇಲ್ಲಿ ಶನಿವಾರ ಮುಕ್ತಾಯವಾದ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಒಟ್ಟು 55 ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.

16 ಚಿನ್ನ, 19 ಬೆಳ್ಳಿ ಹಾಗೂ 20 ಕಂಚಿನ ಪದಕವನ್ನು ಜಯಿಸಿರುವ ಕರ್ನಾಟಕ ಪದಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಆದರೆ ಫೆ. 12ರಿಂದ 26ರ ವರೆಗೆ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಆರು ರಾಜ್ಯಗಳು ಚಿನ್ನದ ಪದಕದ ಖಾತೆಯನ್ನು ತೆಗೆಯುವಲ್ಲಿ ವಿಫಲವಾಗಿವೆ. ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಅರುಣಾಚಲ ಪ್ರದೇಶ, ಮಿಜೋರಾಮ್, ನಾಗಲ್ಯಾಂಡ್ ಮತ್ತು ಚಂಡೀಗಡ ರಾಜ್ಯಗಳು ಈ ಸಲದ ಕ್ರೀಡಾಕೂಟದ ಒಂದೂ ಚಿನ್ನದ ಪದಕವನ್ನು ಗಳಿಸಿಲ್ಲ. ಗುಜರಾತ್ ಮೂರು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಹಾಗೂ ಅರುಣಾಚಲ ಪ್ರದೇಶ ಒಂದು ಬೆಳ್ಳಿ ಹಾಗೂ 10 ಕಂಚಿನ ಪದಕ ಗಳಿಸಿದೆ.

20 ಚಿನ್ನದ ಪದಕಗಳು ಸೇರಿದಂತೆ ಒಟ್ಟು 70 ಪದಕಗಳನ್ನು ಗೆದ್ದಿರುವ ಉತ್ತರ ಪ್ರದೇಶ ಪದಕ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಆತಿಥೇಯ ಜಾರ್ಖಂಡ್ 33 ಚಿನ್ನ ಒಳಗೊಂಡಂತೆ ಒಟ್ಟು 96 ಪದಕಗಳನ್ನು ತನ್ನದಾಗಿಸಿಕೊಂಡಿದೆ. 70 ಚಿನ್ನದ ಪದಕ ಸೇರಿದಂತೆ ಒಟ್ಟು 162 ಪದಕಗಳನ್ನು ಪಡೆದಿರುವ ಸರ್ವಿಸಸ್ ಅಗ್ರಸ್ಥಾನದಲ್ಲಿದೆ. ಕೇವಲ ಎರಡು ಕಂಚಿನ ಪದಕಗಳನ್ನು ಜಯಿಸಿರುವ ಮಿಜೋರಾಮ್ ಪದಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಟೇಬಲ್ ಟೆನಿಸ್; ಶರತ್‌ಗೆ ಚಿನ್ನ: ಶರತ್ ಕಮಲ್ ರಾಷ್ಟ್ರೀಯ ಕ್ರೀಡಾಕೂಟದ ಪುರುಷರ ಟೇಬಲ್ ಟೆನಿಸ್‌ನ ಸಿಂಗಲ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು.ಶನಿವಾರ ನಡೆದ ಫೈನಲ್‌ನಲ್ಲಿ ಶರತ್ ಕಮಲ್ 11-5, 11-9, 11-6, 11-3ರಲ್ಲಿ ತಮಿಳುನಾಡಿನ ಅನಿರ್ಬನ್ ನಂದಿ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ ವಿಭಾಗದಲ್ಲಿ ಮಹಾರಾಷ್ಟ್ರದ ಮಾಧುರಿಕಾ ಪಾಟ್ಕರ್ 11-5, 6-11, 12-10, 12-10, 11-13, 8-11, 11-2ರಲ್ಲಿ ತಮಿಳುನಾಡಿದ ಶಾಮಿನಿ ಕುಮಾರಸೇನ್ ಅವರನ್ನು ಮಣಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ವೀರಧವಳ್ ಖಾಡೆ ಹಾಗೂ ರಿಚಾ ಮಿಶ್ರಾ ಅವರು ಉತ್ತಮ ಅಥ್ಲೀಟ್ ಗೌರವಕ್ಕೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.