ADVERTISEMENT

ರಾಸ್‌ ಟೇಲರ್‌, ಮೆಕ್ಲಮ್‌ ಶತಕ

ಕ್ರಿಕೆಟ್: ಬೃಹತ್‌ ಮೊತ್ತದತ್ತ ನ್ಯೂಜಿಲೆಂಡ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಡ್ಯುನೆಡಿನ್ (ಎಎಫ್‌ಪಿ): ನಾಯಕ ಬ್ರೆಂಡನ್ ಮೆಕ್ಲಮ್‌ (109) ಹಾಗೂ ರಾಸ್ ಟೇಲರ್ (103) ಅವರ ಅಜೇಯ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ನಲ್ಲಿ ಬೃಹತ್‌ ಮೊತ್ತದತ್ತ ಮುನ್ನಡೆದಿದೆ. ಇಲ್ಲಿನ ಯೂನಿವರ್ಸಿಟಿ ಓವಲ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದ ಮೊದಲ ದಿನವಾದ ಮಂಗಳವಾರದ ಆಟದ ಅಂತ್ಯಕ್ಕೆ ಕಿವೀಸ್ 90 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 367 ರನ್‌ ಕಲೆ ಹಾಕಿದೆ.

ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿತು. ಆರಂಭದಿಂದಲೇ ಉತ್ತಮ ಆಟವಾಡಿದ ಕಿವೀಸ್‌ ಆಟಗಾರರು ವಿಂಡೀಸ್ ನಾಯಕ  ಡರೆನ್‌ ಸಮಿ ಅವರ ನಿರ್ಧಾರವನ್ನು  ತಲೆಕೆಳಗಾ ಗುವಂತೆ ಮಾಡಿದರು. ಆರಂಭಿಕ ಆಟಗಾರರಾದ ಪೀಟರ್‌ ಫುಲ್ಟಾನ್ (61,  145 ಎ, 11ಬೌಂ) ಹಾಗೂ ಹಾಮಿಷ್‌ ರುದರ್‌ಫರ್ಡ್ (62, 83ಎ, 10ಬೌಂ, 1ಸಿ) ಮೊದಲ ವಿಕೆಟ್‌ಗೆ 95 ರನ್‌ ಜೊತೆಯಾಟವಾಡುವ ಮೂಲಕ ಕಿವೀಸ್‌ ಇನಿಂಗ್ಸ್‌ಗೆ ಭದ್ರ ಬುನಾದಿ ಹಾಕಿದರು.

ಊಟದ ವಿರಾಮಕ್ಕೂ ಮುನ್ನ ಶಿಲ್ಲಿಂಗ್‌ಪೋರ್ಡ್ ಉತ್ತಮವಾಗಿ ಆಡುತ್ತಿದ್ದ ರುದರ್‌ಫರ್ಡ್ ವಿಕೆಟ್ ಪಡೆಯುವ ಮೂಲಕ ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು.

ನಂತರ ಬಂದ ರೆಡ್ಮಂಡ್‌ 20 (34 ಎ, 3 ಬೌಂ) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಮೂರನೇ ವಿಕೆಟ್‌ಗೆ ಫುಲ್ಟಾನ್ ಜೊತೆಗೂಡಿದ ರಾಸ್‌ ಟೇಲರ್ 68 ರನ್‌ಗಳನ್ನು ಸೇರಿಸಿದರು. ಫುಲ್ಟಾನ್‌ ಔಟಾದ ಬಳಿಕ ಜೊತೆಗೂಡಿದ ಟೇಲರ್‌ ಹಾಗೂ ಮೆಕ್ಲಮ್‌ ವಿಂಡೀಸ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು.

 ವೇಗವಾಗಿ ರನ್‌ ಪೇರಿಸಿದ ಮೆಕ್ಲಮ್‌ 122 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ ಮೂರು ಸಿಕ್ಸರ್‌ ಸಿಡಿಸಿದ್ದಾರೆ. ಟೇಲರ್‌ 157 ಎಸೆತಗಳನ್ನು ಎದುರಿಸಿದ್ದು  13ಬೌಂಡರಿ ಗಳಿಸಿದ್ದಾರೆ. ಈ ಆಟಗಾರರು ಮುರಿಯದ ನಾಲ್ಕನೇ ವಿಕೆಟ್‌ಗೆ 182 ರನ್‌ ಕಲೆಹಾಕುವ ಮೂಲಕ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು ಬೃಹತ್‌ ಮೊತ್ತ ದಾಖಲಿಸುವ ಸೂಚನೆ ನೀಡಿದ್ದಾರೆ.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ ಮೊದಲ ಇನಿಂಗ್ಸ್, 90 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 367 (ಪೀಟರ್‌ ಫುಲ್ಟಾನ್ 61, ಹಾಮಿಷ್‌ ರುದರ್‌ಫರ್ಡ್ 62, ರಾಸ್‌ ಟೇಲರ್ ಬ್ಯಾಟಿಂಗ್ 103, ಬ್ರೆಂಡನ್‌ ಮೆಕ್ಲಮ್‌ ಬ್ಯಾಟಿಂಗ್ 109,  ಡರೆನ್‌ ಸಮಿ 68ಕ್ಕೆ 1)

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.