ADVERTISEMENT

ರಾಷ್ಟ್ರೀಯ ದಾಖಲೆ ಮುರಿದ ಜಿನ್ಸನ್‌

1500 ಮೀಟರ್ಸ್ ಓಟದಲ್ಲಿ ಐದನೇ ಸ್ಥಾನ ಗಳಿಸಿದ ಭಾರತದ ಅಥ್ಲೀಟ್‌

ಪಿಟಿಐ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
ಭಾರತದ ಜಿನ್ಸನ್ ಜಾನ್ಸನ್ (ಹಿಂದಿನವರು) ಗುರಿಯತ್ತ ಮುನ್ನುಗ್ಗಿದ ರೀತಿ  ಪಿಟಿಐ ಚಿತ್ರ
ಭಾರತದ ಜಿನ್ಸನ್ ಜಾನ್ಸನ್ (ಹಿಂದಿನವರು) ಗುರಿಯತ್ತ ಮುನ್ನುಗ್ಗಿದ ರೀತಿ ಪಿಟಿಐ ಚಿತ್ರ   

ಗೋಲ್ಡ್ ಕೋಸ್ಟ್‌: ದೀರ್ಘ ಕಾಲದ ರಾಷ್ಟ್ರೀಯ ದಾಖಲೆಯನ್ನು ಮುರಿದ ಜಿನ್ಸನ್ ಜಾನ್ಸನ್‌ ಕಾಮನ್‌ವೆಲ್ತ್ ಕೂಟದ 1500 ಮೀಟರ್ಸ್ ಓಟದಲ್ಲಿ
ಮಿಂಚು ಹರಿಸಿದರು. ಫೈನಲ್‌ ಸ್ಪರ್ಧೆಯಲ್ಲಿ ಅವರು ಐದನೇ ಸ್ಥಾನ ಗಳಿಸಿದರು.

12 ಸ್ಪರ್ಧಾಳುಗಳಿದ್ದ ಕಣದಲ್ಲಿ 3:37.86 ನಿಮಿಷಗಳಲ್ಲಿ ಗುರಿ ಮುಟ್ಟಿದ ಜಿನ್ಸನ್‌ 23 ವರ್ಷಗಳ ಹಿಂದೆ ಬಹದ್ದೂರ್ ಪ್ರಸಾದ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಪ್ರಸಾದ್‌ 3:38.00 ನಿಮಿಷಗಳಲ್ಲಿ ಓಡಿ ದಾಖಲೆ ನಿರ್ಮಿಸಿದ್ದರು.

ಅರ್ಪಿಂದರ್ ಸಿಂಗ್‌ಗೆ ನಿರಾಸೆ: ಕಳೆದ ಬಾರಿ ಕಂಚು ಗೆದ್ದಿದ್ದ ಟ್ರಿಪಲ್ ಜಂಪ್‌ ಅಥ್ಲೀಟ್‌ ಅರ್ಪಿಂದರ್‌ ಈ ಬಾರಿ ನಾಲ್ಕನೇ ಸ್ಥಾನ ಗಳಿಸಿದರು. ಕ್ಯಾಮರೂನ್‌ನ ಮಾರ್ಸೆಲ್‌ ಮಯಾರ್ಕ್‌ ವೈಯಕ್ತಿಕ ಉತ್ತಮ ಸಾಧನೆಯ ಮೂಲಕ ಭಾರತದ ಅಥ್ಲೀಟ್‌ಗೆ ನಿರಾಸೆ ಮೂಡಿಸಿದರು.

ADVERTISEMENT

ಪುರುಷರ 4x400 ಮೀಟರ್ಸ್ ರಿಲೆಯಲ್ಲಿ ಭಾರತ ತಂಡದವರ ಸ್ಪರ್ಧೆ ಅರ್ಧಕ್ಕೇ ಮುಗಿಯಿತು. ಎ.ಧಾರುಣ್‌, ಮಹಮ್ಮದ್ ಅನಾಸ್‌,
ರಾಜೀವ್‌ ಆರೋಗ್ಯ ಅವರನ್ನು ಒಳಗೊಂಡ ತಂಡದಲ್ಲಿದ್ದ ಅಮೋಜ್‌ ಜೇಕಬ್‌ ಮೀನಖಂಡದ ಸ್ನಾಯು ಸೆಳೆತದಿಂದಾಗಿ ಕುಸಿದು ಬಿದ್ದರು.

ಮಹಿಳೆಯರ 4x400 ಮೀಟರ್ಸ್ ರಿಲೆ ತಂಡ ಏಳನೇ ಸ್ಥಾನ ಗಳಿಸಿತು. ಸೋನಿಯಾ ಬೈಶ್ಯ, ಎಂ.ಆರ್‌. ಪೂವಮ್ಮ, ಲಕ್ಷ್ಮಿಬಾಯಿ
ಗಾಯಕವಾಡ್‌ ಮತ್ತು ಹಿಮಾ ದಾಸ್ ತಂಡದಲ್ಲಿದ್ದರು.

ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ತಂಡ ತಲಾ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಈ ಬಾರಿಯ ಅಭಿಯಾನವನ್ನು ಮುಗಿಸಿತು.

ಇಂಗ್ಲೆಂಡ್ ಪಾರಮ್ಯ: ಪುರುಷರ ಮತ್ತು ಮಹಿಳೆಯರ ವಿಭಾಗದ 4x100 ಮೀಟರ್ಸ್ ರಿಲೆಯ ಚಿನ್ನ ಇಂಗ್ಲೆಂಡ್ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.