ADVERTISEMENT

ರೆಫರಿ ಮನಗೆದ್ದ ರಾಜನಗರ ಕ್ರೀಡಾಂಗಣ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST

ಹುಬ್ಬಳ್ಳಿ: `ಇಂತಹ ಮೈದಾನ ಮತ್ತು ಆಯೋಜನೆಯನ್ನು ನಾನು ನೋಡಿಲ್ಲ. ಈ ಮೈದಾನದಲ್ಲಿ ಮುಂದೆ ಉನ್ನತ ದರ್ಜೆಯ ಅತ್ಯುತ್ತಮ ಪಂದ್ಯಗಳು ನಡೆಯುವುದು ಖಚಿತ. ಬಿಸಿಸಿಐ (ಭಾರತೀಯ ಕ್ರಿಕೆಟ್ ಮಂಡಳಿ) ಆಶಯಗಳನ್ನು ಪೂರೈಸುವ ಎಲ್ಲ ಗುಣಗಳು ಈ ಮೈದಾನದಲ್ಲಿವೆ'-

ಕರ್ನಾಟಕ ಮತ್ತು ಹರಿಯಾಣ ನಡುವಿನ ರಣಜಿ ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್ ಪಾಟೀಲ್ ಅವರ ಮೆಚ್ಚುಗೆಯ ಮಾತುಗಳಿವು. ಶನಿವಾರ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು ರಾಜನಗರದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಿರ್ಮಿಸಿರುವ ಹೊಸ ಕ್ರೀಡಾಂಗಣದ ಬಗ್ಗೆ ಮೆಚ್ಚುಗೆ ಸುರಿಮಳೆಯನ್ನೇ ಸುರಿಸಿದರು.

`ಬೆಟ್ಟದ ಸೌಂದರ್ಯದ ಹಿನ್ನೆಲೆಯಲ್ಲಿ ಇರುವ ಕ್ರೀಡಾಂಗಣ ನೋಡಲು ಬಹಳ ಚೆನ್ನಾಗಿದೆ. ಅಲ್ಲದೇ ಭವಿಷ್ಯದಲ್ಲಿ ಪರಿಪೂರ್ಣ ಕ್ರೀಡಾಂಗಣವನ್ನಾಗಿ ರೂಪಿಸುವ ಎಲ್ಲ ಅವಕಾಶಗಳೂ ಇಲ್ಲಿವೆ. ಅದರಲ್ಲೂ ಇಲ್ಲಿಯ ಆಯೋಜಕರು ಪ್ರದರ್ಶಿಸುತ್ತಿರುವ ಆಸಕ್ತಿ, ಸಾಂಘಿಕ ಶಕ್ತಿಯ ಗುಣಗಳು ಅದ್ಭುತ. ಇದೊಂದು ಒಳ್ಳೆಯ ತಂಡ. ಬಿಸಿಸಿಐನ ಮೂಲ ಆಶಯಗಳಲ್ಲಿ ಒಂದಾದ ಬಿ ದರ್ಜೆಯ ನಗರಗಳಲ್ಲಿ ಕ್ರಿಕೆಟ್ ಬೆಳವಣಿಗೆ ಮತ್ತು ಜನರಿಗೆ ಆಟದ ಮನರಂಜನೆಯನ್ನು ತಲುಪಿಸುವ ಕಾರ್ಯ ಇಲ್ಲಿ ಚೆನ್ನಾಗಿ ಆಗುತ್ತಿದೆ' ಎಂದರು.

`ಈ ದಿನದವರೆಗೆ ಎಲ್ಲವೂ ಅದ್ಭುತವಾಗಿ ಆಯೋಜನೆಗೊಂಡಿದೆ. ನಾನು ಹಲವಾರು ಊರುಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಇಲ್ಲಿಯ ಅನುಭವವೇ ವಿಶಿಷ್ಟವಾಗಿದೆ. ನಿನ್ನೆ (ಶುಕ್ರವಾರ) ನಾನು ಕೆಲವು ಸಮಸ್ಯೆಗಳ ಬಗ್ಗೆ ಹೇಳಿದಾಗ, ಒಂದೆರಡು ತಾಸುಗಳಲ್ಲಿಯೇ ಅವುಗಳಿಗೆ ಸಂಪೂರ್ಣ ಪರಿಹಾರವ್ನು ಇಲ್ಲಿಯ ಸಂಘಟಕರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಮೈದಾನಕ್ಕೆ ಉನ್ನತ ದರ್ಜೆಯ ಪಂದ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗಬೇಕು. ಹಂತಹಂತವಾಗಿ ಉಳಿದೆಲ್ಲ ಸೌಲಭ್ಯಗಳ ನಿರ್ಮಾಣವೂ ನಡೆಯಬೇಕು' ಎಂದು ಮುಂಬೈನ ಸಂಜಯ್ ಪಾಟೀಲ್ ಮುಕ್ತ ಕಂಠದಿಂದ ಶ್ಲಾಘಿಸಿದರು.
`ಇಲ್ಲಿಯ ಪಿಚ್ ಕೂಡ ಅದ್ಭುತವಾಗಿದೆ. ಉತ್ತಮ ಕ್ರಿಕೆಟ್ ಪಿಚ್ ಇದು' ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.