ADVERTISEMENT

ರಾಷ್ಟ್ರೀಯ ವಾಲಿಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಮಂಗಳೂರು: ಮಂಗಳಾ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಇಲ್ಲಿನ ಉರ್ವಾಸ್ಟೋರ್ಸ್ ಬಳಿಯ ಮೈದಾನದಲ್ಲಿ ಫೆಬ್ರುವರಿ  16 ರಿಂದ 19ರವರೆಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.

ಈ ಪಂದ್ಯಾವಳಿಯಲ್ಲಿ ದೇಶದ ಪ್ರತಿಷ್ಠಿತ ಆರು ಪುರುಷರ ತಂಡಗಳು ಹಾಗೂ ಆರು ಮಹಿಳಾ ತಂಡಗಳು ಭಾಗವಹಿಸುತ್ತಿವೆ ಎಂದು ಮಂಗಳಾ ಫ್ರೆಂಡ್ಸ್ ಸರ್ಕಲ್ ಪ್ರಧಾನ ಕಾರ್ಯದರ್ಶಿ ಫ್ರಾಂಕ್ಲಿನ್ ಮೊಂತೇರೊ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜೇತ ತಂಡಗಳಿಗೆ ಹಾಗೂ ಆಟಗಾರರಿಗೆ ವೈಯಕ್ತಿಕ ಬಹುಮಾನವಾಗಿ ಒಟ್ಟು ನಾಲ್ಕು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು. ಪಂದ್ಯಾಟಕ್ಕಾಗಿ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

ಚೆನ್ನೈನ ಭಾರತ ವಾಲಿಬಾಲ್ ಫೆಡರೇಷನ್, ಬೆಂಗಳೂರಿನ ಕರ್ನಾಟಕ ವಾಲಿಬಾಲ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಸಂಸ್ಥೆ ಸಹಕಾರದಿಂದ ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಪುರುಷರ ವಿಭಾಗದಲ್ಲಿ ಉತ್ತರಾಖಂಡ್‌ನ ಒಎನ್‌ಜಿಸಿ, ಚೆನ್ನೈನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಕಸ್ಟಮ್ಸ ಇಂಡಿಯಾ, ಬಿಪಿಸಿಎಲ್ ಕೊಚ್ಚಿನ್ ರಿಫೈನರಿ, ಕೇರಳ ವಿದ್ಯುಚ್ಛಕ್ತಿ ಮಂಡಳಿ, ಇಂಡಿಯನ್ ನೇವಿ, ಕರ್ನಾಟಕ ತಂಡ ಭಾಗವಹಿಸಲಿವೆ.

ಮಹಿಳೆಯರ ವಿಭಾಗದಲ್ಲಿ ಕೇರಳದ ಕೆಎಸಿಬಿ, ಹೈದರಾಬಾದ್‌ನ ಕ್ರೀಡಾ ಪ್ರಾಧಿಕಾರ, ಮೈಸೂರಿನ ಸ್ಪೋರ್ಟ್ಸ್ ಹಾಸ್ಟೆಲ್, ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾಲಯ, ತಲಚೇರಿಯ ಭಾರತ ಕ್ರೀಡಾ ಪ್ರಾಧಿಕಾರದ ತಂಡ, ಮಂಗಳೂರು ವಿಶ್ವವಿದ್ಯಾಲಯ ತಂಡಗಳು ಭಾಗವಹಿಸಲಿವೆ ಎಂದರು.

ಬಾಲ್‌ಬ್ಯಾಡ್ಮಿಂಟನ್
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮೂಡುಬಿದಿರೆಯ ವಿದ್ಯಾಗಿರಿ ಆಳ್ವಾಸ್ ಕಾಲೇಜಿನಲ್ಲಿ ಇದೇ 28ರಿಂದ ಫೆಬ್ರವರಿ 1ರವರೆಗೆ ನಡೆಯಲಿದ್ದು, ಈ ಬಾರಿ 80ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.

ಮಂಗಳೂರು ವಿಶ್ವವಿದ್ಯಾಲಯ, ಆಳ್ವಾಸ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ಸ್ಟಾರ್ ಆಫ್ ಇಂಡಿಯಾ ಗೌರವ ಪಡೆದ ದಕ್ಷಿಣ ರೈಲ್ವೆಯ ನಿಸಾರ್ ಟೂರ್ನಿಯನ್ನು ಉದ್ಘಾಟಿಸುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.